ರಾಜಕೀಯ

ಸವಾಲನ್ನು ಅವಕಾಶವಾಗಿ ಪರಿವರ್ತನೆ: ಜೋಶಿ

Published On :

ನವದೆಹಲಿ: ಇದು ಸಂಕಷ್ಟದ ಕಾಲವಲ್ಲ, ಸವಾಲಿನ ಕಾಲ. ನಾನು ಸವಾಲುಗಳನ್ನು ಅವಕಾಶವಾಗಿ ಪರಿರ್ತಿಸಿಕೊಂಡು ಮುಂದಡಿ ಇಡುತ್ತೇನೆ...
ಇದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ವಿಶ್ವಾಸದ ಮಾತುಗಳು. ನಮ್ಮ ಸರ್ಕಾರದ ಸಾಧನೆಗಳನ್ನು ಮತ್ತು ನಮ್ಮ ತಪ್ಪು ಒಪ್ಪುಗಳೆಲ್ಲವನ್ನು ಜನರ ಮುಂದಿಟ್ಟು ಮತ್ತೆ ಜನರ ವಿಶ್ವಾಸ ಗಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಕೆಲಸ ತಂಡದ ಕೆಲಸ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡವಾಗಿ ಮುನ್ನಡೆಯುತ್ತೇವೆ ಎಂದೂ ಹೇಳಿದ್ದಾರೆ.
ಸದಾನಂದಗೌಡ, ಆರ್. ಅಶೋಕ ಸೇರಿದಂತೆ ಹಲವರ ಹೆಸರುಗಳು ರಾಜ್ಯಾಧ್ಯಕ್ಷರ ಸಂಭವನೀಯರ ಪಟ್ಟಿಯಲ್ಲಿದ್ದವು. ವರಿಷ್ಠರು ವಿಶ್ವಾಸವಿಟ್ಟು ನನ್ನನ್ನು ನೇಮಿಸಿದ್ದಾರೆ. ಇದು ನನ್ನ ಪಾಲಿಗೆ ಗುರುತರ ಜವಾಬ್ದಾರಿ. ನಾನು ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬುಧವಾರವಷ್ಟೆ ಚುನಾವಣೆ ಘೋಷಣೆ ಆಗಿದೆ. ಈ ಹಂತದಲ್ಲಿ ರಾಜ್ಯಾಧ್ಯಕ್ಷನಾಗುವುದು ಕಠಿಣ ಕೆಲಸ. ನಾವೆಲ್ಲರೂ ಸೇರಿ  ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮೆಲ್ಲ ತಪ್ಪು ಒಪ್ಪುಗಳನ್ನು ರಾಜ್ಯದ ಜನತೆ ಮುಂದಿಟ್ಟು ಮತ ಯಾಚಿಸುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ಗೊಂದಲಗಳಿಗೆ ತೆರೆ: ನಮ್ಮ ಪಕ್ಷದಲ್ಲಿ ವಿಶ್ವಾಸದ ಕೊರತೆ ಇತ್ತು. ಅದನ್ನು ಸರಪಡಿಸಿಕೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಗಳ ವಿಭಜನೆ ಆಗಿದ್ದು ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಪಕ್ಷದಲ್ಲಿ ಕೆಲವರು ತಪ್ಪು ಮಾಡಿದ್ದರಿಂದ ಕಳಂಕ ಬಂದಿತ್ತು. ಆದರೆ, ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ಅಂತಹ ಲೋಪಗಳು ನಡೆದಿಲ್ಲ. ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ ಎಂದರು. ಭ್ರಷ್ಚಾಚಾರ ಆರೋಪ ಹೊತ್ತ, ಆದರೆ, ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡುವಿರಾ ಎಂಬ ಪ್ರಶ್ನೆಗೆ ಅಂತಹ ಪರಿಸ್ಥಿತಿ ನಮ್ಮ ಮುಂದಿಲ್ಲ ಎಂದರು.
 ಶ್ರೀರಾಮುಲು ಅವರ ಬಿಆರ್‌ಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಜೋಶಿ ಅವರು ಹೇಳಿದ್ದು- ಈ ಬಗ್ಗೆ ನನಗೇನೂ ಮಾಹಿತಿ ಇಲ್ಲ, ಆದರೆ, ಶ್ರೀರಾಮುಲು ಅವರು ಪಕ್ಷಕ್ಕೆ ಬಂದರೆ ಸ್ವಾಗತ. ಜನಾರ್ದನ ರೆಡ್ಡಿ ಅವರು ನಿಮ್ಮ ಪಕ್ಷದಲ್ಲಿ ಇದ್ದಾರೆಯೇ ಎಂಬ ಪ್ರಶ್ನೆಗೆ, ಅವರು ಒಂದು ವರ್ಷದಿಂದ ಸಂಪರ್ಕದಲ್ಲಿ ಇಲ್ಲ, ಅವರು ಎಲ್ಲಿದ್ದಾರೆ ಎಂಬುದನ್ನು ಅವರನ್ನೇ ಕೇಳಿ ಎಂದರು.   ಈಗ ಭ್ರಷ್ಚಾಚಾರ ಆರೋಪ ಮಾಡುವುದು ಮತ್ತು ಖಾಸಗಿಯಾಗಿ ದೂರು ದಾಖಲಿಸುವುದು ಬಹಳ ಸಲೀಸು. ಭ್ರಷ್ಚಾಚಾರ ವಿಚಾರದಲ್ಲಿ ನಾವು ಅಂತಿಮ ನಿರ್ಧಾರಕ್ಕೆ ಬರಲಾಗದು, ಆರೋಪ ಪಟ್ಟಿ ದಾಖಲಾಗಿದ್ದರೆ, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬಹುದು ಎಂದು ತಿಳಿಸಿದರು.
ಶುಕ್ರವಾರದಿಂದಲೇ ಚುನಾವಣೆ ಅಭಿಯಾನ: ವಿಧಾನಸಭಾ ಚುನಾವಣೆಗೆ ಶುಕ್ರವಾರದಿಂದಲೇ ಮೈಸೂರಿನಿಂದ ಪ್ರಚಾರ ಅಭಿಯಾನ ಪ್ರಾರಂಭವಾಗಲಿದೆ. ಈ ಚುನಾವಣಾ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಸೇರಿದಂತೆ ಎಲ್ಲ ರಾಷ್ಟ್ರೀಯ ನಾಯಕರು ಆಗಮಿಸುತ್ತಾರೆಂದರು.
ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ತಡವಾಗಿಯಾದರೂ ಪಕ್ಷದ ವರಿಷ್ಠರು ಜೋಶಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸಂಸದ ಶಿವರಾಮೇಗೌಡ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.