ಕೋಲಾರ ಯಾರು ಸರದಾರ?
ಕೋಲಾರ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 2ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್, ತಲಾ ಒಂದರಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಶಾಸಕರಿದ್ದಾರೆ. ಪಕ್ಷಾಂತರ ಪರ್ವ ನಡೆಯುವ ಸಾಧ್ಯತೆ ಇರುವುದರಿಂದ ಈ ಬಾರಿಯ ಚಿತ್ರಣ ಬದಲಾಗಿದೆ. ಅದೆಲ್ಲಾ ಏನು? ಪಕ್ಷಗಳ ಸ್ಥಿತಿಗತಿ ಹೇಗಿದೆ ಎಂಬುದರ ನೋಟ ನಿಮಗಾಗಿ..
ಶ್ರೀನಿವಾಸಪುರದಲ್ಲಿ 'ರೆಡ್ಡಿ' ಕದನ 'ಸ್ವಾಮಿ'
ಶ್ರೀನಿವಾಸಪುರ ಸಾಮಾನ್ಯ ವರ್ಗಕ್ಕೆ ಮೀಸಲು ಕ್ಷೇತ್ರ. ಹಾಲಿ ಶಾಸಕ ಜೆಡಿಎಸ್ ಜಿ.ಕೆ. ವೆಂಕಟಶಿವಾರೆಡ್ಡಿ. ಈ ಬಾರಿಯೂ ಜೆಡಿಎಸ್ನಿಂದ ಅವರೇ ಹುರಿಯಾಳು. ಕಾಂಗ್ರೆಸ್ನಿಂದ ರಮೇಶಕುಮಾರ್ (ಸ್ವಾಮಿ) ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಕಳೆದ ಬಾರಿ ವಿಧಾನಪರಿಷತ್ಗೆ ಆಯ್ಕೆಯಾಗಿದ್ದ ವೈ.ಎ. ನಾರಾಯಣಸ್ವಾಮಿ, ಲಕ್ಷ್ಮಣಗೌಡ, ಜಿಲ್ಲಾ ಉಪಾಧ್ಯಕ್ಷ ಜಯರಾಂರೆಡ್ಡಿ, ವಕೀಲ ರಾಘವೇಂದ್ರರೆಡ್ಡಿ, ನಾರಾಯಣಸ್ವಾಮಿ ಹೆಸರು ಕೇಳಿ ಬರುತ್ತಿವೆ. ಬಿಜೆಪಿಯಿಂದ ಉಚ್ಛಾಟನೆಗೊಂಡು ಕೆಜೆಪಿ ಸೇರಿರುವ ಶಿವಾರೆಡ್ಡಿ ಈ ಬಾರಿ ಕೆಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
ಮಾಲೂರು ಯಾರ ಪಾಲು ಗುರು?
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮಾಲೂರು ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಎಸ್.ಎನ್. ಕೃಷ್ಣಯ್ಯಶೆಟ್ಟಿ. ಈ ಬಾರಿಯೂ ಅವರೇ ಹುರಿಯಾಳು. ಕಾಂಗ್ರೆಸ್ನಿಂದ ವಕೀಲ ಸೋಮಶೇಖರ್, ರಘುನಾಥ್, ಗೋವಿಂದಪ್ಪ, ಕೃಷ್ಣಸಿಂಗ್ ಹೆಸರು ಕೇಳಿ ಬರುತ್ತಿವೆ. ಅಲ್ಲದೇ ಕೃಷ್ಣಯ್ಯ ಶೆಟ್ಟಿ ಸೆಳೆಯುವ ತಂತ್ರ ಕೂಡ ನಡೆಯುತ್ತಿದೆ. ಕಳೆದ ಬಾರಿ ಜೆಡಿಎಸ್ ಸೇರಿದ್ದ ಎ.ನಾಗರಾಜ ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ. ಜೆಡಿಎಸ್ನಿಂದ ಮಂಜುನಾಥಗೌಡ ಅವರಿಗೆ ಟಿಕೆಟ್ ನೀಡಲಾಗುವುದು ಎಂಬ ಹೇಳಿಕೆ ಹೊರ ಬಿದ್ದಿದ್ದಕ್ಕೆ ಇನ್ನೊಬ್ಬ ಆಕಾಂಕ್ಷಿ ಪ್ರಭಾಕರ್ ಮುನಿಸಿಕೊಂಡಿದ್ದಾರೆ. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ.
