ಟಿಕೆಟ್ಗಾಗಿ 'ಕೈ' ಪಾಳಯದಲ್ಲಿ ಹೆಚ್ಚಿದ ಗೊಂದಲ
ಕ.ಪ್ರ. ವಾರ್ತೆ ಬಾಗಲಕೋಟೆ ಮಾ.21-
ಸ್ಥಳೀಯ ಸಂಸ್ಥೆಗಳ ಭಾರೀ ಗೆಲುವಿನಿಂದ ಹಿಗ್ಗಿ ಹೋಗಿರುವ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನಲ್ಲಿಗ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮತ್ತೆ ಗೊಂದಲ ಶುರುವಿಟ್ಟುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆಗೆ ಕಾರಣವಾದ ಕಾಂಗ್ರೆಸ್ ನಡಿಗೆ ಕೃಷ್ಣೆಯೆಡೆಗೆ ಪಾದಯಾತ್ರೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇವರೇ ಕಾಂಗ್ರೆಸ್ ಅಭ್ಯರ್ಥಿ, ಭ್ರಷ್ಟ ಆಡಳಿತ ತೊಲಗಿಸಲು ಮತ್ತು ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇವರನ್ನೇ ಗೆಲ್ಲಿಸಿ ಎಂದು ಕಾಂಗ್ರೆಸ್ ಮುಖಂಡರೇ ಮುಂದಾಗಿ ಮತದಾರರಿಗೆ ಪರಿಚಯಿಸಿದವರ ಹೆಸರಿನ ಜತೆ ಈಗ, ಬೇರೆ ಬೇರೆ ವ್ಯಕ್ತಿಗಳ ಹೆಸರೂ ಕೇಳಿಬರುತ್ತಿರುವುದೆ ಈ ಗೊಂದಲಕ್ಕೆ ಕಾರಣ.
ನಡಿಗೆ ಉಸ್ತುವಾರಿ ಗೊಂದಲ: ಕಾಂಗ್ರೆಸ್ ನಡಿಗೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಹುನಗುಂದದಲ್ಲಿ ವಿಜಯಾನಂದ ಕಾಶಪ್ಪನವರ, ಬಾಗಲಕೋಟೆಯಲ್ಲಿ ಹುಲ್ಲಪ್ಪ ಮೇಟಿ, ಮುಧೋಳದಲ್ಲಿ ಆರ್.ಬಿ. ತಿಮ್ಮಾಪುರ, ತೇರದಾಳದಲ್ಲಿ ಉಮಾಶ್ರೀ, ಬೀಳಗಿಯಲ್ಲಿ ಜೆ.ಟಿ. ಪಾಟೀಲ್ ಅವರನ್ನು ಗೆಲ್ಲಿಸಿ ಎಂದು ಜನತೆಗೆ ಕರೆ ನೀಡಿದ್ದರು.
ಆದರೆ, ಅಂದು ನಡಿಗೆಯಲ್ಲಿ ಹೆಜ್ಜೆ ಹಾಕದ ಜಾಫರ್ ಷರೀಪ್, ವೀರಣ್ಣ ಮತ್ತಿಕಟ್ಟಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಬೆಳಗಾವಿ ವಿಭಾಗದ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಉಸ್ತುವಾರಿ ವಹಿಸಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.
ಜಾತಿ, ಹಣ, ಪ್ರಭಾವಗಳ ಮಾನದಂಡ ಬಳಸಿ ಒಂದೊಂದು ಕ್ಷೇತ್ರಕ್ಕೆ ಇಬ್ಬರು, ಮೂವರು, ಐವರ ಹೆಸರುಗಳನ್ನು ಶಿಪಾರಸು ಮಾಡಿದ್ದರಿಂದ, ಈ ಹೆಸರುಗಳು ಬುಧವಾರ ರಾತ್ರಿ ಎಐಸಿಸಿ ಕಚೇರಿ ತಲುಪಿರುವ ಪಟ್ಟಿಯಲ್ಲಿ ಸೇರಿವೆ. ಮೀಸಲಾತಿ, ವಿವಿಧ ವರ್ಗಗಳ ಪ್ರಾಧಾನ್ಯತೆ ಇತ್ಯಾದಿ ಪರಿಗಣನೆಯಿಂದಾಗಿ ಮೊದಲಿದ್ದವರನ್ನು ಬಿಟ್ಟು ಬೇರೆಯವರಿಗೂ ಟಿಕೆಟ್ ಹಂಚಿ ಹೊಗುವ ಸಾಧ್ಯತೆ ಇದೆ.
