'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?

ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಸೋಮವಾರ ಆರಂಭವಾದ 9ನೇ ಆವೃತ್ತಿಯ ಬೆಂಗಳೂರು ಸ್ಪೇಸ್ ಎಕ್ಸ್‌ಪೋ (BSX) ಉದ್ಘಾಟನಾ ಸಮಾರಂಭದಲ್ಲಿ ರಾಯಭಾರಿ ಸೆರ್ಗಿಯೋ ಗೋರ್ ಪಾಲ್ಗೊಂಡಿದ್ದರು.
US envoy Sergio Gor
ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್
Updated on

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಕೇವಲ ಸಹಕಾರಕ್ಕೆ ಸೀಮಿತವಾಗಿಲ್ಲ. ಇದೀಗ ಎರಡೂ ರಾಷ್ಟ್ರಗಳು ‘ಸಹ-ಸೃಷ್ಟಿ’ (Co-creation) ಹಂತದತ್ತ ಸಾಗುತ್ತಿವೆ ಎಂದು ಭಾರತ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಹೇಳಿದ್ದಾರೆ.

ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಸೋಮವಾರ ಆರಂಭವಾದ 9ನೇ ಆವೃತ್ತಿಯ ಬೆಂಗಳೂರು ಸ್ಪೇಸ್ ಎಕ್ಸ್‌ಪೋ (BSX) ಉದ್ಘಾಟನಾ ಸಮಾರಂಭದಲ್ಲಿ ರಾಯಭಾರಿ ಸೆರ್ಗಿಯೋ ಗೋರ್ ಪಾಲ್ಗೊಂಡಿದ್ದರು.

ಭಾರತೀಯ ಕೈಗಾರಿಕಾ ಒಕ್ಕೂಟ (CII), ಇಸ್ರೋ, IN-SPACe ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 7ರಿಂದ 9ರವರೆಗೆ ಈ ಎಕ್ಸ್‌ಪೋ ನಡೆಯುತ್ತಿದೆ.

ಈ ವೇಳೆ ಮಾತನಾಡಿದ ಅವರು, 'ಎರಡೂ ದೇಶಗಳು ಜಂಟಿಯಾಗಿ ಬಾಹ್ಯಾಕಾಶ ಉಪಕರಣಗಳನ್ನು ವಿನ್ಯಾಸಗೊಳಿಸುವುದು, ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಒದಗಿಸುವುದು ಮತ್ತು ಮಾನವ ಅನ್ವೇಷಣೆಯ ಭವಿಷ್ಯವನ್ನು ಒಟ್ಟಾಗಿ ರೂಪಿಸುವತ್ತ ಹೆಜ್ಜೆ ಹಾಕುತ್ತಿವೆ ಎಂದು ಅವರು ಹೇಳಿದ್ದಾರೆ.

US envoy Sergio Gor
Many Have Gone, Many Have Come: "ಇದೆಲ್ಲಾ ಮಾಮೂಲಿ", ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಪ್ರತಿಕ್ರಿಯೆ!

‘ಭಾರತ-ಅಮೆರಿಕ ಹೊಸ ಡ್ರೀಮ್ ಟೀಮ್’

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 9ನೇ ಯುಎಸ್-ಇಂಡಿಯಾ ಸಿವಿಲ್ ಸ್ಪೇಸ್ ಜಾಯಿಂಟ್ ವರ್ಕಿಂಗ್ ಗ್ರೂಪ್ ಸಭೆಯನ್ನು ಉಲ್ಲೇಖಿಸಿದ ಗೋರ್, ಭಾರತ-ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆ ಇದೀಗ ಕೇವಲ ಸಹಕಾರದ ಮಟ್ಟದಲ್ಲಿಲ್ಲ ಎಂದು ಹೇಳಿದರು.

“ನಾವು ಇನ್ನು ಮುಂದೆ ಕೇವಲ ಡೇಟಾವನ್ನು ಹಂಚಿಕೊಳ್ಳುತ್ತಿಲ್ಲ. ಜಂಟಿಯಾಗಿ ಉಪಕರಣಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ, ಸ್ಟಾರ್ಟ್‌ಅಪ್‌ಗಳಿಗೆ ಒಟ್ಟಾಗಿ ಹಣಕಾಸು ನೀಡುತ್ತಿದ್ದೇವೆ ಮತ್ತು ಮಾನವ ಅನ್ವೇಷಣೆಯ ಭವಿಷ್ಯವನ್ನು ಸಹ-ರೂಪಿಸುತ್ತಿದ್ದೇವೆ.

