ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಹರಕೆ ತೀರಿಸಲು ಮುಂಬೈಗೆ ಬಂದಿದ್ದ ಮಹಿಳೆ! ಕುಟುಂಬ ಹೇಳಿದ್ದೇನು?

ಉತ್ತರ ಪ್ರದೇಶದ ಸೀತಾಪುರದ ರಾಧಾ ಮತ್ತು ಆಜಂಗಢದ ಬಬಿತಾ ಬಂಧಿತ ಮಹಿಳೆಯರು. ಮಂಗಳವಾರ ದೆಹಲಿ ರೈಲು ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಗಿದೆ.
Tiger Shroff Attack case
ಟೈಗರ್ ಶ್ರಾಫ್ ಮೇಲಿನ ದಾಳಿ ಪ್ರಕರಣದ ಆರೋಪಿಗಳ ಬಂಧನ
Updated on: 

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಇಬ್ಬರು ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆದರೆ, ಬಂಧಿತ ಮಹಿಳೆಯರ ಕುಟುಂಬಸ್ಥರು ಆರೋಪಗಳನ್ನು ನಿರಾಕರಿಸಿದ್ದು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಹರಕೆ ತೀರಿಸುವ ಉದ್ದೇಶದಿಂದ ಅವರು ಮುಂಬೈಗೆ ತೆರಳಿದ್ದರು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸೀತಾಪುರದ ರಾಧಾ ಮತ್ತು ಆಜಂಗಢದ ಬಬಿತಾ ಬಂಧಿತ ಮಹಿಳೆಯರು. ಮಂಗಳವಾರ ದೆಹಲಿ ರೈಲು ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ದಾಳಿಗೆ ಬಳಸಲಾದ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಈ ಮಹಿಳೆಯರು ನೆರವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮುಂಬೈ ಪೊಲೀಸರ ಆರೋಪದ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಅನಿಲ್ ಪಂಡಿತ್ ಸೂಚನೆಯಂತೆ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದಾಳಿ ನಡೆಸಲಾಗಿದೆ.

Tiger Shroff Attack case
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿದಂತೆ ಮತ್ತೆ ಐವರ ಬಂಧನ!

ರೈಲಿನಲ್ಲಿ ಶಸ್ತ್ರಾಸ್ತ್ರ ಸಾಗಿಸಿದ ಆರೋಪ

ದೆಹಲಿ ಪೊಲೀಸರ ಪ್ರಕಾರ, ಇಬ್ಬರು ಶಂಕಿತರು ಶಸ್ತ್ರಾಸ್ತ್ರಗಳನ್ನು ಪಡೆಯಲು ಅಮೃತಸರಕ್ಕೆ ತೆರಳಿದ್ದರು. ಬಳಿಕ ರಾಧಾ ಮತ್ತು ಬಬಿತಾ ರೈಲಿನಲ್ಲಿ ಶಸ್ತ್ರಾಸ್ತ್ರಗಳನ್ನು ಮುಂಬೈಗೆ ಸಾಗಿಸಿ, ದಾಳಿ ನಡೆಸಿದವರಿಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಧಾ ಮತ್ತು ಬಬಿತಾ ಜೊತೆಗೆ ಕುನಾಲ್ ಹಾಗೂ ಸುಮಿತ್ ಎಂಬ ಇಬ್ಬರು ಪುರುಷರನ್ನೂ ಬಂಧಿಸಲಾಗಿದೆ. ಶೂಟರ್‌ಗಳಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲು ಮುಂಬೈನಲ್ಲೇ ಉಳಿದಿದ್ದ ಎನ್ನಲಾದ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಆದರೆ, ಇಬ್ಬರು ಮಹಿಳೆಯರ ಕುಟುಂಬಸ್ಥರು ತಮ್ಮ ಹೆಣ್ಣುಮಕ್ಕಳಿಗೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತಿಂಗಳಿಗೆ 15 ಸಾವಿರ ರೂ ಸಂಬಳದ ಕೆಲಸ ಮಾಡುತ್ತಿದ್ದ ರಾಧಾ

ರಾಧಾಳ ತಾಯಿ ಮೈನಾ ದೇವಿ ಮಾತನಾಡಿ, ತನ್ನ ಮಗಳು ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಹುಡುಕಿಕೊಂಡು ಹರಿಯಾಣಕ್ಕೆ ತೆರಳಿದ್ದಳು. ಅಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15,000 ರೂ ಸಂಬಳ ಪಡೆಯುತ್ತಿದ್ದಳು ಎಂದು ತಿಳಿಸಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ 2015ರಲ್ಲಿ ರಾಧಾ ಸ್ಥಳೀಯ ನಿವಾಸಿ ಸುನೀಲ್ ಎಂಬಾತನನ್ನು ವಿವಾಹವಾಗಿದ್ದಳು. ದಂಪತಿಗೆ ಒಬ್ಬ ಮಗನಿದ್ದಾನೆ. 2018ರ ಸುಮಾರಿಗೆ ರಾಧಾ ಪತಿಯ ಮನೆಯನ್ನು ತೊರೆದಿದ್ದಳು. ಬಳಿಕ ಸುನೀಲ್ ಮತ್ತೊಂದು ಮದುವೆಯಾಗಿದ್ದಾನೆ. ರಾಧಾಳೊಂದಿಗೆ ಹಲವು ವರ್ಷಗಳಿಂದ ಸಂಪರ್ಕದಲ್ಲಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ದೇವಸ್ಥಾನಗಳಿಗೆ ಭೇಟಿ ನೀಡಿ ಹರಕೆ ತೀರಿಸಲು ಹೋಗಿದ್ದಳಂತೆ!

