ಭಾರತದ ಹಿತಾಸಕ್ತಿಗೆ ಧಕ್ಕೆ ತಂದು ಪಾಕಿಸ್ತಾನದ ಜೊತೆ ಸಂಬಂಧ ಬೆಳೆಸಲ್ಲ: ಅಮೆರಿಕ ಭರವಸೆ

ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಡಳಿತದ ಅವಧಿಯಲ್ಲಿ, ಹೆನ್ರಿ ಕಿಸ್ಸಿಂಜರ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾಗ, ದಕ್ಷಿಣ ಏಷ್ಯಾದ ಅಮೆರಿಕದ ನೀತಿಯು ಪಾಕಿಸ್ತಾನದತ್ತ ಹೆಚ್ಚಿನ ಒಲವು ಹೊಂದಿತ್ತು.
Marco Rubio
ಮಾರ್ಕೋ ರೂಬಿಯೋ ಜೊತೆ ಇಎಎಂ ಜೈಶಂಕರ್
Updated on: 

ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ಜೊತೆ ಅಮೆರಿಕದ ಹೆಚ್ಚುತ್ತಿರುವ ಸಂಬಂಧಗಳ ಬಗ್ಗೆ ಭಾರತ ಹೊಂದಿರುವ ಆತಂಕವನ್ನು ದೂರ ಮಾಡಲು ಪ್ರಯತ್ನಿಸಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ, ಯಾವುದೇ ದೇಶದೊಂದಿಗಿನ ಅಮೆರಿಕದ ಸಂಬಂಧವು ಭಾರತದೊಂದಿಗಿನ ಬಾಂಧವ್ಯಕ್ಕೆ ಎಂದಿಗೂ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರೂಬಿಯೊ, 1970ರ ದಶಕದ ನಿಕ್ಸನ್‌-ಕಿಸ್ಸಿಂಜರ್‌ ಯುಗಕ್ಕೆ ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ. ಅಂದಿನ ಜಾಗತಿಕ ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ ಎಂದು ಹೇಳಿದರು.

ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಡಳಿತದ ಅವಧಿಯಲ್ಲಿ, ಹೆನ್ರಿ ಕಿಸ್ಸಿಂಜರ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾಗ, ದಕ್ಷಿಣ ಏಷ್ಯಾದ ಅಮೆರಿಕದ ನೀತಿಯು ಪಾಕಿಸ್ತಾನದತ್ತ ಹೆಚ್ಚಿನ ಒಲವು ಹೊಂದಿತ್ತು. ಆಗ ಜನರಲ್ ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ತಾನದ ಸೇನಾ ಆಡಳಿತದೊಂದಿಗೆ ಅಮೆರಿಕ ನಿಕಟ ಸಂಬಂಧ ಹೊಂದಿತ್ತು.

ಇದೇ ವಿಚಾರವಾಗಿ ಮಾತನಾಡಿರುವ ರೂಬಿಯೋ, ಈ ಹಿಂದಿನ ಪರಿಸ್ಥಿತಿಯನ್ನು ಈಗಿನ ಜಾಗತಿಕ ವ್ಯವಸ್ಥೆಯೊಂದಿಗೆ ಹೋಲಿಸುವುದು ಸೂಕ್ತವಲ್ಲ ಎಂದಿದ್ದಾರೆ. “1970ರ ದಶಕವನ್ನು ಉದಾಹರಣೆಯಾಗಿ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ಆಗಿನ ಜಗತ್ತು ಈಗಿನಂತಿರಲಿಲ್ಲ. ಅಂದು ಶೀತಲ ಸಮರ ಸೇರಿದಂತೆ ಹಲವು ರೀತಿಯ ಜಾಗತಿಕ ರಾಜಕೀಯ ಸನ್ನಿವೇಶಗಳಿದ್ದವು. ಅವುಗಳಲ್ಲಿ ಹಲವು ಈಗ ಅಸ್ತಿತ್ವದಲ್ಲಿಲ್ಲ” ಎಂದು ಹೇಳಿದ್ದಾರೆ.

Marco Rubio
ಅಮೆರಿಕ- ಭಾರತ ವ್ಯಾಪಾರ ಒಪ್ಪಂದಕ್ಕೆ 'ಬಹಳ ಹತ್ತಿರ'; ಹಿಂದಿನ ಒಪ್ಪಂದಗಳಿಗಿಂತ ಭಿನ್ನ- ಡೊನಾಲ್ಡ್ ಟ್ರಂಪ್

ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಪಾಕಿಸ್ತಾನದೊಂದಿಗೆ, ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದ ರಕ್ಷಣಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ರೂಬಿಯೊ, ಯಾವುದೇ ದೇಶದೊಂದಿಗಿನ ಅಮೆರಿಕದ ಸಂಬಂಧವು ಭಾರತದೊಂದಿಗಿನ ಸಂಬಂಧದ ವೆಚ್ಚದಲ್ಲಿ ಬೆಳೆಯುವುದಿಲ್ಲ ಎಂದು ಹೇಳಿದ್ದಾರೆ.

“ಜಗತ್ತಿನ ಯಾವುದೇ ದೇಶದೊಂದಿಗಿನ ನಮ್ಮ ಸಂಬಂಧವು ಯಾವುದೇ ರೀತಿಯಲ್ಲೂ ಭಾರತದೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗುವುದಿಲ್ಲ. ಭಾರತದೊಂದಿಗಿನ ನಮ್ಮ ಬಾಂಧವ್ಯವನ್ನು ನಾವು ಆ ದೃಷ್ಟಿಕೋನದಿಂದ ನೋಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಭಾರತಕ್ಕೆ ತಾವು ನೀಡಿರುವ ಭೇಟಿ, ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ತೋರುತ್ತಿರುವ ಬದ್ಧತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ರೂಬಿಯೊ ಹೇಳಿದ್ದಾರೆ.

ಸಂಘರ್ಷ ತಡೆಯಲು ಪಾಕಿಸ್ತಾನದೊಂದಿಗಿನ ನಂಟು ಬಳಕೆ?

ಪಾಕಿಸ್ತಾನದೊಂದಿಗಿನ ಸಂಬಂಧವು ಭಾರತಕ್ಕೆ ಕಳವಳ ಉಂಟುಮಾಡುವಂತಹ ಕ್ರಮಗಳನ್ನು ತಡೆಯಲು ಅಮೆರಿಕಕ್ಕೆ ಅವಕಾಶ ಕಲ್ಪಿಸಬಹುದು ಎಂದೂ ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ.

“ಪಾಕಿಸ್ತಾನ ನಮ್ಮೊಂದಿಗೆ ಸಂಬಂಧ ಹೊಂದಿರುವ ದೇಶ. ಅದರೊಂದಿಗೆ ನಾವು ಸಂಬಂಧವನ್ನು ಮುಂದುವರಿಸಬೇಕಾಗಿದೆ. ಕೆಲವು ಸಂದರ್ಭಗಳಲ್ಲಿ, ಸಂಘರ್ಷಕ್ಕೆ ಕಾರಣವಾಗಬಹುದಾದ ಕ್ರಮಗಳನ್ನು ತಡೆಯಲು ನಾವು ನೆರವಾಗಬಲ್ಲೆವು ಎಂದಾದರೆ, ಅದು ಸಕಾರಾತ್ಮಕ ಬೆಳವಣಿಗೆಯಾಗಬಹುದು. ನಮ್ಮ ಪ್ರಭಾವವನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾದರೆ ಅದರಿಂದ ಪ್ರಯೋಜನವಾಗಬಹುದು” ಎಂದು ಅವರು ಹೇಳಿದ್ದಾರೆ.

ಎರಡು ದಿನಗಳ ಭಾರತ ಭೇಟಿಯಲ್ಲಿರುವ ರೂಬಿಯೊ, ರಷ್ಯಾ ಮತ್ತು ಉಕ್ರೇನ್ ನಡುವಿನ ನಾಲ್ಕು ವರ್ಷಗಳ ಯುದ್ಧವನ್ನು ಅಂತ್ಯಗೊಳಿಸುವಲ್ಲಿನ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ. “ಈ ಸಮಸ್ಯೆಗಳು ಸಂಕೀರ್ಣವಾಗಿವೆ. ಯುದ್ಧವನ್ನು ಅಂತ್ಯಗೊಳಿಸುವುದು ಸುಲಭವಾಗಿದ್ದರೆ, ಅದು ಬಹಳ ಹಿಂದೆಯೇ ಮುಕ್ತಾಯವಾಗುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com