ರಾಜಕೀಯ

'ಚದುರಿದ ಚಿತ್ರ'ದುರ್ಗ

Published On :

ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 2ರಲ್ಲಿ ಬಿಜೆಪಿ, 2ರಲ್ಲಿ ಪಕ್ಷೇತರ, ತಲಾ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿದ್ದಾರೆ. 'ಪಕ್ಷೇತರ ಪರ್ವ'ದ ಜತೆಗೆ ಇತರೆ ಪಕ್ಷಗಳ ಕಸರತ್ತಿನ ಕೂಲಂಕಷ ಮಾಹಿತಿ ನಿಮಗಾಗಿ..

ಹೊಳಲ'ಕೆರೆ'ಯಲ್ಲಿ ನೀರು ಕುಡಿವವರಾರು?
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹೊಳಲ್ಕೆರೆ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಚಂದ್ರಪ್ಪ. ಬಿಎಸ್‌ವೈ ಬೆನ್ನತ್ತಿ ಕೆಜೆಪಿಯತ್ತ ಮುಖ ಮಾಡಿದ್ದು ಆ ಪಕ್ಷದಿಂದ ಸ್ಪರ್ಧೆಗೆ ತಯಾರಾಗಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಯಿಂದ ಯು. ವೆಂಕಟೇಶ್ ನಾಯ್ಕ, ಗುಲಗಂಜಿಹಟ್ಟಿ, ಈಶ್ವರ ನಾಯ್ಕ್, ಕುಡಿನೀರಕಟ್ಟೆ ಲಂಬಾಣಿ ಹಟ್ಟಿ, ಶಿವಕುಮಾರ್ ನಾಯ್ಕಾಂಬೆ ಬೆಂಕಿಕೆರೆ, ವಕೀಲ ರಾಮಚಂದ್ರಪ್ಪ ಹೆಸರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್. ಆಂಜನೇಯ, ಜಿ.ಇ. ಮಂಜುನಾಥ್ ಆಕಾಂಕ್ಷಿಗಳು. ಜೆಡಿಎಸ್‌ನಲ್ಲಿ ಬೆಸ್ಕಾಂ ನಿವೃತ್ತ ಎಂಜಿನಿಯರ್ ಎಂ. ಮಹದೇವಪ್ಪ ರಾಮಗಿರಿ, ಗೂಳಿಹಟ್ಟಿ ರುದ್ರೇಶ್, ವಿ. ಸಿದ್ದವನಹಳ್ಳಿ ಸಣ್ಣ ತಿಮ್ಮಣ್ಣ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಚಿತ್ರದುರ್ಗ ಶ್ರೀನಿವಾಸ ಸ್ಪರ್ಧೆ ಬಹುತೇಕ ಖಚಿತವಾಗಿದೆ.

ಯಾರಿಗೆ ತಿನಿಸ್ತಾರೆ 'ಚಳ್ಳೆ'ಕೆರೆ ಹಣ್ಣು?
ಚಳ್ಳಕೆರೆ ಕ್ಷೇತ್ರದಲ್ಲಿ ಪ್ರತಿ ಬಾರಿಯೂ ಅಚ್ಚರಿ ಫಲಿತಾಂಶ. ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ. ಕಾಂಗೆಸ್‌ನಿಂದ ಕಳೆದ ಬಾರಿ ಸೋತಿದ್ದ ನಟ ಶಶಿಕುಮಾರ್, ಟಿ. ರಘುಮೂರ್ತಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ನಾಯಕ ಹೆಸರು ಕೇಳಿ ಬರುತ್ತಿವೆ. ಎಚ್. ಜಗಲ್ಲೂರ ನಾಯಕ, ವಿ.ಎಸ್. ಉಗ್ರಪ್ಪ ಪಕ್ಷ ಬಯಸಿದ್ದಲ್ಲಿ ಸ್ವರ್ಧಿಸಲಿದ್ದಾರೆ. ಬಿಜೆಪಿಯಲ್ಲಿ ಜಿಪಂ ಸದಸ್ಯ ಕೆ.ಜೆ. ಜಯಪಾಲಯ್ಯ, ತಾಪಂ ಸದಸ್ಯ ಮೈಸೂರು ಪಾಲಯ್ಯ, ಪುರಸಭೆ ಮಾಜಿ ಸದಸ್ಯ ಬೋರನಾಯಕ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿದೆ. ಕೆಜೆಪಿಯಿಂದ ಶಾಸಕ ತಿಪ್ಪೇಸ್ವಾಮಿ ಪುತ್ರ ಕೆ.ಟಿ. ಕುಮಾರಸ್ವಾಮಿ ಸ್ಪರ್ಧೆ ಸಾಧ್ಯತೆ ಇದೆ. ಜೆಡಿಎಸ್‌ನಲ್ಲಿ ಪಿ. ತಿಪ್ಪೇಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಓ. ನರಸಿಂಹಮೂರ್ತಿ ನಡುವೆ ಪೈಪೋಟಿ ಇದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಎಲ್. ನಾಗಣ್ಣ, ರೈತ ಸಂಘದಿಂದ ಕೆ.ಪಿ. ಭೂತಯ್ಯ ಕಣಕ್ಕಿಳಿಯಬಹುದು.