ಅಮೆರಿಕವು ವಿಶ್ವದರ್ಜೆಯ ಖಾಸಗಿ ಬಂಡವಾಳ ಮತ್ತು ಅಭಿವೃದ್ಧಿ ಹೊಂದಿದ ವಾಣಿಜ್ಯ ವ್ಯವಸ್ಥೆಯನ್ನು ಹೊಂದಿದ್ದರೆ, ಭಾರತವು ಅತ್ಯುತ್ತಮ ಎಂಜಿನಿಯರಿಂಗ್ ಸಾಮರ್ಥ್ಯ, ಅಪಾರ ವೈಜ್ಞಾನಿಕ ಪ್ರತಿಭೆ ಮತ್ತು ಧೈರ್ಯಶಾಲಿ ಸ್ಟಾರ್ಟ್‌ಅಪ್ ಕ್ಷೇತ್ರವನ್ನು ಹೊಂದಿದೆ ಎಂದರು.

ಅಂತೆಯೇ “ಈ ಪಾಲುದಾರಿಕೆಯಿಂದ ಹೊಸ ಡ್ರೀಮ್ ಟೀಮ್ ರೂಪುಗೊಳ್ಳುತ್ತಿದೆ. ಇದು ಅದ್ಭುತ ಸಾಧನೆಗಳನ್ನು ಮಾಡಬಲ್ಲದು ಮತ್ತು ಮಾಡಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಟ್ರಂಪ್-ಮೋದಿ ಜುಗಲ್ ಬಂದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಾಮರ್ಥ್ಯವನ್ನು ಗುರುತಿಸಿ TRUST (Transforming the Relationship Utilizing Strategic Technology) ಉಪಕ್ರಮವನ್ನು ಆರಂಭಿಸಿದ್ದಾರೆ ಎಂದು ಗೋರ್ ಹೇಳಿದರು. ಬೆಂಗಳೂರು ನಗರದಲ್ಲಿ ಯುಎಸ್ ಕಮರ್ಷಿಯಲ್ ಸರ್ವಿಸ್ ವ್ಯವಸ್ಥೆಯನ್ನು ವಿಸ್ತರಿಸುವ ಮೂಲಕ ಅಮೆರಿಕದ ಉದ್ಯಮಗಳು ಮತ್ತು ಭಾರತೀಯ ನವೋದ್ಯಮಿಗಳ ನಡುವೆ ನೇರ ವಾಣಿಜ್ಯ ಸಂಪರ್ಕವನ್ನು ನಿರ್ಮಿಸಲು ಮುಂದಾಗಿರುವುದಾಗಿ ಅವರು ತಿಳಿಸಿದರು.

“ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ. ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಹಿಂದೆಂದೂ ಊಹಿಸಲಾಗದ ಮಟ್ಟದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ನಮ್ಮ ದ್ವಿಪಕ್ಷೀಯ ವ್ಯಾಪಾರ ಇಂದು 240 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ. ಔಷಧ, ತಂತ್ರಜ್ಞಾನ, ರಕ್ಷಣಾ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ” ಎಂದರು.

‘NISAR ಕೇವಲ ವಿಜ್ಞಾನವಲ್ಲ, ಜೀವ ಉಳಿಸುವ ತಂತ್ರಜ್ಞಾನ’

