

ನವದೆಹಲಿ: ಟೆಹ್ರಾನ್‌ನಲ್ಲಿ ನಡೆದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಭಾರತಕ್ಕೆ ಸೋಮವಾರ ಇರಾನ್ ತನ್ನ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಇದು ಉಭಯ ದೇಶಗಳ ನಡುವೆ "ಪರಸ್ಪರ ಗೌರವದ ಪ್ರಬಲ ಅಭಿವ್ಯಕ್ತಿ" ಎಂದು ಇಸ್ಲಾಮಿಕ್ ಗಣರಾಜ್ಯದ ಭಾರತದ ರಾಯಭಾರ ಕಚೇರಿ ಬಣ್ಣಿಸಿದೆ. ಇದು ಎರಡೂ ದೇಶಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಭಾರತದ ಪರವಾಗಿ ಬಿಹಾರ ಗವರ್ನರ್ ಲೆಫ್ಟಿನೆಂಟ್ ಜನರಲ್(ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ಫೆಬ್ರವರಿಯಲ್ಲಿ ಟೆಹ್ರಾನ್‌ನಲ್ಲಿ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾದ ಇರಾನಿನ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿತು.
ಇರಾನ್ ಹೇಳಿದ್ದೇನು
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿವಹಿಸಿದ ಬಗ್ಗೆ ಎಕ್ಸ್ ನಲ್ಲಿ ದೀರ್ಘ ಪೋಸ್ಟ್ ಹಾಕಿರುವ ಇರಾನ್ ರಾಯಭಾರ ಕಚೇರಿಯು, ಖಮೇನಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ, ಭಾರತ ಸರ್ಕಾರ ಮತ್ತು ಭಾರತದ ಜನತೆ ತೋರಿದ ಬೆಂಬಲ ಹಾಗೂ ಭಾಗಿಯಾಗಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.
ಭಾರತದ ರಾಜಕೀಯ ನಾಯಕರು, ಸಂಸದರು, ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ವಿವಿಧ ಧರ್ಮಗಳ ಪ್ರತಿನಿಧಿಗಳು ಈ ಶೋಕಾಚರಣೆಯ ಅಂತ್ಯಕ್ರಿಯೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಉಭಯ ದೇಶಗಳ ನಡುವಿನ ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದು ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಭಾರತ ತೋರಿದ ಈ ಸ್ನೇಹ, ಸಹಾನುಭೂತಿ ಮತ್ತು ಹೃತ್ಪೂರ್ವಕ ಗೌರವದ ನಡೆಯನ್ನು ಇರಾನ್ ಜನತೆ ಎಂದಿಗೂ ಮರೆಯುವುದಿಲ್ಲ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ನಡುವಿನ ಶಾಶ್ವತ ಬಾಂಧವ್ಯಕ್ಕೆ ಇದು ಅಮೂಲ್ಯ ಸಾಕ್ಷಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದೆ.