

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ ಬಜೆಟ್ ನಲ್ಲಿ ಇರಾನ್ ನ ಚಬಹಾರ್ ಬಂದರು ನಿರ್ಮಾಣಕ್ಕೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಇರಾನ್‌ನ ಮೇಲೆ ಅಮೆರಿಕದ ಹೊಸ ನಿರ್ಬಂಧಗಳ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕಳೆದ ಕೆಲವು ವರ್ಷಗಳಲ್ಲಿ ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮೆಗಾ ಸಂಪರ್ಕ ಯೋಜನೆಗೆ ವಾರ್ಷಿಕ 100 ಕೋಟಿ ರೂ. ಮೀಸಲಿಡಲಾಗಿತ್ತು. ಚಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ.
ಭಾರತವು 2024–25ರಲ್ಲಿ ಈ ಯೋಜನೆಗೆ 400 ಕೋಟಿ ರೂ. ಮೀಸಲಿಟ್ಟಿತ್ತು. ಬಳಿಕ 2025–26ರ ಬಜೆಟ್ ನಲ್ಲಿ ಅಂದಾಜು 100 ಕೋಟಿ, ತದನಂತರ ಅದನ್ನು 400 ಕೋಟಿಗೆ ಹೆಚ್ಚಿಸಿತ್ತು. ಆದರೆ 2026-27 ರಲ್ಲಿ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೆರಿಕ, ಇರಾನ್ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿತ್ತು. ಆದರೆ ಚಬಹಾರ್ ಬಂದರು ಯೋಜನೆಯಲ್ಲಿ ಭಾರತಕ್ಕೆ ಆರು ತಿಂಗಳ ವಿನಾಯಿತಿ ನೀಡಿತ್ತು. ಅದು ಏಪ್ರಿಲ್ 26ಕ್ಕೆ ಮುಕ್ತಾಯವಾಗಲಿದೆ.
ಚಬಹಾರ್ ಬಂದರು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಅಮೆರಿಕದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಎಂದು ಕಳೆದ ತಿಂಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು. ಟ್ರಂಪ್ ಆಡಳಿತವು ಇರಾನ್ ಜೊತೆಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇಕಡಾ 25 ರಷ್ಟು ಹೆಚ್ಚುವರಿ ಸುಂಕವನ್ನು ಬೆದರಿಕೆ ಹಾಕಿದ ನಂತರ ಭಾರತವು ಯೋಜನೆಗೆ ಸಂಬಂಧಿಸಿದ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತಿದೆ ಎಂದು ಅವರು ತಿಳಿಸಿದ್ದರು.
ಇರಾನ್ ಜೊತೆಗೆ ಸಂಪರ್ಕ ಮತ್ತು ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಚಬಹಾರ್ ಬಂದರನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಚಬಹಾರ್ ಬಂದರನ್ನು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC)ನ ಅವಿಭಾಜ್ಯ ಅಂಗವನ್ನಾಗಿ ಮಾಡಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ.
INSTC ಭಾರತ, ಇರಾನ್, ಅಫ್ಘಾನಿಸ್ತಾನ, ಅರ್ಮೇನಿಯಾ, ಅಜರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್ ನಡುವೆ ಸರಕು ಸಾಗಣೆಗಾಗಿ 7,200-ಕಿಮೀ ಉದ್ದದ ಬಹು-ಮಾರ್ಗ ಸಾರಿಗೆ ಯೋಜನೆಯಾಗಿದೆ.
Advertisement