ನೂತನ CDS ಆಗಿ ಲೆ. ಜನರಲ್ ಎನ್ ಎಸ್ ರಾಜಾ ಸುಬ್ರಮಣಿ ನೇಮಕ

ಲೆಫ್ಟಿನೆಂಟ್ ಜನರಲ್ ಎನ್‌ಎಸ್ ರಾಜಾ ಸುಬ್ರಮಣಿ ಅವರು 2025ರ ಸೆಪ್ಟೆಂಬರ್ 1ರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದಲ್ಲಿ ಸೈನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Lieutenant General NS Raja Subramani (Retd)
ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್ ಎಸ್ ರಾಜಾ ಸುಬ್ರಮಣಿ
Updated on

ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್ ಎಸ್ ರಾಜಾ ಸುಬ್ರಮಣಿ ಅವರನ್ನು ಮುಂದಿನ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಹಾಗೂ ಭಾರತ ಸರ್ಕಾರದ ಸೈನಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇಂದು ಶನಿವಾರ ರಕ್ಷಣಾ ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, ಪ್ರಸ್ತುತ ಸಿಡಿಎಸ್ ಆಗಿರುವ ಅನಿಲ್ ಚೌಹಾಣ್ ಅವರು ಮೇ 30ರಂದು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಎನ್‌ಎಸ್ ರಾಜಾ ಸುಬ್ರಮಣಿ ಅವರು 2025ರ ಸೆಪ್ಟೆಂಬರ್ 1ರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದಲ್ಲಿ ಸೈನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲು ಅವರು 2024ರ ಜುಲೈ 1ರಿಂದ 2025ರ ಜುಲೈ 31ರವರೆಗೆ ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಅಲ್ಲದೆ 2023ರ ಮಾರ್ಚ್‌ನಿಂದ 2024ರ ಜೂನ್‌ವರೆಗೆ ಕೇಂದ್ರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದರು.

Lieutenant General NS Raja Subramani (Retd)
ಸಿಬ್ಬಂದಿ ಕೊರತೆ ನಮ್ಮ ಸೇನೆಗೆ ದೊಡ್ಡ ಸವಾಲು: ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಹೀಗೆ ಹೇಳಿದ್ಯಾಕೆ?

ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿ ಪದವೀಧರರಾಗಿದ್ದಾರೆ. 1985ರ ಡಿಸೆಂಬರ್ 14ರಂದು ಅವರನ್ನು ಗಢ್ವಾಲ್ ರೈಫಲ್ಸ್‌ನ 8ನೇ ಬ್ಯಾಟಾಲಿಯನ್‌ಗೆ ನಿಯೋಜಿಸಲಾಗಿತ್ತು.

ಇದಲ್ಲದೆ ಅವರು ಇಂಗ್ಲೆಂಡಿನ ಜಂಟಿ ಸೇವಾ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಅವರು ಕಿಂಗ್ಸ್ ಕಾಲೇಜ್ ಲಂಡನ್ ನಿಂದ ಎಂಎ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ.

ನಾಲ್ಕು ದಶಕಗಳಿಗಿಂತ ಹೆಚ್ಚು ಅವಧಿಯ ಸೇವೆಯಲ್ಲಿ, ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ ವಿವಿಧ ಯುದ್ಧಪೀಡಿತ ಪ್ರದೇಶಗಳು ಹಾಗೂ ಭೌಗೋಳಿಕ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿದ್ದು, ಅನೇಕ ಕಮಾಂಡ್, ಸಿಬ್ಬಂದಿ ಹಾಗೂ ತರಬೇತಿ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ.

ಅವರು ಅಸ್ಸಾಂನಲ್ಲಿ ಆಪರೇಷನ್ ರೈನೋ ಅಡಿಯಲ್ಲಿ ಪ್ರತಿದಂಗೆ ಕಾರ್ಯಾಚರಣೆಗಳಲ್ಲಿ 16 ಗಢ್ವಾಲ್ ರೈಫಲ್ಸ್‌ಗೆ ಕಮಾಂಡ್ ವಹಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ 168 ಇನ್ಫ್ಯಾಂಟ್ರಿ ಬ್ರಿಗೇಡ್ ಹಾಗೂ ಕೇಂದ್ರ ವಲಯದಲ್ಲಿ 17 ಮೌಂಟನ್ ಡಿವಿಷನ್‌ಗೆ ನಾಯಕತ್ವ ನೀಡಿದ್ದರು. ಅಲ್ಲದೆ ಪಶ್ಚಿಮ ಗಡಿಯಲ್ಲಿ ಭಾರತೀಯ ಸೇನೆಯ ಪ್ರಮುಖ ದಾಳಿ ದಳವಾದ 2 ಕಾರ್ಪ್ಸ್‌ಗೆ ಕಮಾಂಡ್ ಮಾಡಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅವರ ಸಿಬ್ಬಂದಿ ಮತ್ತು ತರಬೇತಿ ನೇಮಕಾತಿಗಳಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿಭಾಗೀಯ ಅಧಿಕಾರಿ, ಮೌಂಟನ್ ಬ್ರಿಗೇಡ್‌ನ ಬ್ರಿಗೇಡ್ ಮೇಜರ್, ಕಜಾಕಿಸ್ತಾನದಲ್ಲಿನ ರಕ್ಷಣಾ ಅಟಾಶೆ, ಸೈನಿಕ ಕಾರ್ಯದರ್ಶಿ ಶಾಖೆಯ ಸಹಾಯಕ ಸೈನಿಕ ಕಾರ್ಯದರ್ಶಿ, ಪೂರ್ವ ಕಮಾಂಡ್ ಮುಖ್ಯಾಲಯದಲ್ಲಿ ಕರ್ನಲ್ ಜನರಲ್ ಸ್ಟಾಫ್ (ಆಪರೇಷನ್ಸ್), ಜಮ್ಮು-ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್ ವಲಯದ ಉಪ ಕಮಾಂಡರ್, ರಕ್ಷಣಾ ಸಚಿವಾಲಯದ ಸಮಗ್ರ ಮುಖ್ಯಾಲಯದಲ್ಲಿ ಸೈನಿಕ ಗುಪ್ತಚರ ವಿಭಾಗದ ಉಪ ಮಹಾನಿರ್ದೇಶಕ, ಪೂರ್ವ ಕಮಾಂಡ್‌ನಲ್ಲಿ ಬ್ರಿಗೇಡಿಯರ್ ಜನರಲ್ ಸ್ಟಾಫ್ (ಆಪರೇಷನ್ಸ್), ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಮುಖ್ಯ ತರಬೇತುದಾರ ಹಾಗೂ ಉತ್ತರ ಕಮಾಂಡ್ ಮುಖ್ಯಾಲಯದ ಮುಖ್ಯ ಸಿಬ್ಬಂದಿ ಅಧಿಕಾರಿಯ ಹುದ್ದೆಗಳು ಸೇರಿವೆ.

ಪಶ್ಚಿಮ ಮತ್ತು ಉತ್ತರ ಗಡಿಗಳ ಕಾರ್ಯಾಚರಣಾ ಪರಿಸ್ಥಿತಿಗಳ ಕುರಿತು ಅವರಿಗೆ ಆಳವಾದ ಅರಿವು ಹಾಗೂ ವಿಶಿಷ್ಟ ಜ್ಞಾನವಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಅತ್ಯುತ್ತಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕ, ಸೇನಾ ಪದಕ, ಹಾಗೂ ವಿಶಿಷ್ಠ ಸೇವಾ ಪದಕ ಪ್ರಶಸ್ತಿಗಳು ಲಭಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com