ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

TMC Split: ಪಶ್ಚಿಮ ಬಂಗಾಳದ ವಿಧಾನಸಭೆ ಉಪಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ತೃಣಮೂಲ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಿಗೆ ಹೊಸ ಮಧ್ಯಂತರ ಹೆಸರು ಮತ್ತು ಗುರುತುಗಳನ್ನು ಮಂಜೂರು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
Mamata Banerjee-Ritabrata Banerjee
ಮಮತಾ ಬ್ಯಾನರ್ಜಿ-ಋತಬ್ರತಾ ಬ್ಯಾನರ್ಜಿANI
Updated on

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಒಡೆದು ಎರಡು ಹೊಳಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಜೋಡಾ ಘಾಸ್ ಫೂಲ್' (ಹುಲ್ಲು ಮತ್ತು ಎರಡು ಹೂವುಗಳು) ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಫ್ರೀಜ್ ಮಾಡಿದೆ. ಇದರ ಬೆನಲ್ಲೇ, ಮುಂಬರುವ ಅಕ್ಟೋಬರ್ 6 ರ ವಿಧಾನಸಭಾ ಉಪಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ಎರಡೂ ಬಣಗಳಿಗೆ ಹೊಸ ಮಧ್ಯಂತರ ಹೆಸರು ಮತ್ತು ಗುರುತುಗಳನ್ನು ಮಂಜೂರು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ

ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (Mamata All India Trinamool Congress) ಎಂದು ಹೆಸರಿಡಲಾಗಿದೆ. ಇದರೊಂದಿಗೆ, ಈ ಬಣಕ್ಕೆ ಆಯೋಗವು ಫುಟ್ಬಾಲ್ ಆಟಗಾರ ಗುರುತನ್ನು ನೀಡಿದೆ. ಅದರಲ್ಲೂ, ಮಮತಾ ಬ್ಯಾನರ್ಜಿ ಅವರ ಬಂಗಾಳದ ಜನಪ್ರಿಯ ಖೇಲಾ ಹೋಬೆ (ಆಟ ಶುರುವಾಗಲಿದೆ) ಎಂಬ ಘೋಷಣೆಗೆ ಪೂರಕವಾಗಿ ಈ ಗುರುತು ಸಿಕ್ಕಿರುವುದು ವಿಶೇಷ.

ಮತ್ತೊಂದೆಡೆ, ದೀದಿ ನೇತೃತ್ವದ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅರುಪ್ ರಾಯ್ ಮತ್ತು ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (Democratic Trinamool Congress) ಎಂಬ ಹೆಸರನ್ನು ನೀಡಲಾಗಿದೆ. ಜೊತೆಗೆ ಈ ಬಂಡಾಯ ಬಣಕ್ಕೆ ಆಯೋಗವು ಲಕೋಟೆ ಗುರುತನ್ನು ಅಧಿಕೃತವಾಗಿ ಹಂಚಿಕೆ ಮಾಡಿದೆ.

ಈ ದಿಢೀರ್ ಬದಲಾವಣೆಗೆ ಕಾರಣವೇನು?

ಕಳೆದ ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ನಂತರ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಂಡಿತ್ತು. ಈ ವೇಳೆ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣವು ತಮಗೇ ಬಹುಸಂಖ್ಯಾತ ಶಾಸಕರ ಬೆಂಬಲವಿದೆ ಎಂದು ಹೇಳಿ ಪಕ್ಷದ ಅಧಿಕೃತ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿತ್ತು.

Mamata Banerjee-Ritabrata Banerjee
TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಇದರ ನಡುವೆ, ಅಕ್ಟೋಬರ್ 6, 2026 ರಂದು, ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ವೇಳೆ, ಉಭಯ ಬಣಗಳು ತಾವೇ ನಿಜವಾದ ಟಿಎಂಸಿ ಎಂದು ಹಕ್ಕು ಮಂಡಿಸಿದ್ದರಿಂದ, ಆಯೋಗವು ಸೆಪ್ಟೆಂಬರ್ 17 ರಂದು ಟಿಎಂಸಿಯ ಮೂಲ ಹೆಸರನ್ನು ಹಾಗೂ ಅದರ ಪ್ರಸಿದ್ಧ ಜೋಡಿ ಹೂವು ಮತ್ತು ಹುಲ್ಲು ಗುರುತನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿತ್ತು. ಇದಾದ ನಂತರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎರಡೂ ಬಣಗಳಿಗೆ ತಲಾ 3 ಹೆಸರು ಮತ್ತು ಗುರುತುಗಳ ಆಯ್ಕೆಯನ್ನು ನೀಡುವಂತೆ ಆಯೋಗ ಸೂಚಿಸಿತ್ತು. ಅದರ ಅನ್ವಯ ಈ ಹೊಸ ತೀರ್ಪನ್ನು ನೀಡಲಾಗಿದ್ದು, ಇವೆರಡೂ ಸದ್ಯಕ್ಕೆ ತಾತ್ಕಾಲಿಕ ಗುರುತುಗಳಾಗಿರಲಿವೆ.

ಒಟ್ಟಾರೆಯಾಗಿ, ಇದೀಗ ಎರಡೂ ಬಣಗಳಿಗೆ ಹೊಸದಾಗಿ ಸಿಕ್ಕಿರುವ ಈ 'ಫುಟ್‌ಬಾಲ್ ಆಟಗಾರ' ಮತ್ತು 'ಲಕೋಟೆ' ಚಿಹ್ನೆಗಳು ಮುಂಬರುವ ನಂದಿಗ್ರಾಮ್ ಮತ್ತು ರೆಜಿನಗರ ಉಪಚುನಾವಣೆಗಳಲ್ಲಿ ಪ್ರಮುಖ ಹಣಾಹಣಿಗೆ ಸಾಕ್ಷಿಯಾಗಲಿವೆ. 

Mamata Banerjee-Ritabrata Banerjee
ಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಹತ್ಯೆಗೀಡಾದ ಸಿಎಂ ಸುವೇಂದು ಆಪ್ತ ಸಹಾಯಕನ ತಾಯಿ ಕಣಕ್ಕೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com