'ನೀವು ಅದ್ಭುತ ಕಥೆಗಾರ್ತಿ' ಎಂದ ಜಯಾ ಬಚ್ಚನ್ ಗೆ ತಾಳ್ಮೆ ಕಳೆದುಕೊಂಡು ತಿರುಗೇಟು ಕೊಟ್ಟ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯಲ್ಲಿ ವಾಗ್ವಾದ-Video

ಚಿತ್ರರಂಗಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ಮಾಡಿದ ಮನವಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Jaya Bachchan and Nirmala Sitharaman
ಜಯಾ ಬಚ್ಚನ್, ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಚಿತ್ರರಂಗದ ನಿರ್ವಹಣೆ ಕುರಿತಾಗಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮಾಡಿದ ಟೀಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದು ರಾಜ್ಯಸಭೆಯಲ್ಲಿ ಎಲ್ಲರನ್ನೂ ಸ್ಥಬ್ಧ ಮಾಡಿತು.

ಚಿತ್ರರಂಗಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ಮಾಡಿದ ಮನವಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

“ಗೌರವಾನ್ವಿತ ಸದಸ್ಯೆ ಜಯಾ ಬಚ್ಚನ್ ಅವರು ಚಿತ್ರರಂಗವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಭಾವೋದ್ರಿಕ್ತವಾಗಿ ಮಾತನಾಡಿದರು. ಜಿಎಸ್‌ಟಿ ವಿಚಾರ ಬಿಟ್ಟುಬಿಟ್ಟರೂ, ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳು ಮುಚ್ಚಲಾಗುತ್ತಿವೆ ಮತ್ತು ಮನರಂಜನಾ ತೆರಿಗೆಯಲ್ಲಿ ಯಾವುದೇ ಕಡಿತವಿಲ್ಲ ಎಂದು ಹೇಳಿದರು. ನಾನು ಸ್ಪಷ್ಟಪಡಿಸಲು ಬಯಸುತ್ತೇನೆ—ಕೇಂದ್ರ ಸರ್ಕಾರ ಮನರಂಜನಾ ತೆರಿಗೆ ವಿಧಿಸುವುದಿಲ್ಲ ಎಂದು ಹೇಳಿದರು.

ಜಿಎಸ್‌ಟಿ ಜಾರಿಗೆ ಮುನ್ನ ರಾಜ್ಯಗಳು 100% ವರೆಗೆ ಮನರಂಜನಾ ತೆರಿಗೆ ವಿಧಿಸುತ್ತಿದ್ದವು. ಜಿಎಸ್‌ಟಿ ವ್ಯವಸ್ಥೆಯಡಿ, 100 ರೂಪಾಯಿಗಿಂತ ಹೆಚ್ಚು ಬೆಲೆಯ ಚಿತ್ರ ಟಿಕೆಟ್‌ಗಳ ಮೇಲೆ ಈಗ 28% ಬದಲಿಗೆ 18% ತೆರಿಗೆ ವಿಧಿಸಲಾಗುತ್ತಿದೆ ಎಂದರು.

“100 ರೂಪಾಯಿಗಿಂತ ಕಡಿಮೆ ಬೆಲೆಯ ಟಿಕೆಟ್‌ಗಳ ಮೇಲೆ ಜಿಎಸ್‌ಟಿಯನ್ನು 18%ರಿಂದ 12%ಕ್ಕೆ ಇಳಿಸಲಾಗಿದೆ. ಥಿಯೇಟರ್ ಒಳಗಿನ ಆಹಾರ ಮತ್ತು ಪಾನೀಯಗಳ ಮೇಲೆ, ಪಾಪ್‌ಕಾರ್ನ್ ಸೇರಿ, ಕೇವಲ 5% ಜಿಎಸ್‌ಟಿ ಮಾತ್ರ ಇದೆ ಎಂದು ಹೇಳಿದರು.

ಇದಕ್ಕೂ ಮೊದಲು, ಸರ್ಕಾರ ಚಿತ್ರರಂಗವನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಆದರೆ ಯಾವುದೇ ಸಹಾಯ ನೀಡುತ್ತಿಲ್ಲ ಎಂದು ಜಯಾ ಬಚ್ಚನ್ ಆರೋಪಿಸಿದ್ದರು.

ರಾಜ್ಯಸಭೆಯಲ್ಲಿ ಮನರಂಜನಾ ಕ್ಷೇತ್ರದ ಬಜೆಟ್ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರದ ಮಧ್ಯೆ ಹಸ್ತಕ್ಷೇಪ ಮಾಡಿದ ಜಯಾ ಬಚ್ಚನ್, ಸಚಿವೆಯನ್ನುದ್ದೇಶಿಸಿ “ನೀವು ಒಬ್ಬ ಒಳ್ಳೆಯ ಕಥೆಗಾರ್ತಿ” ಎಂದು ಕರೆದಷ್ಟೇ ಅಲ್ಲದೆ, ಟಿಕೆಟ್ ದರ ಏರಿಕೆಗೆ ಕಾರಣವಾದ ತೆರಿಗೆ ಬಗ್ಗೆ ಪ್ರಶ್ನೆ ಎತ್ತಿದರು.