ಹಲವರ ತೊಡರುಗಾಲು: ಹುನಗುಂದ- ನಡಿಗೆ ವೇಳೆ ಇದ್ದ ಏಕೈಕ ಹೆಸರು ವಿಜಯಾನಂದ ಕಾಶಪ್ಪನವರ. ಈಗ ಟಿಕೆಟಿಗಾಗಿ ವೆಂಕಟೇಶ ಸಾಕಾ ಪೈಪೋಟಿಗೆ ಇಳಿದಿದ್ದಾರೆ. ಕಾಶಪ್ಪನವರ ಕುಟುಂಬದಲ್ಲಿ ದಿ. ಎಸ್.ಆರ್. ಕಾಶಪ್ಪನವರ ಎರಡು ಬಾರಿ ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಅವರ ಪತ್ನಿ ಗೌರಮ್ಮ ಒಂದು ಅವಧಿ ಶಾಸರಾಗಿದ್ದಾರೆ. ಅವರ ಪುತ್ರ ವಿಜಯಾನಂದ ಒಂದು ಬಾರಿ ಸೋಲುಂಡಿದ್ದಾರೆ. ಹಾಗಾಗಿ ಇದೊಂದು ಅವಧಿ ನನಗೆ ನೀಡಿ ಎಂದು ಸಾಕಾ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿ.ಎಂ. ಧರ್ಮಸಿಂಗ್ಗೆ ದುಂಬಾಲು ಬಿದ್ದಿದ್ದಾರೆ.
ಬಿಜೆಪಿ ಶಾಸಕನ ಮಗನಿಗೆ ಕಾಂಗ್ರೆಸ್ ಟಿಕೆಟ್?: ಈ ಎಲ್ಲದರ ಮಧ್ಯೆ ಹಾಲಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪುತ್ರ ರಾಜು ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಹುನ್ನಾರ ನಡೆದಿದೆ. ಕಾರಣ ರಾಜು ಅವರ ಪತ್ನಿ ಗುಲ್ಬರ್ಗದವರು. ಬೀಗರು ಕೂಡ ಖರ್ಗೆ, ಧರ್ಮಸಿಂಗ್ಗೆ ಆಪ್ತರು. ಇವರ ಚುನಾವಣೆಯಲ್ಲಿ ಸಾಕಷ್ಟು ದುಡಿದವರು. ತಮ್ಮ ಅಳಿಯನಿಗೆ ಟಿಕೆಟ್ ನೀಡಲೇಬೇಕು ಎಂದು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರಂತೆ. ಹಾಗಾಗಿ ವಿಜಯಾನಂದ ಕಾಶಪ್ಪನವರ ಸುಂದು ಹೊಡೆದಿದ್ದಾರೆ.
ಮುಧೋಳ ನಗರಸಭೆಯನ್ನು ಕಾಂಗ್ರೆಸ್ ಮಡಿಲಿಗೆ ತಂದುಕೊಂಡು ಮುಂದಿನ ತಮ್ಮ ಚುನಾವಣೆ ಸಲೀಸು ಎಂದು ಬೀಗುತ್ತಿದ್ದ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕಾಲಿಗೆ ಅಲ್ಲಿನ ಸತೀಶ ಬಂಡಿವಡ್ಡರ ತೊಡರು ಹಾಕಿದ್ದಾರೆ. ತಿಮ್ಮಾಪುರ ಬೆನ್ನಿಗೆ ಖರ್ಗೆ ಇದ್ದರೆ, ಬಂಡಿವಡ್ಡರ ಬೆನ್ನಿಗೆ ಎಸ್.ಆರ್. ಪಾಟೀಲ ನಿಂತಿದ್ದಾರೆ ಎನ್ನಲಾಗಿದೆ.