ಆಜಂಗಢದಲ್ಲಿರುವ ಬಬಿತಾಳ ಕುಟುಂಬವೂ ಆಕೆ ನಿರಪರಾಧಿ ಎಂದು ವಾದಿಸಿದೆ. ಬಬಿತಾಳ ತಂದೆ ರಾಮ್ ಜತನ್ ರಾಮ್ ಮಾತನಾಡಿ, ತನ್ನ ಮಗಳು ಹರಿಯಾಣದ ಸೋನಿಪತ್‌ನಲ್ಲಿರುವ ಪ್ಯಾಕೇಜಿಂಗ್ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿಸಿದ್ದಾರೆ.

ಕುಟುಂಬಕ್ಕೆ ಪರಿಚಯವಿದ್ದ ಯುವತಿಯೊಬ್ಬಳು ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಬಬಿತಾಳನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಳು ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರನ್ನು ಸಂಪರ್ಕಿಸಿರುವುದಾಗಿ ತಿಳಿಸಿದ ಅವರು, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಬಬಿತಾಳ ಸಹೋದರಿ ನೀಲಂ ಹೇಳುವ ಪ್ರಕಾರ, ಬಬಿತಾ ತನ್ನ ಸ್ನೇಹಿತೆ ರಾಧಾಳೊಂದಿಗೆ ಮುಂಬೈಗೆ ತೆರಳಿದ್ದಳು. ಅಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಹರಕೆ ತೀರಿಸುವುದು ಅವರ ಉದ್ದೇಶವಾಗಿತ್ತು. ವಾಪಸ್ ಬರುವಾಗ ರೈಲು ನಿಲ್ದಾಣದಲ್ಲಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಬಬಿತಾಳ ಬ್ಯಾಗ್‌ನಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ ಎಂದು ನೀಲಂ ಹೇಳಿದ್ದಾರೆ. ಬಬಿತಾ ತನ್ನ ಅಣ್ಣ ದಿಲೀಪ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ, ಮತ್ತೊಬ್ಬ ಮಹಿಳೆಯೊಂದಿಗೆ ಮುಂಬೈಗೆ ಪ್ರವಾಸಕ್ಕೆ ಹೋಗಿದ್ದೆ. ದೆಹಲಿಗೆ ಮರಳಿದಾಗ ನನ್ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾಳೆ ಎಂದು ಕುಟುಂಬದವರು ಹೇಳಿದ್ದಾರೆ.

Tiger Shroff Attack case
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಮೂವರು ಆರೋಪಿಗಳಿಗೆ ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿ!

ಬಬಿತಾಳ ಹಿನ್ನೆಲೆ ಪರಿಶೀಲನೆ

ಆಜಂಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಬಬಿತಾಳ ಹಿನ್ನೆಲೆ ಮತ್ತು ಪ್ರಕರಣದಲ್ಲಿನ ಆಕೆಯ ಪಾತ್ರವನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ದೆಹಲಿ ಮತ್ತು ಮುಂಬೈ ಪೊಲೀಸರೊಂದಿಗೆ ಸಮನ್ವಯ ಸಾಧಿಸಿವೆ ಎಂದು ತಿಳಿಸಿದ್ದಾರೆ. ಬಬಿತಾಳ ವೈಯಕ್ತಿಕ ಹಿನ್ನೆಲೆ, ಈ ಹಿಂದೆ ಕೆಲಸ ಮಾಡಿದ್ದ ಸ್ಥಳ ಹಾಗೂ ಆಕೆಯ ಸಂಪರ್ಕಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜುಹು ಪ್ರದೇಶದಲ್ಲಿ ನಡೆದಿತ್ತು ಗುಂಡಿನ ದಾಳಿ

ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿತ್ತು. ಇಬ್ಬರು ದಾಳಿಕೋರರು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರು ಚಾಲಕ ಮತ್ತು ಘಟನೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ.

ಪ್ರಕರಣದಲ್ಲಿ ಬಂಧಿತರಾಗಿರುವ ಮಹಿಳೆಯರ ಪಾತ್ರದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕುಟುಂಬಸ್ಥರು ಆರೋಪಗಳನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ, ತನಿಖೆಯ ನಂತರವಷ್ಟೇ ಪ್ರಕರಣದಲ್ಲಿನ ಅವರ ನಿಜವಾದ ಪಾತ್ರ ಸ್ಪಷ್ಟವಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com