ನೆನೆಗುದಿಗೆ ಬಿದ್ದ 2ಕ್ಕೆ ಕೆಜಿ ಅಕ್ಕಿ
ಕ.ಪ್ರ. ವಾರ್ತೆ ಬೆಂಗಳೂರು ಮಾ.21-
ಟೆಂಡರ್ ಕರೆದಿದ್ದರೂ ನಿಜಾರ್ಥದಲ್ಲಿ ಆರಂಭವಾಗದ ಯೋಜನೆಗಳನ್ನು ಚುನಾವಣೆ ನೀತಿ ಸಂಹಿತೆ ಅಂತ್ಯಗೊಳ್ಳುವ ವರೆಗೆ ಜಾರಿಗೊಳಿಸುವಂತಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಕ್ತ, ನಿರ್ಭೀತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಹೊಸ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಬಾರದು. ಜತೆಗೆ ಇನ್ನು ಆರಂಭವಾಗದ ಯೋಜನೆಗಳಿಗೆ ಚಾಲನೆ ನೀಡುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಗುರುವಾರ ತಿಳಿಸಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಸಾಲು ಸಾಲು ಸಚಿವ ಸಂಪುಟ ಸಭೆ ನಡೆಸಿ ಅನುಮೋದನೆ ಪಡೆದುಕೊಂಡಿರುವ ಯೋಜನೆಗಳನ್ನು ಜಾರಿಗೆ ತರಲು ನೀತಿ ಸಂಹಿತೆ ಅಡ್ಡಿಯಾಗಿದೆ. ಮಾತ್ರವಲ್ಲ ಸರ್ಕಾರದ ಬಹುನಿರೀಕ್ಷಿತ 2ಕ್ಕೆ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೂ ತೊಡಕಾಗಿದೆ.
ಬರ ಪರಿಹಾರ, ಕುಡಿಯುವ ನೀರಿನಂಥ ತುರ್ತು ಕಾಮಗಾರಿ ಹೊರತುಪಡಿಸಿ ಸಂಪುಟ ಅನುಮೋದನೆ ನೀಡಿದ, ಈಗಾಗಲೇ ಟೆಂಡರ್ ಕರೆದ ಆದರೆ ಕಾರ್ಯಾರಂಭಗೊಳ್ಳದ ಯೋಜನೆಗಳಿಗೆ ಚಾಲನೆ ನೀಡಬಾರದು ಎಂದು ಝಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯ ಸಂಪೂರ್ಣ ವಿವರ ಇಂತಿದೆ....
ವೆಚ್ಚದ ಮೇಲೆ ನಿಗಾ : ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಆಯೋಗ ವಿಶೇಷ ಗಮನ ಹರಿಸಲಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ರು. 16 ಲಕ್ಷ ಮೀರಿ ವೆಚ್ಚ ಮಾಡುವಂತಿಲ್ಲ. ಜತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಇದರ ಮೂಲಕವೇ ಖರ್ಚಿನ ಲೆಕ್ಕ ಇಡಬೇಕು.
ಈ ಬಗ್ಗೆ ನಿಗಾ ಇಡಲು ಬ್ಯಾಂಕ್ ಅಧಿಕಾರಿಗಳು, ವಾಣಿಜ್ಯ ತೆರಿಗೆ ಹಾಗೂ ಚುನಾವಣಾ ಆಯೋಗದ ಸದಸ್ಯರ ವಿಶೇಷ ಕಣ್ಗಾವಲು ಪಡೆ ಕೆಲಸ ಮಾಡುತ್ತದೆ. ಮಾತ್ರವಲ್ಲ ಅಭ್ಯರ್ಥಿಗಳ ಪರವಾಗಿ ಯಾರಾದರೂ ಹಣ ಖರ್ಚು ಮಾಡಿದರೆ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ.
ವರ್ಗಾವಣೆ : ಚುನಾವಣಾ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗುವ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಆಯೋಗದ ಗಮನಕ್ಕೆ ತಂದೇ ವರ್ಗಾವಣೆ ಮಾಡಬೇಕು. ಕಳೆದ ಮೂರು ವರ್ಷಗಳಿಂದ ಒಂದೇ ಕಡೆ ಇರುವ, ಹಾಗೂ ಸ್ವಂತ ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.
ವಿಶೇಷ ಭದ್ರತೆ : ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಕೇಂದ್ರ ಭದ್ರತಾ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತದೆ. 500 ತುಕಡಿ ಪ್ಯಾರಾ ಮಿಲಿಟರಿ ಪಡೆ (15 ಸಾವಿರ )ಯನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಗೃಹ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ವಿಶೇಷ ಸಭೆ ನಡೆಸಲು ನಿರ್ಧಾರ.
ಪೊಲೀಸ್ ವೀಕ್ಷಕರು : ಚುನಾವಣೆಯಲ್ಲಿ ಪೊಲೀಸರ ಪಾತ್ರ ಮಹತ್ವ. ಆದರೆ ಕೆಲವೊಮ್ಮೆ ಅವರಿಂದಲೂ ಚುನಾವಣಾ ಅಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೊಬ್ಬರು ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಬೇರೆ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲಾಗುತ್ತದೆ.
4.18 ಕೋಟಿ ನೋಂದಣಿ: ರಾಜ್ಯದಲ್ಲಿ ಇದುವರೆಗೆ 4.18 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಏಪ್ರೀಲ್ 7ರವರೆಗೂ ಪರಿಷ್ಕರಣೆಗೆ ಅವಕಾಶವಿದೆ. 2013, ಜನವರಿ 1ಕ್ಕೆ ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಹೊಸದಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಕೇವಲ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನಕ್ಕೆ ಅವಕಾಶ ಇರುವುದಿಲ್ಲ, ಮತದಾರರ ಪಟ್ಟಿಯಲ್ಲೂ ಹೆಸರಿರಬೇಕು.
ಸ್ಲಿಪ್ ವಿಲೇವಾರಿ : ಇದರ ಜತೆಗೆ ಬಿಬಿಎಂಪಿ ಹಾಗೂ ಆಯಾ ಜಿಲ್ಲೆಗಳಲ್ಲಿ ಚುನಾವಣಾ ಸ್ಲಿಪ್ ತಯಾರಿಸಲಾಗುತ್ತಿದೆ. ಮತದಾನಕ್ಕೆ ಮುನ್ನಾ ದಿನ ಇವುಗಳನ್ನು ತಲುಪಿಸಲಾಗುತ್ತದೆ. ಎಪಿಕ್ ಕಾರ್ಡ್ ಇಲ್ಲದವರು ಈ ಸ್ಲಿಪ್ ತೋರಿಸಿ ಮತದಾನ ಮಾಡಬಹುದು. ಮತದಾರರ ಪಟ್ಟಿಯಲ್ಲಿನ ಲೋಪ ನಿವಾರಣೆ ಕಾರ್ಯವೂ ಆರಂಭಗೊಂಡಿದೆ. ಜತೆಗೆ ಸ್ವೀಪ್ ಎಂಬ ಅಭಿಯಾನ ಆರಂಭಿಸಲಾಗಿದೆ.
ಸಹಾಯವಾಣಿ : ರಾಜ್ಯವ್ಯಾಪಿ ಅನ್ವಯವಾಗುವಂತೆ 1950 ಎಂಬ ಸಹಾಯವಾಣಿ ಆರಂಭಿಸಲಾಗಿದೆ. ಚುನವಣಾ ಅಕ್ರಮ ಸೇರಿದಂತೆ ಎಲ್ಲ ವಿಚಾರಗಳಿಗೂ ಇದನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