ಬಾದಾಮಿಯಲ್ಲಿ ಟಿಕೆಟ್ ಜಾತ್ರೆ: ಬೀಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಏಕೈಕ ಆಕಾಂಕ್ಷಿ ಎನಿಸಿದ್ದ ಜೆ.ಟಿ. ಪಾಟೀಲ್ ಅವರ ಜತೆಯಲ್ಲಿ ಡಿ.ವಿ. ಪೂಜಾರ ಸೇರಿದಂತೆ ಮೂವರನ್ನು ಕುಸ್ತಿಗೆ ಹಚ್ಚಲಾಗಿದೆ. ತೇರದಾಳ ಕ್ಷೇತ್ರದಲ್ಲಿ ಸೋಲುಂಡಿದ್ದರೂ ಛಲ ಬಿಡದೇ ಜನತೆಯ ಮಧ್ಯೆ ನಿಂತಿದ್ದ ನಟಿ ಉಮಾಶ್ರಿಯನ್ನೂ ಈ ಕಾಂಗ್ರೆಸ್ಸಿಗರು ಕಾಡದೇ ಬಿಟ್ಟಿಲ್ಲ. ಅವರ ಜತೆ ಎರಡು ಹೆಸರುಗಳನ್ನು ಪಟ್ಟಿಯಲ್ಲಿ ತೇಲಿ ಬಿಟ್ಟಿದ್ದಾರೆ.
ಇನ್ನು ಜಮಖಂಡಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಂತೂ ಟಿಕೆಟ್ಗಾಗಿ ದೊಡ್ಡ ಕಾಳಗವೇ ನಡೆದಿದೆ. ಚಿಕ್ಕಪಡಸಲಗಿ ಬ್ಯಾರೇಜ್ ಖ್ಯಾತಿಯ ಸಿದ್ದು ನ್ಯಾಮಗೌಡರ, ಜಗದೀಶ ಗುಡಗುಂಟಿ, ರಾಮಣ್ಣ ಕಲೂತಿ, ಇಲಾಯಿ ಕನ್ನೋಳಿ ಸೇರಿದಂತೆ ಆರು ಮಂದಿಯ ಹೆಸರುಗಳಿವೆ.
ಬಾದಾಮಿ ಕ್ಷೇತ್ರಕ್ಕೆ ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಹಗರಣಗಳಲ್ಲಿ ಮುಳುಗೇಳುತ್ತಿರುವ ಬಿ.ಬಿ. ಚಿಮ್ಮನಕಟ್ಟಿ ಅವರ ಬದಲು ಯುವಕ ಡಾ.ದೇವರಾಜ ಪಾಟೀಲ್, ಮಹೇಶ ಹೊಸಗೌಡ್ರ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಚಿಂತನೆ ನಡೆದಿದೆ. ಆದರೆ, ಈಗ ಎಐಸಿಸಿಗೆ ಹೋಗಿರುವ ಮೊದಲ ಪಟ್ಟಿಯಲ್ಲಿ ಬಿ.ಬಿ. ಚಿಮ್ಮನಕಟ್ಟಿ ಅವರ ಹೆಸರು ಮೊದಲ ಸ್ಥಾನ ಪಡೆದಿದ್ದರೆ, ಕ್ರಮವಾಗಿ ಡಾ. ದೇವರಾಜ ಪಾಟೀಲ್, ಎಂ.ಬಿ. ಹಂಗರಗಿ ಇದ್ದಾರೆ. ಈ ಪಟ್ಟಿ ಪರಿಷ್ಕರಣೆಯಾದರೆ ಮಾತ್ರ ಮಹೇಶ ಹೊಸಗೌಡ್ರ, ಹನುಮಂತ ಮಾವಿನಮರದ ಅವರ ಹೆಸರುಗಳು ಸೇರುವ ಸಾಧ್ಯತೆ ಇದೆ. ಇದೊಂದು ರೀತಿಯಲ್ಲಿ ಟಿಕೆಟ್ ಜಾತ್ರೆ ಎನಿಸಿದೆ.
ಈ ಎಲ್ಲದರ ಮಧ್ಯೆ ನಿಶ್ಚಿಂತೆಯಿಂದ ಇದ್ದವರು ಮಾಜಿ ಸಚಿವ ಹುಲ್ಲಪ್ಪ ಮೇಟಿ. ಬಾಗಲಕೋಟೆ ಕ್ಷೇತ್ರದಿಂದ ಇವರದೊಂದೇ ಹೆಸರು ಟಿಕೆಟ್ಗಾಗಿ ಎಐಸಿಸಿಗೆ ಹೋಗಿದೆ. ಇಷ್ಟರ ಮಟ್ಟಿಗೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಂತಸ ಪಡಬಹುದು ಎನ್ನಬಹುದು.
-ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