ಬಂಗಾರಪೇಟೆ:ನಡೆದಿದೆ ಭರ್ಜರಿ ಮತ ಬೇಟೆ
ಪರಿಶಿಷ್ಟ ಜಾತಿಗೆ ಮೀಸಲಾದ ಬಂಗಾರಪೇಟೆ ಕ್ಷೇತ್ರ ಒಂದೇ ಅವಧಿಯಲ್ಲಿ ಎರಡು ಚುನಾವಣೆ ಕಂಡಿದೆ. ಕಾಂಗ್ರೆಸ್ನಿಂದ ಗೆದ್ದಿದ್ದ ಎಂ. ನಾರಾಯಣಸ್ವಾಮಿ 'ಆಪರೇಷನ್ ಕಮಲ'ಕ್ಕೆ ಬಲಿಯಾಗಿ ಬಿಜೆಪಿಯಿಂದ ಮತ್ತೆ ಗೆದ್ದಿದ್ದಾರೆ. ಈ ಬಾರಿಯೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು ಅವರಿಗೆ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಟಿಕೆಟ್ಗಾಗಿ ಪೈಪೋಟಿ ಒಡ್ಡಿದ್ದಾರೆ. ಜೆಡಿಎಸ್ನಿಂದ ಈಗಾಗಲೇ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪನವರಿಗೆ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ. ಅಲ್ಲದೇ ವೆಂಕಟಮುನಿಯಪ್ಪ ಜೆಡಿಎಸ್ ಟಿಕೆಟ್ಗಾಗಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ನಿಂದ ಕಳೆದ ಉಪಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿರುವ ಉದ್ಯಮಿ ಕೆ.ಎಂ.ನಾರಾಯಣಸ್ವಾಮಿ ಅವರನ್ನೇ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿ ಶೋಧ ನಡೆಯುತ್ತಿದೆ.
ಕೋಲಾರದಲ್ಲಿ ವರ್ತೂರು ನಡೆ ನಿಗೂಢ
2008ರ ಚುನಾವಣೆ ನಂತರ ಕೋಲಾರ ಕ್ಷೇತ್ರದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಮೂಲತಃ ಕಾಂಗ್ರೆಸ್ಸಿಗರಾದ ವರ್ತೂರು ಪ್ರಕಾಶ್ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಪ್ರಬಲವಾಗಿದ್ದು ಮುಂದಿನ ಚುನಾವಣೆಯಲ್ಲೂ ತಮ್ಮ ತಾಕತ್ತು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ, ಯಾವ ಪಕ್ಷ ಎಂದು ಇನ್ನೂ ತೀರ್ಮಾನವಾಗಿಲ್ಲ. ಕಾಂಗ್ರೆಸ್, ಬಿಎಸ್ಆರ್ ಕಾಂಗ್ರೆಸ್, ಕೆಜೆಪಿ, ಬಿಜೆಪಿ ಎಂಬ ಗೊಂದಲದಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸೋತಿದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಈಗ ಜೆಡಿಎಸ್ ಸೇರಿದ್ದು, ಆ ಪಕ್ಷದಿಂದ ಸ್ಪರ್ಧೆಗೆ ಅಣಿಯಾಗಿದ್ದಾರೆ. ಕಾಂಗ್ರೆಸ್ನಿಂದ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ ಸೇರಿದಂತೆ ಹಲವರು ಅರ್ಜಿ ಹಾಕಿದ್ದಾರೆ. ಆದರೆ, ಕೇಂದ್ರ ಸಚಿವ ಮುನಿಯಪ್ಪ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಬಿಜೆಪಿಯಿಂದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ, ತಾಲೂಕಾಧ್ಯಕ್ಷ ಹೂವಳ್ಳಿ ಚಲಪತಿ, ಜಯಂತಿ ಲಾಲ್ ಹೆಸರು ಕೇಳಿ ಬರುತ್ತಿವೆ. ಬಿಎಸ್ಆರ್ ಕಾಂಗ್ರೆಸ್ನಿಂದ ಜಿಪಂ ಸದಸ್ಯ ಎಂ.ಎಸ್.ಆನಂದ್ ಸ್ಪರ್ಧಿಸುವ ಸಾಧ್ಯತೆ ಇದೆ.
ಮುಳ'ಬಾಗಿಲು' ತೆರೆಯುವರಾರು?