ದುರ್ಗದ ಕೋಟೆ ಭೇದಿಸುವವರ್ಯಾರು?
ಬಿಎಸ್‌ವೈ ಹೊಸ ಪಕ್ಷದಿಂದ ಚಿತ್ರದುರ್ಗ ಕ್ಷೇತ್ರದಲ್ಲಿ ಹೊಸ ಸಂಚಲನ ಉಂಟಾಗಿದೆ. ಹಾಲಿ ಶಾಸಕ ಜೆಡಿಎಸ್‌ನ ಎಸ್.ಕೆ. ಬಸವರಾಜನ್. ಈ ಬಾರಿಯೂ ಅವರೇ ಹುರಿಯಾಳು. ಕಳೆದ ಬಾರಿ ಕಾಂಗ್ರೆಸ್‌ನಿಂದ ಸೋತಿದ್ದ ತಿಪ್ಪಾರೆಡ್ಡಿ ಬಿಜೆಪಿ ಸೇರಿ ವಿಪ ಸದಸ್ಯರಾಗಿದ್ದಾರೆ. ಅವರ ಸ್ಪರ್ಧೆ ಬಹುತೇಕ ಖಚಿತ. ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಜಿ.ಎಸ್. ಮಂಜುನಾಥ್, ಮಹಮದ್ ಪಾಷಾ, ಇರ್ಫಾನುಲ್ಲಾ ಷರೀಫ್ ಟಿಕೆಟ್ ಆಕಾಂಕ್ಷಿಗಳು. ಆದರೆ ಕೈ ಸಂಘಟನೆಯಲ್ಲಿ ಶ್ರಮಿಸಿದ್ದ ಭೀಮಸಮುದ್ರದ ಖ್ಯಾತ ಕೃಷಿಕ ಮಂಜುನಾಥ್‌ಗೆ ಟಿಕೆಟ್ ಲಭ್ಯವಾಗಬಹುದು. ಕೆಜೆಪಿಯಿಂದ ಹಾಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರ ಅನಿತ್ ಸಿದ್ದೇಶ್, ಕೆಎಂಎಫ್ ನಿರ್ದೇಶಕ ರೇವಣಸಿದ್ದಪ್ಪ. ಚಳ್ಳಕೆರೆ ಶಾಸಕ ತಿಪ್ಪೇಸ್ವಾಮಿ ಪುತ್ರ ಕೆ.ಟಿ. ಕುಮಾರಸ್ವಾಮಿ ಆಕಾಂಕ್ಷಿಗಳು. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

