

ನವದೆಹಲಿ: ದೆಹಲಿ ಪೊಲೀಸ್ ಮತ್ತು ಗುಪ್ತಚರ ಇಲಾಖೆ ನನ್ನ ಮೇಲೆ ಕಣ್ಗಾವಲಿಸಿದ್ದು, ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧನಿದ್ದೇನೆಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಶುಕ್ರವಾರ ಹೇಳಿದ್ದಾರೆ.
ಗುರುವಾರ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದೀಪ್ಕೆ, ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ನಡೆಯಲಿರುವ ಉದ್ದೇಶಿತ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೂ ಮುನ್ನ ದೆಹಲಿ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಈ ದೇಶದ ನಾಗರಿಕರಾದ ನಾವು ಹೀಗೆ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿದರೆ, ಅದಕ್ಕಿಂತ ದೊಡ್ಡ ದೇಶದ್ರೋಹಿಗಳು ನೀವೇ. ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾದರೆ ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ನಾಳೆ ನಾವು 100 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ಹೇಳಿದರೆ, ಆ ಎಲ್ಲ 100 ಸ್ಥಳಗಳನ್ನೂ ಮುಚ್ಚುತ್ತೀರಾ? ಪ್ರಧಾನಿ ಮೋದಿ ಅವರ ರ್ಯಾಲಿಗೆ ಹೋಗಿ ಯಾರಾದರೂ ತ್ರಿವರ್ಣ ಧ್ವಜ ಹಾರಿಸಿದರೆ ಪೊಲೀಸರು ಆ ರ್ಯಾಲಿಯನ್ನೇ ರದ್ದುಗೊಳಿಸುತ್ತಾರೆಯೇ? ನೀವು ಯಾವ ರೀತಿಯ ತಮಾಷೆಯಾಗಿ ಮಾಡುತ್ತಿದ್ದೀರಿ?
“ತ್ರಿವರ್ಣ ಧ್ವಜ ಹಾರಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿ. ಆಗ ನೀವೇ ದೇಶದ್ರೋಹಿಗಳು. ಇಂದಿನವರೆಗೆ ಯಾವ ಪ್ರಧಾನಿಯೂ ಅಥವಾ ಯಾವ ಸರ್ಕಾರವೂ ಇಂತಹ ಕೆಲಸ ಮಾಡಿಲ್ಲ. ರಾಷ್ಟ್ರಧ್ವಜ ಹಾರಿಸಿದ ಕಾರಣಕ್ಕಾಗಿಯೇ ನಾಗರಿಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಅಕ್ಟೋಬರ್ 13ರಂದು ಜಂತರ್ ಮಂತರ್ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾ ಪ್ರವೇಶಿಸಿದ ಹಿನ್ನೆಲೆಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ತಮ್ಮ ಪಕ್ಷದ ಸಹೋದ್ಯೋಗಿಗಳಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ.
ಭಾರತದ ಪ್ರಧಾನಿಗೆ ತ್ರಿವರ್ಣ ಧ್ವಜದ ಮೇಲೆ ಇಷ್ಟೊಂದು ದ್ವೇಷವೇಕೆ? ರಾಷ್ಟ್ರಧ್ವಜವನ್ನು ದ್ವೇಷಿಸುವವರು ಪ್ರಧಾನಿಯಾಗಿ ಮುಂದುವರಿಯಲು ಅರ್ಹರೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ತಮ್ಮನ್ನು ನಂಬರ್ ಪ್ಲೇಟ್ಗಳಿಲ್ಲದ ವಾಹನಗಳು ಹಿಂಬಾಲಿಸುತ್ತಿವೆ ಎಂದೂ ದೀಪ್ಕೆ ಆರೋಪಿಸಿದ್ದಾರೆ. ಅಲ್ಲದೆ, ಗುಪ್ತಚರ ಇಲಾಖೆಯ ಸಿಬ್ಬಂದಿ ತಮ್ಮ ಮನೆಯ ಹೊರಗಿರುವ ಕಾವಲುಗಾರನಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ನನ್ನನ್ನು ವಶಕ್ಕೆ ಪಡೆಯಬಹುದು. ಆದರೆ, ನಾವು ಹೆದರುವುದಿಲ್ಲ ಎಂಬುದನ್ನು ಪ್ರಧಾನಿ ಮೋದಿಯವರಿಗೆ ಹೇಳಲು ಬಯಸುತ್ತೇನೆ.
ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ, ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಹೊಸ ಚುನಾವಣಾ ಆಯುಕ್ತರನ್ನು ನೇಮಿಸಿ ಎಂಬುದಷ್ಟೇ ನಮ್ಮ ಬೇಡಿಕೆ. ನಾವು ಸರ್ಕಾರ ಬದಲಾವಣೆಗೆ ಆಗ್ರಹಿಸುತ್ತಿಲ್ಲ. ತಮ್ಮ ಸಹ ಚುನಾವಣಾ ಆಯುಕ್ತರ ಮಾತನ್ನೂ ಕೇಳದ ಜ್ಞಾನೇಶ್ ಕುಮಾರ್ ಅವರನ್ನು ಬದಲಾಯಿಸಿ ಎಂದು ಕೇಳುತ್ತಿದ್ದೇವೆ. ಇದು ಅಪರಾಧವೇ?” ಎಂದು ಪ್ರಶ್ನಿಸಿದ್ದಾರೆ.
ಇದು ತುರ್ತು ಪರಿಸ್ಥಿತಿ. ಆದರೆ, ತಮ್ಮ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂಬ ಭಯದಿಂದ ಪ್ರಧಾನಿ ಮೋದಿ ಅದನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ” ಎಂದೂ ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ಸೆಂಟ್ರಲ್ ಪಾರ್ಕ್ನಲ್ಲಿ ಜಮಾಯಿಸಿ ರಾಷ್ಟ್ರಧ್ವಜ ಹಾರಿಸುವಂತೆ CJP ಸಾರ್ವಜನಿಕರು ಮತ್ತು ತನ್ನ ಬೆಂಬಲಿಗರಿಗೆ ಕರೆ ನೀಡಿದೆ.
ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಪಕ್ಷ ಈ ಪ್ರತಿಭಟನೆಗೆ ಮುಂದಾಗಿದೆ.
ಈ ನಡುವೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಶುಕ್ರವಾರ ಮತ್ತು ಶನಿವಾರ ಸೆಂಟ್ರಲ್ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮುಚ್ಚುವುದಾಗಿ ಘೋಷಿಸಿದೆ.
ಇದೇ ವೇಳೆ, ಸೂಕ್ತ ಸ್ಥಳವೊಂದರಲ್ಲಿ ಆಯ್ದ ಕೆಲವರಿಗೆ ರಾಷ್ಟ್ರಧ್ವಜ ಹಾರಿಸಲು ಮತ್ತು ರಾಷ್ಟ್ರಗೀತೆ ಹಾಡಲು ಅವಕಾಶ ಕಲ್ಪಿಸಬಹುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.