

ಅಲಿಗಢ (ಉತ್ತರ ಪ್ರದೇಶ): ಕ್ರಿಕೆಟಿಗ ರಿಂಕು ಸಿಂಗ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಯಾವುದೇ ಆರ್ಥಿಕ ವಂಚನೆ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
'ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ರಿಂಕು ಸಿಂಗ್ ಈ ವಾರದ ಆರಂಭದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು' ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಹೇಳಿದ್ದಾರೆ.
ಇದರ ಬೆನ್ನಲ್ಲೇ, ಕ್ರಿಕೆಟಿಗನ ಸಹೋದರ ಸೋನು ಸಿಂಗ್ ಬುಧವಾರ ನಗರದ ಸೈಬರ್ ಸೆಲ್‌ಗೆ ಲಿಖಿತ ದೂರು ಸಲ್ಲಿಸಿ, ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಅಲಿಗಢದವರಾದ ರಿಂಕು ಸಿಂಗ್, ಕ್ರಿಕೆಟ್‌ನಲ್ಲಿ ನಿರತರಾಗಿದ್ದರಿಂದ ಕಳೆದ ಹಲವು ತಿಂಗಳುಗಳಿಂದ ತಮ್ಮ ಫೇಸ್‌ಬುಕ್ ಖಾತೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿರಲಿಲ್ಲ.
'ಖಾತೆಯನ್ನು ನಿಖರವಾಗಿ ಯಾವಾಗ ಹ್ಯಾಕ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಸೈಬರ್ ಅಪರಾಧ ವಿಭಾಗವು ಈ ವಿಷಯದ ಬಗ್ಗೆ ವಿವರವಾದ ತನಿಖೆ ಪ್ರಾರಂಭಿಸಿದೆ' ಎಂದು ಎಸ್‌ಎಸ್‌ಪಿ ಕುಮಾರ್ ಹೇಳಿದರು.
ಹ್ಯಾಕಿಂಗ್‌ನ ಮೂಲವನ್ನು ಪತ್ತೆಹಚ್ಚಲು ಮತ್ತು ಆಪಾದಿತ ಹ್ಯಾಕಿಂಗ್ ಯಾವುದೇ ಆರ್ಥಿಕ ನಷ್ಟ ಅಥವಾ ದುರುಪಯೋಗಕ್ಕೆ ಕಾರಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement