ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಪಕೋಡಾ ತಿನ್ನುವುದು ಅತಿರೇಕ: ನಿಮ್ಮ ಸಂಸದರಿಗೆ ಬುದ್ದಿ ಹೇಳಿ; ಸೋನಿಯಾಗೆ ಎಚ್‌ಡಿ ದೇವೇಗೌಡ ಪತ್ರ

ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆ ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Sonia gandhi and hd devegowda
ಸೋನಿಯಾ ಗಾಂಧಿ ಮತ್ತು ಎಚ್.ಡಿ ದೇವೇಗೌಡ
Updated on

ನವದೆಹಲಿ: ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳಿಂದ, ಅದರಲ್ಲಿಯೂ ಕಾಂಗ್ರೆಸ್ ಸದಸ್ಯರಿಂದ ಕಲಾಪಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿದ್ದು, ಈ ಬಗ್ಗೆ ತಿಳಿವಳಿಕೆ ಹೇಳಬೇಕು ಎಂದು ಒತ್ತಾಯಿಸಿ ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಅದರಲ್ಲಿಯೂ ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗೂ ಆವರಣದಲ್ಲಿ ಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು, ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆ ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ನಾಯಕನ ಕರ್ತವ್ಯ ಸುಲಭವಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರ ಎದುರು ಬೆಟ್ಟದಷ್ಟು ಸವಾಲುಗಳು ಇರುತ್ತವೆ. ಜನರ ಸಂಕಷ್ಟಗಳ ಬಗ್ಗೆ ಕಾಲ ಕಾಲಕ್ಕೆ ಸರ್ಕಾರದ ಗಮನಕ್ಕೆ ತರಬೇಕಾಗುತ್ತದೆ. ಹಾಗಿದ್ದರೂ ಪ್ರತಿಭಟನೆ ಮಾಡುವ ಸಂದರ್ಭ ಬಂದರೆ ಅದಕ್ಕೆ ತನ್ನದೇ ಆದ ರೀತಿನೀತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಪೀಠಕ್ಕೆ ಅಗೌರವ ತೋರುವ, ಅಪಚಾರ ಎಸಗುವ ಕೆಲಸ ಆಗಬಾರದು. ಸಂಸದೀಯ ನಿಯಮ, ಕಟ್ಟುಪಾಡುಗಳನ್ನು ಮೀರದೆ ಕಾರ್ಯ ನಿರ್ವಹಣೆ ಮಾಡುವುದರಲ್ಲಿ ವಿರೋಧ ಪಕ್ಷ ನಾಯಕನ ಯಶಸ್ಸು ಅಡಗಿದೆ ಎಂದು ಅವರು ಹೇಳಿದ್ದಾರೆ.

ಸಂಸತ್ತಿನ ಮೆಟ್ಟಿಲುಗಳ ಮೇಲೆ ಚಹಾ ಸೇವನೆ ಮಾಡುವುದು ಸರಿಯಾದ ನಡವಳಿಕೆ ಅಲ್ಲ. ಈ ಹಿಂದೆ ವಿರೋಧ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಗೌರವಿಸಿ, ಸಂಯಮದಿಂದ ವರ್ತಿಸಿದ್ದವು. ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಬಿಸ್ಕತ್ತು, ಪಕೋಡಾ ತಿನ್ನುವುದು ಅತಿರೇಕದ ಕ್ರಮಗಳು. ಇವು ಅನುಚಿತ ಎಂದು ಗೌಡರು ಟೀಕಿಸಿದ್ದಾರೆ.

