

ಚೆನ್ನೈ: ತಮಿಳುನಾಡಿನ ವಿಭಜಿತ ಜನಾದೇಶದ ನಡುವೆ ಮೈತ್ರಿ ರಾಜಕೀಯದಲ್ಲಿ ಹೊಸ ತಿರುವು ಪಡೆದಿದ್ದು, ಸರ್ಕಾರ ರಚಿಸಲು ಮೈತ್ರಿಯೇ ಏಕೈಕ ಮಾರ್ಗವಾಗಿರುವ ಪರಿಸ್ಥಿತಿಯಲ್ಲಿ ಹೊಸದೊಂದು ಮತ್ತು ವಿಲಕ್ಷಣ ಚರ್ಚೆಯೊಂದು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ತಮಿಳುನಾಡು ಸರ್ಕಾರ ರಚನೆ ಕಸರತ್ತು ದಿನಕ್ಕೊಂದು ತಿರುವು ಪಡೆಯುತ್ತಿದ್ದು, 108 ಸ್ಥಾನಗಳ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ರ ಟಿವಿಕೆ ಪಕ್ಷ ಸರ್ಕಾರ ರಚನೆ ಕಸರತ್ತು ಮುಂದುವರೆಸಿದೆ.
ಈಗಾಗಲೇ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ (5), ಸಿಪಿಐ (2), ಸಿಪಿಐ-ಎಂ (2) ಬೆಂಬಲ ಘೋಷಣೆಯಾಗಿದೆಯಾದರೂ ನಟ ವಿಜಯ್ ಸಿಎಂಗಾದಿಗೇರಲು ಇನ್ನೂ 2 ಸದಸ್ಯರ ಬೆಂಬಲ ಬೇಕಿದೆ. ಹೀಗಾಗಿ ಟಿವಿಕೆ ಪಕ್ಷ ವಿಸಿಕೆ ಪಕ್ಷದತ್ತ ಮುಖ ಮಾಡಿದ್ದು, ವಿಸಿಕೆ ಇದೀಗ ಅಕ್ಷರಶಃ ಕಿಂಗ್ ಮೇಕರ್ ಸ್ಥಾನದಲ್ಲಿದೆ.
ಮೇಜರ್ ಟ್ವಿಸ್ಟ್, ಮುಖ್ಯಮಂತ್ರಿಯೇ ಚೇಂಜ್?
ಮೈತ್ರಿ ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಯಾವ ನಾಯಕನಾದರೂ ವಿಧಾನಸಭೆಯ ಸದಸ್ಯರಾಗಿದ್ದು, ತಮ್ಮ ಪರ ಸರಳ ಬಹುಮತವನ್ನು ಒಗ್ಗೂಡಿಸಲು ಸಾಧ್ಯವಾದರೆ ಮುಖ್ಯಮಂತ್ರಿ ಆಗಬಹುದು. ಅದು ರಾಜ್ಯಪಾಲರಿಗೆ ಸಲ್ಲಿಸುವ ಬೆಂಬಲ ಪತ್ರಗಳ ಮೂಲಕವಾಗಿರಬಹುದು ಅಥವಾ ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ಮೂಲಕವಾಗಿರಬಹುದು.
ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವು ಸಾಧಿಸಿದ್ದರೂ ಬಹುಮತ ಪಡೆಯಲು ವಿಫಲವಾದ ನಟ ವಿಜಯ್ ಅವರ ಸ್ಥಿತಿ ಅನಿರೀಕ್ಷಿತ ಮುಖ್ಯಮಂತ್ರಿ ಅಭ್ಯರ್ಥಿಗೆ ದಾರಿ ಮಾಡಿಕೊಡಬಹುದು ಎಂಬ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ, ಆ ಅಚ್ಚರಿಯ ಮುಖ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್ ಆಗಿರಬಹುದು. ವಿಚಿತ್ರವಾದರೂ ಇಂತಹುದೊಂದು ಚರ್ಚೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಏಕೆಂದರೆ 234 ಸದಸ್ಯರ ವಿಧಾನಸಭೆಯಲ್ಲಿ ವಿಸಿಕೆ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿದೆ. ಅದು ಒಟ್ಟು ಸದನದ ಶೇಕಡಾ 1 ಕ್ಕಿಂತಲೂ ಕಡಿಮೆ ಪ್ರತಿನಿಧಿತ್ವವಾಗಿದೆ. ಆದರೆ ಇದೇ ಮೈತ್ರಿ ರಾಜಕೀಯದ ವೈಶಿಷ್ಟ್ಯ ಎನ್ನಲಾಗಿದ್ದು, ಅಸಾಧ್ಯವೆನಿಸಿದದ್ದೂ ಕ್ಷಣಾರ್ಧದಲ್ಲಿ ಸಾಧ್ಯವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಡಿಎಂಕೆ-ಎಐಎಡಿಎಂಕೆ ಮೈತ್ರಿ ಸರ್ಕಾರ?
