

ಬೆಂಗಳೂರು: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದಲ್ಲಿ ಟಿವಿಕೆ ಪಕ್ಷ ಅಧಿಕಾರಿಕ್ಕೆ ಬಂದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ಮೋದಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರು ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ತಮಿಳುನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದರು. ಅಂತೆಯೇ ಜನರ ಜೀವನಮಟ್ಟವನ್ನು ಸುಧಾರಿಸಲು ಕೇಂದ್ರ ಸರ್ಕಾರ ತಮಿಳುನಾಡು ರಾಜ್ಯದೊಂದಿಗೆ ಸಹಕಾರ ಮುಂದುವರಿಸಲಿದೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ನಟ ವಿಜಯ್ ಅವರ ತಮಿಳಗ ವಿಟ್ರಿ ಕಳಗಂ (ಟಿವಿಕೆ) ಪಕ್ಷದ ಮೈತ್ರಿ ಪಾಲುದಾರವಾದ Congress ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ದೀರ್ಘಕಾಲದ ಮಿತ್ರ ಪಕ್ಷವಾದ ಡಿಎಂಕೆಯನ್ನು ಕೈಬಿಟ್ಟಿದ್ದಕ್ಕಾಗಿ ಕಾಂಗ್ರೆಸ್‌ನ್ನು “ನಂಬಿದವರ ಬೆನ್ನಿಗೆ ಚೂರಿ ಇರಿಯುವ” ಮತ್ತು “ಪರಾವಲಂಬಿ” ಪಕ್ಷ ಎಂದು ಟೀಕಿಸಿದರು.
ದ್ರೋಹವೆಸಗಿದ ಪಕ್ಷ ಕಾಂಗ್ರೆಸ್
'ಈಗ ತಮಿಳುನಾಡಿನ ಪರಿಸ್ಥಿತಿಯನ್ನು ನೋಡಿ. ಕಳೆದ 25-30 ವರ್ಷಗಳಿಂದ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಆಪ್ತ ಸಂಬಂಧವಿತ್ತು. ಅನೇಕ ಬಾರಿ ಡಿಎಂಕೆಯೊಂದಿಗಿನ ಮೈತ್ರಿಯೇ ಕಾಂಗ್ರೆಸ್ ಪಕ್ಷವನ್ನು ಸಂಕಷ್ಟಗಳಿಂದ ಹೊರತಂದಿತ್ತು.
2014ರ ಮೊದಲು 10 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರ್ಕಾರ ಉಳಿಯಲು ಡಿಎಂಕೆಯೇ ಮುಖ್ಯ ಕಾರಣವಾಗಿತ್ತು. ಆದರೆ, ಕಾಂಗ್ರೆಸ್‌ನ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ ಅದೇ ಡಿಎಂಕೆಯನ್ನು ರಾಜಕೀಯ ಗಾಳಿಯ ದಿಕ್ಕು ಬದಲಾಗುತ್ತಿದ್ದಂತೆಯೇ ಕಾಂಗ್ರೆಸ್ ದ್ರೋಹ ಮಾಡಿತು' ಎಂದು ಅವರು ಆರೋಪಿಸಿದರು.
'ಅಧಿಕಾರದ ಲಾಲಸೆಯಿಂದ ಪ್ರೇರಿತವಾದ ಕಾಂಗ್ರೆಸ್, ಮೊದಲ ಅವಕಾಶದಲ್ಲೇ ಡಿಎಂಕೆಗೆ ಹಿಂಬದಿಯಿಂದ ಇರಿತ ಮಾಡಿತು. ಈಗ ರಾಜಕೀಯವಾಗಿ ಪ್ರಸ್ತುತವಾಗಿರಲು ಕಾಂಗ್ರೆಸ್ ಮತ್ತೊಂದು ಪಕ್ಷದ ಬೆನ್ನೇರಿ ಸಾಗಬೇಕಾದ ಪರಿಸ್ಥಿತಿ ಬಂದಿದೆ' ಎಂದರು.
Advertisement