

ನವದೆಹಲಿ: ಬಾಲಿವುಡ್ ನಟ ದಿಲ್ಜಿತ್ ದೋಸಾಂಜ್ ಅಭಿನಯದ ಸತ್ಲುಜ್ ಚಿತ್ರದ ಕಂಟೆಂಟ್ ಪರಿಶೀಲಿಸಲು ಕೇಂದ್ರ ಸರ್ಕಾರ ರಚಿಸಿದ ಸಮಿತಿಯು ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಬಿಡುಗಡೆಯ ಮೇಲಿನ ನಿಷೇಧವನ್ನು ಮುಂದುವರಿಸಲು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದೆ.
ಹನಿ ಟ್ರೆಹಾನ್ ನಿರ್ದೇಶನದ ಈ ಚಿತ್ರವು 1984 ಮತ್ತು 1994 ರ ನಡುವೆ ಪಂಜಾಬ್‌ನಲ್ಲಿ ಸಾವಿರಾರು ಅಪರಿಚಿತ ಶವಗಳ ದಹನದ ತನಿಖೆ ನಡೆಸಿದ ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತವಾಗಿದೆ. ಅಲ್ಲದೇ 1995 ರಲ್ಲಿ ಪಂಜಾಬ್ ಪೊಲೀಸರು ಆತನನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಜುಲೈ 3 ರಂದು ಈ ಚಿತ್ರ ಬಿಡುಗಡೆಯಾಗಿತ್ತು.
ಆದರೆ ಇದಾದ ಎರಡು ದಿನಗಳ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭದ್ರತಾ ಕಳವಳವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ OTT ಪ್ಲಾಟ್‌ಫಾರ್ಮ್ ZEE5 ನಿಂದಲೂ ಚಿತ್ರವನ್ನು ತೆಗೆದುಹಾಕಲಾಯಿತು.ತದನಂತರ ಸಚಿವಾಲಯ. ಚಿತ್ರದ ವಿವರವಾದ ಪರಿಶೀಲನೆ ಮತ್ತು ಭವಿಷ್ಯದ ಕ್ರಮವನ್ನು ಶಿಫಾರಸು ಮಾಡಲು ಐಟಿ ನಿಯಮಗಳು 2021 ರ ಅಡಿಯಲ್ಲಿ ಅಂತರ-ಇಲಾಖೆ ಸಮಿತಿಯನ್ನು (IDC) ಸ್ಥಾಪಿಸಿತು.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರೆ, ಶಿರೋಮಣಿ ಅಕಾಲಿ ದಳವು ರಾಜ್ಯಾದ್ಯಂತ ಚಿತ್ರವನ್ನು ಪ್ರದರ್ಶಿಸುವ ಯೋಜನೆಯನ್ನು ಘೋಷಿಸಿತ್ತು. ಇದರೊಂದಿಗೆ ಪಂಜಾಬ್‌ನಲ್ಲಿ ಈ ವಿಷಯವು ರಾಜಕೀಯ ಸ್ವರೂಪ ಪಡೆದುಕೊಂಡಿತು. ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಚಿತ್ರದ ಮೇಲಿನ ನಿಷೇಧವು ಸಮರ್ಥನೀಯವಾಗಿದೆ ಎಂದು ಸಮಿತಿಯು ಗಮನಸೆಳೆದಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ಸೇರಿದಂತೆ ಆನ್‌ಲೈನ್ ವಿಷಯವನ್ನು ನಿರ್ಬಂಧಿಸಲು ಸೆಕ್ಷನ್ 69A ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಸಮಿತಿಯು ಮಾಹಿತಿ ಮತ್ತು ಪ್ರಸಾರ, ಗೃಹ ವ್ಯವಹಾರಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿದೇಶಾಂಗ ವ್ಯವಹಾರಗಳು, ರಕ್ಷಣೆ ಮತ್ತು ಕಾನೂನು ಮತ್ತು ನ್ಯಾಯ, ಇತರ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.
ಉಗ್ರಗಾಮಿ ವರ್ಷಗಳಲ್ಲಿ ಪಂಜಾಬ್‌ನಲ್ಲಿ ಭದ್ರತಾ ಪಡೆಗಳು ಮಾಡಿದ ದೌರ್ಜನ್ಯಗಳನ್ನು ಎತ್ತಿ ತೋರಿಸುವಾಗ ಉಗ್ರಗಾಮಿಗಳ ಕೃತ್ಯಗಳು ಮಂಕಾಗಿದ್ದು, ಚಿತ್ರದ ನಿರೂಪಣೆಯು ಸಮತೋಲನದಲ್ಲಿಲ್ಲ ಎಂದು ಸಮಿತಿ ಗಮನಿಸಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಭಾಗ III, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ವ್ಯಾಪ್ತಿಗೆ ಬರದ OTT ವಿಷಯವನ್ನು ಮೇಲ್ವಿಚಾರಣೆ ಮಾಡಲು ಐಟಿ ಕಾಯ್ದೆಯ ಸೆಕ್ಷನ್ 69A ಅನ್ನು ಅನ್ವಯಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅಧಿಕಾರ ನೀಡುತ್ತದೆ.