ನಾಸಾ-ಇಸ್ರೋ ಜಂಟಿ ಭೂ ವೀಕ್ಷಣಾ ಉಪಗ್ರಹ NISAR ಯೋಜನೆಯನ್ನು ಉಲ್ಲೇಖಿಸಿದ ಗೋರ್, ಇದು ಕೇವಲ ವೈಜ್ಞಾನಿಕ ಸಿದ್ಧಾಂತದ ಸ್ಮಾರಕ ನಿರ್ಮಾಣವಲ್ಲ, ಬದಲಾಗಿ ಜೀವಗಳನ್ನು ಉಳಿಸುವ ತಂತ್ರಜ್ಞಾನವಾಗಿದೆ. ಎರಡು ತಿಂಗಳ ಹಿಂದೆ ವೆನೆಜುವೆಲಾದಲ್ಲಿ ಭೀಕರ ಭೂಕಂಪ ಸಂಭವಿಸಿದಾಗ, NISAR‌ನ ರೇಡಾರ್ ಡೇಟಾ ದಟ್ಟ ಮೋಡ ಮತ್ತು ಧೂಳಿನ ನಡುವೆಯೂ ಕಾರ್ಯನಿರ್ವಹಿಸಿ, ರಕ್ಷಣಾ ಕಾರ್ಯಕರ್ತರಿಗೆ ನೇರವಾಗಿ ಭೂಕಂಪದ ಕೇಂದ್ರಭಾಗ ತಲುಪಲು ನೆರವಾಯಿತು. ನಾವು ಒಟ್ಟಾಗಿ ಕೆಲಸ ಮಾಡಿದಾಗ ಎಂತಹ ಅದ್ಭುತ ಸಾಧನೆ ಸಾಧ್ಯ ಎಂಬುದಕ್ಕೆ ಇದು ಉದಾಹರಣೆ. ಜಂಟಿ ತಂತ್ರಜ್ಞಾನ ನೈಜ ಸಮಯದಲ್ಲಿ ಮಾನವ ಜೀವಗಳನ್ನು ಉಳಿಸುತ್ತಿದೆ” ಎಂದರು.

ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ

ಕಳೆದ ವರ್ಷ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಿತ್ತು. ಅಮೆರಿಕದ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಗೋರ್ ನೆನಪಿಸಿಕೊಂಡರು. “ಆಕ್ಸಿಯಂ-4 ಮಿಷನ್ ಮತ್ತು ಐದು ಜಂಟಿ ವೈಜ್ಞಾನಿಕ ಅಧ್ಯಯನಗಳ ಬಳಿಕ, ಇದೀಗ ಡಾಕಿಂಗ್ ಮಾನದಂಡಗಳು, ಪರಸ್ಪರ ಕಾರ್ಯಸಾಮರ್ಥ್ಯ ಮತ್ತು ಗಗನಯಾತ್ರಿ ತರಬೇತಿಯತ್ತ ನಾವು ಗಮನಹರಿಸುತ್ತಿದ್ದೇವೆ. TRUST ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಸಾಮರ್ಥ್ಯ ಮಹತ್ವಾಕಾಂಕ್ಷೆಯನ್ನು ಸೃಷ್ಟಿಸುತ್ತದೆ” ಎಂದು ಅವರು ಹೇಳಿದರು.

‘ಚಂದ್ರನ ಮೇಲೆ ಭಾರತ ನಮ್ಮ ಜೊತೆ ಇರಲಿ’

ಭಾರತವು ಆರ್ಟೆಮಿಸ್ ಒಪ್ಪಂದಕ್ಕೆ ಹೆಮ್ಮೆಯ ಸಹಿದಾರ ರಾಷ್ಟ್ರವಾಗಿದೆ ಎಂದು ಹೇಳಿದ ಗೋರ್, ಚಂದ್ರನ ಮೇಲಿನ ನೆಲೆಯ ನಿರ್ಮಾಣ ಕಾರ್ಯಕ್ರಮಕ್ಕೆ ಸೇರುವಂತೆ ನಾಸಾ ಅಧಿಕೃತವಾಗಿ ಇಸ್ರೋಗೆ ಆಹ್ವಾನ ನೀಡಿದೆ ಎಂದು ತಿಳಿಸಿದರು.

“ಯಾವುದೇ ಅನುಮಾನ ಬೇಡ. ನಾವು ಮತ್ತೆ ಚಂದ್ರನತ್ತ ತೆರಳುತ್ತಿದ್ದೇವೆ. ಚಂದ್ರನ ಮೇಲಿನ ಈ ಪಯಣದಲ್ಲಿ ಭಾರತ ನಮ್ಮ ಜೊತೆ ಇರಬೇಕೆಂದು ನಾವು ಬಯಸುತ್ತೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸಿವೆ. ಭೂ ವೀಕ್ಷಣೆ, ಬಾಹ್ಯಾಕಾಶ ಪರಿಸ್ಥಿತಿ ಅರಿವು ಮತ್ತು ಉಡಾವಣಾ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳು ಹೊರಹೊಮ್ಮುತ್ತಿವೆ. ಚಂದ್ರ ನಮ್ಮ ಗುರಿಯಾಗಿರಬಹುದು. ಆದರೆ ಈ ಪಯಣದ ನಿಜವಾದ ಎಂಜಿನ್ ನೆಲಮಟ್ಟದ ನಾವೀನ್ಯತೆ. ಅದು ಇಲ್ಲಿನ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳು ಮತ್ತು ವಾಣಿಜ್ಯ ಮಾರುಕಟ್ಟೆಗಳಲ್ಲಿದೆ” ಎಂದು ಗೋರ್ ಹೇಳಿದರು.