'ಕೈ' ಹಿಡಿದೀತೇ ಮೊಳಕಾಲ್ಮೂರು?
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮೊಳಕಾಲ್ಮೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಎನ್.ವೈ. ಗೋಪಾಲಕೃಷ್ಣ ಐದನೇ ಬಾರಿ ಆಯ್ಕೆಗೆ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಪಕ್ಷಾಂತರ ಮಾಡುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯಿಂದ ದಾಸರಿ ಕೀರ್ತಿಕುಮಾರ್ ಹೆಸರು ಕೇಳಿ ಬರುತ್ತಿದೆ. ಪಟೇಲ್ ಶಿವರಾಂ ಜೆಡಿಎಸ್ ಬಿಟ್ಟು ಬಿಎಸ್‌ಆರ್ ಕಾಂಗ್ರೆಸ್ ಸೇರಿ ಟಿಕೆಟ್ ಕೇಳುತ್ತಿದ್ದಾರೆ. ಆದರೆ, ಸೋಮಶೇಖರ್ ರೆಡ್ಡಿ ಅವರ ಆಪ್ತ ಬಳ್ಳಾರಿಯ ದಿವಾಕರ್ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದು ಸ್ವಲ್ಪ ಮಟ್ಟಿಗೆ ಗೊಂದಲ ಉಂಟು ಮಾಡಿದೆ. ಜೆಡಿಎಸ್‌ನಿಂದ ಸ್ಪರ್ಧಿಸಲು ಡಾ. ಓಬಣ್ಣ ಪೂಜಾರ್, ಟಿ.ಡಿ. ದೊಡ್ದಯ್ಯ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಹೊಸದುರ್ಗದಲ್ಲಿ 'ಹಳೆ ಗೂಳಿ' ಕಾಳಗ
ಕಾಂಗ್ರೆಸ್, ಜೆಡಿಎಸ್ ಪ್ರಬಲವಾಗಿದ್ದ ಹೊಸದುರ್ಗ ಕ್ಷೇತ್ರದಲ್ಲಿ ಇಲ್ಕಲ್ ವಿಜಯಕುಮಾರ್ ಅವರಿಂದ ಆರಂಭವಾದ 'ಪಕ್ಷೇತರ ಪರ್ವ' ಮುಂದುವರಿದಿದೆ. ಹಾಲಿ ಶಾಸಕ ಗೂಳಿಹಟ್ಟಿ ಶೇಖರ್. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಲಿಂಗಮೂರ್ತಿ ಈ ಬಾರಿ ಕೆಜೆಪಿ ಅಭ್ಯರ್ಥಿ. ಆಲಘಟ್ಟ ಪರಮೇಶ್ವರಪ್ಪ, ಮೋಹನ್ ಕುಮಾರ್ ಅವರ ಬಲ ಕೂಡ ಕೆಜೆಪಿಗಿದೆ. ಬಿಜೆಪಿ ಟಿಕೆಟ್‌ಗಾಗಿ ದೊಡ್ಡಘಟ್ಟ ಲಕ್ಷ್ಮಣ್, ಮಾವಿನಕಟ್ಟೆ ಗುರುಸ್ವಾಮಿ ನಡುವೆ ಸ್ಪರ್ಧೆಯಿದೆ. ಜೆಡಿಎಸ್‌ನಿಂದ ನಂದೀಶ್, ಮಲ್ಲೇಶ್ ನಾಯ್ಕ, ಮೆಂಗಸಂದ್ರ ಗುರುಮೂರ್ತಿ, ಸೌಭಾಗ್ಯ ಬಸವರಾಜನ್ ಹೆಸರು ಕೇಳಿ ಬರುತ್ತಿವೆ. ಪಕ್ಷೇತರರಾಗಿ ಗೂಳಿಹಟ್ಟಿ ಸ್ಪರ್ಧಿಸುವುದು ನಿಕ್ಕಿ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಡಾ.ಸಿ.ಆರ್. ಮಲ್ಲೇಶಪ್ಪ, ಗೋವಿಂದರಾಜ್ ಟಿಕೆಟ್ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಬೆಲಗೂರು ಗೋವಿಂದಪ್ಪ ಸ್ಪರ್ಧಿಸುವುದು ಬಹುತೇಕ ಖಚಿತ.

ಹಿರಿಯೂರಿನಲ್ಲಿ ಗೆದ್ದರೆ ಮಂತ್ರಿ ಗ್ಯಾರಂಟಿ!
ಹಿರಿಯೂರು ಕ್ಷೇತ್ರದಲ್ಲಿ ಗೆದ್ದವರೆಲ್ಲಾ ಮಂತ್ರಿಗಳಾಗುತ್ತಾರೆ! ಕೆ.ಎಚ್. ರಂಗನಾಥ್, ಡಿ. ಮಂಜುನಾಥ್ ಗೆದ್ದಾಗಲೆಲ್ಲಾ ಮಂತ್ರಿಯಾಗಿದ್ದಾರೆ. ಹಾಲಿ ಪಕ್ಷೇತರ ಶಾಸಕ ಡಿ. ಸುಧಾಕರ ಮಂತ್ರಿಯಾಗಿದ್ದರು. ಕ್ಷೇತ್ರ ಮರು ವಿಂಗಡನೆ ಬಳಿಕ ಸಾಮಾನ್ಯವಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಎನ್.ಆರ್. ಲಕ್ಷ್ಮೀಕಾಂತ್ ಜೆಡಿಎಸ್‌ನಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಆದರೆ, ಜೆಡಿಎಸ್‌ನಿಂದ ಡಿ.ಯಶೋಧರ್, ಗೀತಾ ನಂದಿನಿಗೌಡ ಸಹ ಆಕಾಂಕ್ಷಿಗಳು. 17 ವರ್ಷ ಜೆಡಿಎಸ್ ತಾಲೂಕಾಧ್ಯಕ್ಷರಾಗಿದ್ದ ಎಂ. ಜಯಣ್ಣ ಈಗ ಬಿಎಸ್‌ಆರ್ ಕಾಂಗ್ರೆಸ್ ಸ್ಪರ್ಧಿ. ಬಿಜೆಪಿಗೆ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್, ವಿಪ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಉತ್ಸಾಹಿಗಳು. ಕಾಂಗ್ರೆಸ್‌ನಿಂದ ಬಿ.ಎಚ್. ಮಂಜುನಾಥ್, ಮಾಜಿ ಸಂಸದ ಕೋದಂಡರಾಮಯ್ಯ, ಡಿ.ಟಿ. ಶ್ರೀನಿವಾಸ್, ಜಿಲ್ಲಾಧ್ಯಕ್ಷ ಸೇತುರಾಂ, ಮಾಜಿ ಸಚಿವ ಏಕಾಂತಯ್ಯ ಆಕಾಂಕ್ಷಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.