ಮತ್ತೊಂದು ಚರ್ಚೆಯಲ್ಲಿ ಎಐಎಡಿಎಂಕೆ ಪಕ್ಷ ಬಿಜೆಪಿ ಮೈತ್ರಿ ತ್ಯಜಿಸಿದರೆ ಡಿಎಂಕೆ ಮೈತ್ರಿಯಾಗುವ ಸಾಧ್ಯತೆ ಕುರಿತೂ ಚರ್ಚೆಯಾಗುತ್ತಿದೆ ಎನ್ನಲಾಗಿದೆ. ಪ್ರಸ್ತುತ ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಹೊಂದಿದೆ. ಎರಡೂ ಪಕ್ಷಗಳ ಸ್ಥಾನಗಳನ್ನು ಕೂಡಿಸಿದರೆ 106 ಆಗುತ್ತದೆ. ಅಂತೆಯೇ ಡಿಎಂಕೆ ಮೈತ್ರಿ ಪಕ್ಷ ಕಾಂಗ್ರೆಸ್ 5, ಪಿಎಂಕೆ 4, ಐಯುಎಂಎಲ್ 2 ಮತ್ತು ಸಿಪಿಐ 2 ಸ್ಥಾನಗಳನ್ನು ಹೊಂದಿದೆ. ಎಲ್ಲ ಸ್ಥಾನಗಳನ್ನು ಒಗ್ಗೂಡಿಸಿದರೆ 119 ಆಗುತ್ತದೆ. ಆದರ ಮೈತ್ರಿ ಸರ್ಕಾರ ರಚನೆ ಸಾಧ್ಯ ಎಂಬ ಚರ್ಚೆಗಳೂ ನಡೆಯುತ್ತಿವೆ. ಒಂದು ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯಾದರೆ ತಮಿಳುನಾಡು ರಾಜಕೀಯದಲ್ಲಿ ಶುದ್ಧ ಚಾರಿತ್ರ್ಯ ಹೊಂದಿರುವ ವಿಸಿಕೆ ಮುಖ್ಯಸ್ಥ ತಿರುಮಾವಳನ್ ಗೆ ಸಿಎಂ ಹುದ್ದೆ ಒಲಿದು ಬರಬಹುದು ಎನ್ನುವ ವಾದಗಳು ಕೇಳಿಬರುತ್ತಿವೆ.
ವಿಸಿಕೆಯೇ ಕೇಂದ್ರಬಿಂದು
ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆಯ ಕೇಂದ್ರಬಿಂದುವಾಗಿ ವಿದುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಹೊರಹೊಮ್ಮಿದೆ. ಅತಿದೊಡ್ಡ ಪಕ್ಷವಾಗಿರುವ ಟಿವಿಕೆ ಪ್ರಸ್ತುತ 116 ಶಾಸಕರ ಬೆಂಬಲ ಹೊಂದಿದೆ. ಆದರೆ ಬಹುಮತಕ್ಕೆ ಅಗತ್ಯವಾದ ಸಂಖ್ಯೆಯನ್ನು ತಲುಪಲು ಇನ್ನೂ ಇಬ್ಬರು ಶಾಸಕರ ಬೆಂಬಲ ಅಗತ್ಯವಿದೆ. ವಿಸಿಕೆಗೆ ಇಬ್ಬರು ಶಾಸಕರಿದ್ದಾರೆ. ಅವರು ವಿಜಯ್‌ಗೆ ಬೆಂಬಲ ನೀಡಿದರೆ, ಟಿವಿಕೆ ಸರ್ಕಾರ ರಚನೆಗೆ ಮುಂದಾಗಬಹುದು.
ಸಂಜೆ ವೇಳೆಗೆ ಘೋಷಣೆ ಸಾಧ್ಯತೆ
ಟಿವಿಕೆ ಇಂದು ಸಂಜೆ 4 ಗಂಟೆಗೆ ತನ್ನ ಅಂತಿಮ ನಿಲುವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ವಿಳಂಬಕ್ಕೆ ಕಾರಣ ವಿಸಿಕೆಯ ಇಬ್ಬರು ಶಾಸಕರಲ್ಲಿ ಒಬ್ಬರು ಇನ್ನೂ ಚೆನ್ನೈಗೆ ತಲುಪದಿರುವುದು. ಆ ಶಾಸಕರು ಚೆನ್ನೈಗೆ ಬರುತ್ತಿರುವ ಮಾರ್ಗದಲ್ಲಿದ್ದು, ಇಬ್ಬರು ಶಾಸಕರ ಸಹಿ ದೊರೆತ ಬಳಿಕವೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ವಿಸಿಕೆ ಹೇಳಿದೆ ಎನ್ನಲಾಗಿದೆ. ವಿಜಯ್, ಎಎಂಎಂಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲ ಪಡೆಯಲು ಕೂಡ ಪ್ರಯತ್ನಿಸಿದ್ದರು. ಆದರೆ ಆ ಎರಡು ಪಕ್ಷಗಳು ಬೆಂಬಲ ನಿರಾಕರಿಸಿವೆ.
Advertisement