US envoy Sergio Gor
ಖಾಸಗಿ ವಲಯಕ್ಕೆ ಪ್ರಮುಖ ಕಾರ್ಯಗಳ ವರ್ಗಾವಣೆ: ವರದಿಗಳ ಬಗ್ಗೆ ಸ್ಪಷ್ಟನೆಗೆ 9 ಇಸ್ರೋ ಉದ್ಯೋಗಿ ಸಂಘಗಳ ಒತ್ತಾಯ!

‘ಭಾರತೀಯ ಬಾಹ್ಯಾಕಾಶ ಉದ್ಯಮಿಗಳಿಗೆ ಅಮೆರಿಕದ ಮಾರುಕಟ್ಟೆ ಮುಕ್ತ’

ಭಾರತೀಯ ಬಾಹ್ಯಾಕಾಶ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ರಾಯಭಾರಿ, ಅಮೆರಿಕದ ಮಾರುಕಟ್ಟೆ ಭಾರತೀಯ ಉದ್ಯಮಿಗಳಿಗೆ ಮುಕ್ತವಾಗಿದೆ ಎಂದು ಹೇಳಿದರು.

“ನಮ್ಮ ಹೂಡಿಕೆದಾರರು ನಿಮ್ಮನ್ನು ಗಮನಿಸುತ್ತಿದ್ದಾರೆ. ನಮ್ಮ ವಾಣಿಜ್ಯ ಪರಿಸರ ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಮುಂದಿನ ದೊಡ್ಡ ಹೆಜ್ಜೆ ಇಡಲು ನಾವು ಸಹಾಯ ಮಾಡಲು ಇಲ್ಲಿದ್ದೇವೆ. ಜಾಗತಿಕ ಬಾಹ್ಯಾಕಾಶ ಆಡಳಿತ ಕ್ಷೇತ್ರದಲ್ಲೂ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಗೋರ್ ತಿಳಿಸಿದರು.

ಶಾಂಘೈನಲ್ಲಿ ನಡೆಯಲಿರುವ ಮುಂಬರುವ ವಿಶ್ವ ರೇಡಿಯೋ ಸಂವಹನ ಸಮ್ಮೇಳನಕ್ಕಾಗಿ ಬಾಹ್ಯಾಕಾಶ ಸಂಚಾರ ಸಮನ್ವಯ ಸೇರಿದಂತೆ ಹಲವು ವಿಚಾರಗಳಲ್ಲಿ ಎರಡೂ ದೇಶಗಳು ಸಹಕರಿಸುತ್ತಿವೆ. ಸರ್ವಾಧಿಕಾರಿ ಪ್ರಾಬಲ್ಯದಿಂದ ಮುಕ್ತ ಹಾಗೂ ನಿಯಮಾಧಾರಿತ ಬಾಹ್ಯಾಕಾಶ ಆಡಳಿತವನ್ನು ರಕ್ಷಿಸಲು ವಾಷಿಂಗ್ಟನ್ ಮತ್ತು ದೆಹಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ” ಎಂದು ಅವರು ಹೇಳಿದರು.

“ಹೀಗಾಗಿ ಬೆಂಗಳೂರಿನಿಂದ ನಾವು ಆಕಾಶದತ್ತ ನೋಡೋಣ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡೋಣ. ಒಟ್ಟಾಗಿ ಚಂದ್ರನತ್ತ ಮರಳೋಣ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವತಂತ್ರ ರಾಷ್ಟ್ರಗಳು ಮುನ್ನಡೆದಾಗ ಇಡೀ ಜಗತ್ತು ಭರವಸೆ ಮತ್ತು ಹೊಸ ಮಹತ್ವಾಕಾಂಕ್ಷೆಯೊಂದಿಗೆ ಮೇಲಕ್ಕೆ ನೋಡುವಂತೆ ಮಾಡೋಣ” ಎಂದು ಗೋರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com