ಮುಳಬಾಗಿಲು ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಅಮರೇಶ್. ಆಂತರಿಕ ಕಿತ್ತಾಟದ ನಡುವೆಯೇ ಈ ಬಾರಿಯೂ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ. ಜತೆಗೆ ಕೊತ್ತೂರು ಮಂಜುನಾಥ್, ವೆಂಕಟರಾಮಪ್ಪ, ಪದಕಾಷ್ಠ ಮುನಿವೆಂಕಟಪ್ಪ, ಬೆಂಗಳೂರಿನ ಡಾ. ಮಧುಗಂಗಾಧರ್, ಯಾಮಣ್ಣ, ಕೋಲಾರದ ಕುಮಾರ್, ಬೆಳಗಾನಹಳ್ಳಿ ವೆಂಕಟಮುನಿಯಪ್ಪ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಜೆಡಿಎಸ್ನಿಂದ ಮಾಜಿ ಸಚಿವ ಆಲಂಗೂರು ಶ್ರೀನಿವಾಸ್ ಆಪ್ತ ಮುನಿ ಆಂಜನಪ್ಪ, ಆಲಂಗೂರು ಶಿವಣ್ಣ ಅವರ ಆಪ್ತ ಉದ್ಯಮಿ ಆದಿನಾರಾಯಣ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ, ರಾಜ್ಯ ಕಾರ್ಯದರ್ಶಿ ಸಿ.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅಲುಮೇಲಮ್ಮ, ಸಿ.ವಿ.ಗೋಪಾಲ್ ಟಿಕೆಟ್ಗಾಗಿ ಹವಣಿಸುತ್ತಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ತೇಜಸ್ವಿನಿ, ಶ್ರೀನಿವಾಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದ್ದು ಟಿಕೆಟ್ ಸಿಗದೆ ಮುನಿಸಿಕೊಳ್ಳುವವರನ್ನು ಸೆಳೆದು ಕಣಕ್ಕಿಳಿಸುವ ತಂತ್ರಗಾರಿಕೆಯಲ್ಲ ತೊಡಗಿವೆ.
ಕೆಜಿಎಫ್ನಲ್ಲಿ ಯಾರ ಮುಡಿಗೆ ಚಿನ್ನದ ಕಿರೀಟ?
ವಿಶ್ವಕ್ಕೆ ಚಿನ್ನ ನೀಡಿದ ಕೆಜಿಎಫ್ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹಾಲಿ ಶಾಸಕ ಬಿಜೆಪಿಯ ವೈ. ಸಂಪಂಗಿ. ಹ್ಯಾಟ್ರಿಕ್ ಗೆಲವಿಗೆ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ಬಂಗಾರಪೇಟೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಡಾ.ದಿನಕರನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮುತ್ಯಾಲಮ್ಮ ಕೂಡ ಟಿಕೆಟ್ಗಾಗಿ ದುಂಬಾಲು ಬಿದ್ದಿದ್ದಾರೆ. ಜೆಡಿಎಸ್ನಿಂದ ಮಾಜಿ ಶಾಸಕ ಎಂ.ಭಕ್ತವತ್ಸಲಂ ಕಣಕ್ಕಿಳಿಯುವುದು ಬಹುತೇಕ ಖಚಿತ. ಅಲ್ಲದೇ ಎನ್ಜಿಇಎಫ್ ಮಾಜಿ ಅಧ್ಯಕ್ಷ ವಿ.ಶಂಕರ್ ಕೂಡ ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಎಡತಾಕುತ್ತಿದ್ದಾರೆ. ಕಾಂಗ್ರೆಸ್ನಿಂದ ಕೇಂದ್ರ ಸಚಿವ ಮುನಿಯಪ್ಪ ಅವರ ಪುತ್ರಿ ರೂಪಾ, ಎನ್.ಶ್ರೀನಿವಾಸ್, ವಕೀಲ ಸುಬ್ರಮಣಿ, ಜಯಪಾಲ್, ಎಂ.ಸಂಪತ್ ಕುಮಾರ್ ಹೆಸರುಗಳು ಕೇಳಿ ಬರುತ್ತಿವೆ. ಕೆಜೆಪಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ವೆಂಕಟೇಶ್ ಟಿಕೆಟ್ ಅಕಾಂಕ್ಷಿ. ಬಿಎಸ್ಆರ್ ನಿಲವು ಇನ್ನು ಸ್ಪಷ್ಟವಾಗಿಲ್ಲ. ತಮಿಳರೇ ಹೆಚ್ಚಿರುವುದರಿಂದ ಡಿಎಂಕೆ ಸಹ ಅಭ್ಯರ್ಥಿ ಹಾಕುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