“ನೀವು ತುಂಬಾ ಉತ್ತಮ ಉತ್ತರಗಳನ್ನು ನೀಡಿದ್ದಾರೆ. ನೀವು ಒಳ್ಳೆಯ ಕಥೆಗಾರ್ತಿ. ನಮಗೆ ಇದು ಒಳ್ಳೆಯ ಮನರಂಜನೆ. ನಾನು ಮನರಂಜನಾ ಕ್ಷೇತ್ರ ಮತ್ತು ಟಿಕೆಟ್ ದರಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಅತಿ ಹೆಚ್ಚು ತೆರಿಗೆ ಪಾವತಿಸುವ ಕ್ಷೇತ್ರ,” ಎಂದರು.

ಕೇಂದ್ರ ಬಜೆಟ್ 2026ರಲ್ಲಿ ಮನರಂಜನಾ ಕ್ಷೇತ್ರಕ್ಕೆ ಏನಾದರೂ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸುತ್ತಿದ್ದ ವೇಳೆ ಜಯಾ ಬಚ್ಚನ್ ಹಸ್ತಕ್ಷೇಪ ಮಾಡಿದ್ದರು.

ಸಮಾಜವಾದಿ ಪಕ್ಷದ ಆರೋಪವನ್ನು ತಳ್ಳಿಹಾಕಿದ ಹಣಕಾಸು ಸಚಿವೆ, ಬಜೆಟ್ ಮನರಂಜನಾ ಕ್ಷೇತ್ರಕ್ಕೆ “ನಿರಂತರ ಗಮನ” ನೀಡಿದೆ ಎಂದು ಹೇಳಿದರು. ಕಂಟೆಂಟ್ ಕ್ರಿಯೇಟರ್ಸ್, ಅನಿಮೇಟರ್‌ಗಳು ಮತ್ತು ದೃಶ್ಯ ಕಲಾವಿದರ ಕೌಶಲ್ಯಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ನಿರಂತರ ಗಮನ ನೀಡಲಾಗಿದೆ. ಅನಿಮೇಶನ್, ವಿಸುವಲ್ ಎಫೆಕ್ಟ್ಸ್ ಮತ್ತು ಕಂಟೆಂಟ್ ಕ್ರಿಯೇಟ್ ಕ್ಷೇತ್ರವನ್ನು ಬೆಳವಣಿಗೆಯ ಎಂಜಿನ್ ಎಂದು ಗುರುತಿಸಲಾಗಿದೆ. ಭಾರತೀಯ ಕ್ರಿಯೇಟಿವ್ ಟೆಕ್ನಾಲಜೀಸ್ ಸಂಸ್ಥೆ ದೇಶದಾದ್ಯಂತ 1,500 ಶಾಲೆಗಳಲ್ಲಿ ವಿಷಯ ಸೃಷ್ಟಿಕರ್ತ ಲ್ಯಾಬ್‌ಗಳನ್ನು ಸ್ಥಾಪಿಸಲು ಹಾಗೂ ಕೌಶಲ್ಯ ತರಬೇತಿ ನೀಡಲಿದೆ. 2030ರೊಳಗೆ 20 ಲಕ್ಷ ಪರಿಣಿತರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ವಿಷಯ ಸೃಷ್ಟಿ ಅತ್ಯಂತ ಕೌಶಲ್ಯಾಧಾರಿತ ಕ್ಷೇತ್ರ ಎಂದು ಹೇಳಿದರು.

ಇದಲ್ಲದೆ, ವಿನ್ಯಾಸ, ವಸ್ತ್ರ, ಸೆಟ್‌ಗಳು ಮತ್ತು ದೃಶ್ಯ ಅಲಂಕಾರ ಕ್ಷೇತ್ರಗಳಲ್ಲಿ ಕೌಶಲ್ಯ ಕೊರತೆಯನ್ನು ನಿವಾರಿಸಲು ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆಗಳ (NID) ಶಾಖೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂಬೈನಲ್ಲಿ ನಡೆದ ವರ್ಲ್ಡ್ ಆಡಿಯೋ-ವಿಜುವಲ್ ಮತ್ತು ಎಂಟರ್ಟೈನ್ಮೆಂಟ್ ಸಮಿಟ್ (WAVES) 2025ನ್ನೂ ಅವರು ಉಲ್ಲೇಖಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com