Sonia gandhi and hd devegowda
Watch | ಸಂಸತ್ ಮುಂದೆಯೇ ಟೀ ಕುಡೀತಾರೆ, ಸಮೋಸಾ ತಿನ್ತಾರೆ; ದೇಶಕ್ಕೇ ಅವಮಾನ- ರಾಹುಲ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ತಮ್ಮ 65 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಮಾಜಿ ಪ್ರಧಾನಿಗಳು; ನನ್ನ ರಾಜಕೀಯ ಜೀವನದ ತೊಂಬತ್ತರಷ್ಟು ದೀರ್ಘಾವಧಿಯ ಕಾಲವನ್ನು ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ. ನೀವು ಕೂಡ ಹೆಚ್ಚು ಕಾಲ ವಿರೋಧ ಪಕ್ಷದಲ್ಲಿಯೇ ಇದ್ದೀರಿ. ಪ್ರತಿಪಕ್ಷದ ಹೊಣೆಗಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ತಮಗೆ ಅರಿವಿದೆ. ವಿರೋಧ ಪಕ್ಷಗಳು ತಮ್ಮ ವಿರೋಧವನ್ನು ತೋರಿಸಬಹುದು, ಆದರೆ ಅದು ನಿಯಮಗಳು, ಸಂಪ್ರದಾಯಗಳು ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರ ವರ್ತನೆ ನನಗೆ ಬಹಳ ನೋವುಂಟು ಮಾಡಿದೆ. ಪ್ರತಿಪಕ್ಷದಲ್ಲಿ ಇದ್ದರೂ ಸಂಸತ್ತಿನ ಘನತೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದೇನೆ ಎಂದು ಮಾಜಿ ಪ್ರಧಾನಿಗಳು ಪತ್ರದ ಮೂಲಕ ತಿಳಿಸಿದ್ದಾರೆ.

ಪ್ರತಿಪಕ್ಷ ಸದಸ್ಯರು, ಅದರಲ್ಲಿಯೂ ತಮ್ಮ ಪಕ್ಷದ ಸದಸ್ಯರು ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡು ಸಂಸದೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸಿದ್ದೇ. ಅದು ಆಗಲಿಲ್ಲ. ನಿಮ್ಮ ಸದಸ್ಯರು ಸಂಸತ್ತಿನ ಆವರಣದಲ್ಲಿ ಮತ್ತು ಸಂಸತ್ತಿನ ಒಳಗೆ ಪ್ರಚೋದನಾತ್ಮಕ ರೀತಿಯಲ್ಲಿ ವರ್ತಿಸಿ, ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ತಮಗೆ ಪತ್ರ ಬರೆಯುವ ಸನ್ನಿವೇಶ ಸೃಷ್ಟಿಯಾಯಿತು ಎಂದು ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.

ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ.ಆರ್. ಅಂಬೇಡ್ಕರ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮುಂತಾದವರು ಹಾಕಿಕೊಟ್ಟ ಬುನಾದಿ ಹಾಗೂ ಅವರ ಮಾರ್ಗದರ್ಶನದ ಮೇಲೆ ಪರಂಪರೆಯೂ ನಿರ್ಮಿತವಾಗಿದೆ. ನನ್ನ ಸುದೀರ್ಘ ಸಂಸದೀಯ ಅನುಭವದಲ್ಲಿ ಇತ್ತೀಚೆಗೆ ಕಂಡಂತಹ ಅವ್ಯವಸ್ಥೆ ಮತ್ತು ಅಡಚಣೆಯನ್ನು ನಾನು ಎಂದಿಗೂ ನೋಡಿಲ್ಲ.

ನನ್ನ ಇಡೀ ರಾಜಕೀಯ ಜೀವನದಲ್ಲಿ ಸಂಸತ್ತಿನ ಪ್ರಚೋದನ್ಮಕವಾಗಿ ವರ್ತಿಸುವುದು, ಪ್ರತಿಭಟಿಸುವುದು, ಸದನದ ಬಾವಿಗೆ ಇಳಿದು ಕೂಗುವುದನ್ನು ಮಾಡಿಲ್ಲ. ಉತ್ತಮ ಸಂಸದೀಯ ಸಂಸ್ಕೃತಿಯನ್ನು ನಮ್ಮ ಪ್ರಜಾಪ್ರಭುತ್ವದ ಹಿರಿಯರು ನಮಗೆ ಕಲಿಸಿದ್ದಾರೆ ಎಂದು ದೇವೇಗೌಡರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com