ರಾಜಿನಾಮೆ ಕೊಡಿ, ಆಯ್ಕೆ ಜನರಿಗೆ ಬಿಡಿ
ಜನಪರ ಕೆಲಸ ಮಾಡದ ಸರ್ಕಾರ ವಿರುದ್ಧ ಬೆಂಬಲಿಗರ ರಾಜಿನಾಮೆ, ಬಜೆಟ್ ಮಂಡನೆ ತಡೆಯಬೇಕು ಎನ್ನುವುದು ನಮ್ಮ ಉದ್ದೇಶವಲ್ಲ

ಬೆಂಗಳೂರು: ಸದನದಲ್ಲಿ ವಿಶ್ವಾಸಮತ ಯಾಚನೆ ವಿಚಾರ ನಂತರದ್ದು. ಆದರೆ, ತಮ್ಮ ನೇತೃತ್ವದ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ವಾಸ್ತವಾಂಶ ಅರ್ಥಮಾಡಿಕೊಂಡು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.
ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಗ್ರಹ.
ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಅದು ಬಜೆಟ್ ಮಂಡನೆ ಸೇರಿದಂತೆ ಯಾವುದೇ ಸಂವಿಧಾನಾತ್ಮಕ ಕೆಲಸಗಳನ್ನು ಮಾಡುವಂತಿಲ್ಲ. ಈ ವಿಚಾರ ಅರ್ಥ ಮಾಡಿಕೊಂಡು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಈ ಮೂಲಕ ರಾಜ್ಯದ ಜನ ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ರಾಜಕೀಯ ಪರಿಸ್ಥಿತಿ ನೋಡಿದಾಗ ಅಸ್ಥಿರತೆ ಮೂಡಿರುವುದು ಎದ್ದು ಕಾಣುತ್ತದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಈ ಬಗ್ಗೆ ಗಮನಹರಿಸದ ಸರ್ಕಾರ ಜನರ ಪಾಲಿಗೆ ಇದ್ದೂ ಸತ್ತಂತಾಗಿದೆ. ವಿಧಾನಸೌಧ ಖಾಲಿಯಾಗಿದ್ದು, ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ಜತೆಗೆ ಸರ್ಕಾರ ಬಹುಮತವನ್ನೂ ಕಳೆದುಕೊಂಡಿರುವಾಗ ಮುಖ್ಯಮಂತ್ರಿಗಳು ಕುರ್ಚಿಗೆ ಅಂಟಿಕೊಳ್ಳುವ ಕೆಲಸ ಮಾಡದೆ, ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಬಜೆಟ್ ಮಂಡಿಸದಂತೆ ತಡೆಯಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಈ ಎರಡೂ ವಿಚಾರಗಳು ಆಡಳಿತ ನಡೆಸುವ ಪಕ್ಷಕ್ಕೆ ಬಿಟ್ಟದ್ದು. ಜನಪರ ಕೆಲಸ ಮಾಡದ ಸರ್ಕಾರ ಅಧಿಕಾರದಲ್ಲಿರುವುದು ಬೇಡ ಎಂಬ ಕಾರಣಕ್ಕೆ ನನ್ನ ಬೆಂಬಲಿಗರು ರಾಜಿನಾಮೆ ನೀಡುತ್ತಿದ್ದಾರೆಯೇ ಹೊರತು ಸರ್ಕಾರ ಉರುಳಿಸುವ ಉದ್ದೇಶದಿಂದಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು.
