CJP ‘Tiranga’ march: ದೆಹಲಿ Central Park ಬಂದ್ ಪ್ರಶ್ನಿಸಿ ಅರ್ಜಿ, ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ..!

ಈ ದಿನಗಳಲ್ಲಿ ಸಣ್ಣ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಾರೆ. ಇಂತಹ ನಿರ್ಬಂಧಗಳಿಂದ ಇಡೀ ಕುಟುಂಬಗಳು ಎದುರಿಸಬೇಕಾಗುವ ಸಂಕಷ್ಟ ಮತ್ತು ತೊಂದರೆಗಳ ಅರಿವು ನಮಗಿದೆ.
 Supreme Court
ಸುಪ್ರೀಂಕೋರ್ಟ್
Updated on: 

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿರುವ ‘ತಿರಂಗಾ’ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು ಬಂದ್ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದೇ ವೇಳೆ, “ಎಲ್ಲರಿಗೂ ವಿವೇಕ ಮೂಡುತ್ತದೆ ಎಂದು ನಾವು ಆಶಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.

ಇದೇ ವೇಳೆ, ಈ ದಿನಗಳಲ್ಲಿ ಸಣ್ಣ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಾರೆ. ಇಂತಹ ನಿರ್ಬಂಧಗಳಿಂದ ಇಡೀ ಕುಟುಂಬಗಳು ಎದುರಿಸಬೇಕಾಗುವ ಸಂಕಷ್ಟ ಮತ್ತು ತೊಂದರೆಗಳ ಅರಿವು ನಮಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟದೆ.

ಪ್ರತಿಭಟನೆ ನಡೆಸುವ ಹಕ್ಕು, ಕಡಲೆಕಾಯಿ ಮಾರಾಟಕ್ಕೆ ಅವಕಾಶ ನೀಡುವ ವಿಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯ ಸೇರಿದಂತೆ ಪ್ರತಿಭಟನೆಗೆ ಸಂಬಂಧಿಸಿದ ವಿವಿಧ ವಿಷಯಗಳು ಒಂದಕ್ಕೊಂದು ಬೆಸೆದುಕೊಂಡಿವೆ.

ಒಬ್ಬರಿಗೆ ಪ್ರತಿಭಟನೆ ನಡೆಸಬೇಕಿದೆ, ಮತ್ತೊಬ್ಬರಿಗೆ ಕಡಲೆಕಾಯಿ ಮಾರಾಟ ಮಾಡಬೇಕಿದೆ, ಇನ್ನೊಬ್ಬರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಿದೆ. ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ.

ಒಂದು ವೇಳೆ ಈ ನಿರ್ಬಂಧಗಳಿಂದ ವ್ಯಾಪಾರಕ್ಕೆ ನಷ್ಟ ಉಂಟಾದರೆ, ಸಂವಿಧಾನದ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ನ್ಯಾಯಾಲಯ ಸಿದ್ಧವಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

ವ್ಯಾಪಾರಕ್ಕೆ ನಷ್ಟವಾದರೆ, ಸಂವಿಧಾನಾತ್ಮಕ ಅಧಿಕಾರವನ್ನು ಚಲಾಯಿಸುತ್ತೇವೆ. ಆ ಪರಿಸ್ಥಿತಿ ಎದುರಾದಾಗ ನೋಡೋಣ” ಎಂದು ತಿಳಿಸಿದರು.

 Supreme Court
ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗುರುವಾರ ತಡರಾತ್ರಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಸೆಂಟ್ರಲ್ ಪಾರ್ಕ್ ಮುಚ್ಚುವಂತೆ ಆದೇಶ ಹೊರಡಿಸಿದೆ. ಇದರಿಂದ ಅಲ್ಲಿ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿದರು.

ಈ ವೇಳೆ ನಿರ್ಬಂಧಗಳು ಅಸಮರ್ಪಕ ಅಥವಾ ಅಗತ್ಯಕ್ಕಿಂತ ಹೆಚ್ಚು ಕಠಿಣವಾಗಿವೆ ಎಂದು ಕಂಡುಬಂದರೆ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಸಾಕಷ್ಟು ಅಧಿಕಾರವಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಸೂಚಿಸಿದರು.

ಸಾರ್ವಜನಿಕ ಹಿತಾಸಕ್ತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿಯೂ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

ಇದೇ ವೇಳೆ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ನಿಗದಿಪಡಿಸಿದ ನ್ಯಾಯಾಲಯ, ಪ್ರತಿಭಟನೆಗಳು ಮತ್ತು ಅವುಗಳ ಹಿನ್ನೆಲೆಯಲ್ಲಿ ವಿಧಿಸುವ ನಿರ್ಬಂಧಗಳಿಂದ ದಿನಗೂಲಿ ಹಾಗೂ ದೈನಂದಿನ ಆದಾಯವನ್ನು ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಗಮನಿಸಿತು.

ಜೀವನೋಪಾಯದ ಹಕ್ಕನ್ನು ಕಸಿದುಕೊಂಡಿರುವುದು ಕಂಡುಬಂದರೆ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಟಾರ್ಟ್ ಕಾನೂನಿನ ಅಡಿಯಲ್ಲಿ ಪರಿಹಾರ ನೀಡುವಂತೆ ಆದೇಶಿಸುವುದಾಗಿಯೂ ನ್ಯಾಯಪೀಠ ತಿಳಿಸಿತು.

ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕ ಅಭಿಜೀತ್ ದೀಪ್ಕೆ, ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶವಾದ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಿಡಿದು ಸೇರಲು ದೇಶದ ಜನತೆಗೆ ಕರೆ ನೀಡಿದ್ದು, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದ್ದರು.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ, ಅಲ್ಲಿ ಅತಿಕ್ರಮ ಪ್ರವೇಶ ಮಾಡಿದ ಹಾಗೂ ಶಾಂತಿ ಕಾಪಾಡುವ ಬಾಂಡ್‌ನ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ದಾಸ್ ಮತ್ತು ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸಲು ಅನುಮತಿಸಲಾದ ಸ್ಥಳಗಳ ಪಟ್ಟಿಯಿಂದ ಈಗಾಗಲೇ ತೆಗೆದುಹಾಕಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com