ಸಚಿವರ ಬಜೆಟ್ ಭಜನೆ
ರಾಜಕೀಯ ವಿಪ್ಲವದ ನಡುವೆಯೇ ಬಿಜೆಪಿ ಸರ್ಕಾರಕ್ಕೆ ಸಂಖ್ಯಾಬಲದ ಸಂಕಷ್ಟ ಎದುರಾಗಿದೆ. ಆದರೂ ಬಿಜೆಪಿ ಶಾಸಕರು, ಸಚಿವರು ಸಿಎಂ ಶೆಟ್ಟರ್ ಬಜೆಟ್ ಮಂಡಿಸಿಯೇ ಸಿದ್ಧ ಎನ್ನುತ್ತಿದ್ದಾರೆ. ಅದರ ಕೆಲವು ಝಲಕ್ ಇಲ್ಲಿವೆ ಓದಿ...
ತಮ್ಮ ನೇತೃತ್ವದ ಸರ್ಕಾರ ಇದ್ದಾಗಲೂ ಬಿಎಸ್ವೈ ಒಂದಲ್ಲಾ ಒಂದು ರೀತಿ ಕಿರಿಕಿರಿ ಮಾಡಿದರು. ಈಗಲೂ ರಾಜಕೀಯ ಅರಾಜಕತೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕುದ್ದಲ್ಲ. ಯಾರು ಏನೇ ಹೇಳಲಿ, ಕೂಗಾಡಲಿ ಸಿಎಂ ಜಗದೀಶ ಶೆಟ್ಟರ್ ಬಜೆಟ್ ಮಂಡಿಸೋದಂತು ಗ್ಯಾರಂಟಿ.
- ಅರವಿಂದ ಲಿಂಬಾವಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ರಾಜಕೀಯ ಅರಾಜಕತೆ ಉಂಟು ಮಾಡಿ ಸರ್ಕಾರ ಬೀಳಿಸುವುದು ಫಲಿಸುವುದಿಲ್ಲ. ಬಜೆಟ್ ಮಂಡನೆಗೆ ಸಿಎಂ ಶೆಟ್ಟರ್ ಸಕಲ ರೀತಿ ಸಿದ್ಧರಾಗಿದ್ದಾರೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಭವಿಷ್ಯದ ಯೋಜನೆ ಮುಂದಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತದೆ.
- ಸಿ.ಟಿ.ರವಿ, ಉನ್ನತ ಶಿಕ್ಷಣ ಸಚಿವ
ಶೆಟ್ಟರ್ ಸರ್ಕಾರ ಕೆಡವಿದರೆ ಬಿಎಸ್ವೈ ವಿರುದ್ಧ ವೀರಶೈವರೇ ದಂಗೆ ಏಳಲಿದ್ದಾರೆ. ಸಿಎಂ ಬಗ್ಗೆ ಅಗೌರವವಾಗಿ ಮಾತನಾಡುವ ಬಿಎಸ್ವೈ ವರ್ತನೆ ಸರಿಯಲ್ಲ. ಯಾರು ಎಷ್ಟೇ ಗೊಂದಲ ಸೃಷ್ಟಿಸಿದರೂ ಶೆಟ್ಟರ್ ಬಜೆಟ್ ಮಂಡಿಸೋದು ಖಚಿತ. ಈ ಬಗ್ಗೆ ಅನುಮಾನವೇ ಇಲ್ಲ.
- ಕಳಕಪ್ಪ ಬಂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ
ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸಿದರೆ ನಾವು ಅದಕ್ಕೆ ಸಿದ್ಧ. ಅಗತ್ಯ ಬಿದ್ದರೆ ಫೆ.4ರಂದೇ ಬಹುಮತ ಸಾಬೀತು ಮಾಡುತ್ತೇವೆ. ಫೆ.8ಕ್ಕೆ ಶೆಟ್ಟರ್ ಬಜೆಟ್ ಮಂಡಿಸೋದು ನಿಶ್ಚಿತ. ಇದರಲ್ಲಿ ಎಳ್ಳಷ್ಟು ಸಂಶಯವೇ ಬೇಡ.
- ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ
ಸರ್ಕಾರ ಉಳಿಸಿಕೊಳ್ಳಲು ಬಹುಮತ ಸಾಬೀತುಪಡಿಸುವ ಅನಿವಾರ್ಯತೆ ಬಂದರೆ ಬಿಜೆಪಿ ಎಲ್ಲವಕ್ಕೂ ಸಿದ್ಧವಾಗಿದೆ. ಸಿಎಂ ಶೆಟ್ಟರ್ ಬಜೆಟ್ ಮಂಡನೆಗೆ ತಯಾರಾಗಿದ್ದು ನಿಗದಿತ ಸಮಯಕ್ಕೆ ಈ ಕಾರ್ಯ ಸುಸೂತ್ರವಾಗಿ ನಡೆಯಲಿದೆ. ಯಾರ ಅಡ್ಡಿಗೂ ಬೆದರುವುದಿಲ್ಲ.
- ಸಿ.ಪಿ.ಯೋಗೇಶ್ವರ್, ಅರಣ್ಯ ಸಚಿವ
ಸರ್ಕಾರ ಬೀಳಿಸುವ ಮಾತನಾಡುತ್ತಿರುವ ಬಿಎಸ್ವೈ ಹೇಳಿಕೆ ಮೂರ್ಖತನದ್ದು. ಬಹುಮತಕ್ಕೆ ಬೇಕಾದ ಸಂಖ್ಯಾಬಲ ನಮ್ಮಲ್ಲಿದೆ. ಫೆ.4ರಂದೇ ಸಾಬೀತುಪಡಿಸಲು ಸಿದ್ಧ. ಆ ನಂತರ ಶೆಟ್ಟರ್ ಬಜೆಟ್ ಮಂಡಿಸುವುದು ಗ್ಯಾರಂಟಿ.
- ಎಸ್.ಎ.ರವೀಂದ್ರನಾಥ್, ಸಕ್ಕರೆ, ತೋಟಗಾರಿಕೆ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