ರಾಜ್ಯಪಾಲರ ನಿರ್ಧಾರವೇ ಅಂತಿಮ: ತಮ್ಮ ಬೆಂಬಲಿಗರು ರಾಜಿನಾಮೆ ನೀಡುತ್ತಿರುವುದರಿಂದ ವ್ಯಾವಹಾರಿಕವಾಗಿ ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದು ಜಗಜ್ಜಾಹೀರು. ಹೀಗಾಗಿ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕಾಗುತ್ತದೆ. ಆದರೆ, ಸದನದಲ್ಲೇ ಬಹುಮತ ಸಾಬೀತುಪಡಿಸುವ ವಿಚಾರದ ಬಗ್ಗೆ ಬಿಜೆಪಿ ಸೇರಿದಂತೆ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ರಾಜ್ಯಪಾಲರೇ ಕೈಗೊಳ್ಳಬೇಕಾಗಿದೆ ಎಂದರು.
ಶೆಟ್ಟರ್ ಅವರಿಂದಲೇ ಅನ್ಯಾಯ: ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಪ್ರಯತ್ನಿಸುವ ಮೂಲಕ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದವರಾದ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು. ಹೀಗಾಗಿ ನನ್ನಿಂದ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯವಾಗುತ್ತಿಲ್ಲ. ಜಗದೀಶ್ ಶೆಟ್ಟರ್ ಅವರೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೂ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ ಅವರು, ಇತ್ತೀಚೆಗೆ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆ ಭಾಗದ ಮಹಿಳೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಸಾವಿರ ಮಂಜೂರಾಗಿತ್ತು. ಆದರೆ, ಈ ಕುರಿತು ಮಹಿಳೆಗೆ ನೀಡಿದ ಚೆಕ್ ಮೂರು ಬಾರಿ ವಾಪಸಾಗಿದೆ. ಈ ರೀತಿ ಚಟುವಟಿಕೆಯೇ ಇಲ್ಲದ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ಆಗುವ ಲಾಭವಾದರೂ ಏನು. ಅದಕ್ಕಾಗಿಯೇ ರಾಜಿನಾಮೆ ನೀಡಿ ಜನ ಬಯಸಿದ ಸರ್ಕಾರ ಆಯ್ಕೆ ಮಾಡಲು ಅವಕಾಶ ಕೊಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದೇನೆ ಎಂದರು.
ಮುಕುಡಪ್ಪ ಕೆಜೆಪಿಗೆ
ಅಹಿಂದ ಅಧ್ಯಕ್ಷ ಮುಕುಡಪ್ಪ ಅವರು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕೆಜೆಪಿ ಸೇರಿದ್ದು, ಅವರನ್ನು ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಗುರುವಾರ ಕೆಜೆಪಿ ಪ್ರಚಾರ ಕಚೇರಿಯಲ್ಲಿ ಮುಕುಡಪ್ಪ ಅವರು ಪಕ್ಷ ಸೇರಿಕೊಂಡಿದ್ದಾರೆ. ಇವರೊಂದಿಗೆ ಶಿವಮೊಗ್ಗದ ಸತ್ಯನಾರಾಯಣ ಅವರೂ ಕೆಜೆಪಿ ಸೇರ್ಪಡೆಯಾಗಿದ್ದು, ಅವರನ್ನು ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಕೆಜೆಪಿ ಮೊದಲ ಮಹಿಳಾ ಅಭ್ಯರ್ಥಿ
ಚಿತ್ರದುರ್ಗ ನಗರಸಭೆ ಅಧ್ಯಕ್ಷೆ, ಜೆಡಿಎಸ್ನ ಸುನೀತಾ ಮಲ್ಲಿಕಾರ್ಜುನ್ ಅವರು ಗುರುವಾರ ಕೆಜೆಪಿ ಸೇರಿದ್ದು, ಅವರನ್ನು ಚಿತ್ರದುರ್ಗ ನಗರ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಸುನೀತಾ ಮಲ್ಲಿಕಾರ್ಜುನ್ ಅವರು ಪಕ್ಷದ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಈ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಜೆಪಿಯನ್ನು ಇನ್ನಷ್ಟು ಬಲಪಡಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸುನೀತಾ ಅವರು ಜೆಡಿಎಸ್ ಅಥವಾ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ರಾಜಿನಾಮೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


