ರಾಜಕೀಯ

ಪಕ್ಷಗಳಲ್ಲೀಗ ಟಿಕೆಟ್ ಜಪ

ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದರೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಇನ್ನೂ ಗರಿಗೆದರಿಲ್ಲ.

ಪಕ್ಷಗಳಲ್ಲೀಗ ಟಿಕೆಟ್ ಜಪ
Published On :

ಕ.ಪ್ರ. ವಾರ್ತೆ ಬೆಂಗಳೂರು ಮಾ.22-
ರಾಜಕೀಯ ಪಕ್ಷಗಳಲ್ಲಿ ಇದೀಗ ಟಿಕೆಟ್ ಜಪ.
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದರೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಇನ್ನೂ ಗರಿಗೆದರಿಲ್ಲ. ಕಾರಣ, ಮೊದಲು ಟಿಕೆಟ್ ಘೋಷಣೆಯಾಗಲಿ, ಬಳಿಕ ಮುಂದಿನ ಕಥೆ ಎಂಬ ನಿರ್ಧಾರಕ್ಕೆ ಆಕಾಂಕ್ಷಿಗಳು ಬಂದಿದ್ದಾರೆ.
ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನವೇ ಸುಮಾರು ಆರು ತಿಂಗಳಿಂದ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಹೇಳಿಕೊಂಡು, ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದವರೂ ಇದೀಗ ಅದಕ್ಕೆ ವಿರಾಮ ಹಾಕಿದ್ದಾರೆ. 'ಅಧಿಕೃತವಾಗಿ ಟಿಕೆಟ್ ಘೋಷಣೆ ಆಗಲಿ, ಆಮೇಲೆ ಎಲ್ಲ' ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ಈಗ ಟಿಕೆಟ್‌ನತ್ತಲೇ ಎಲ್ಲ ಪ್ರಕ್ರಿಯೆಗಳು ಕೇಂದ್ರೀಕೃತವಾಗಿವೆ. ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಟಿಕೆಟ್ ನನಗೇ ಸಿಗುತ್ತದೆ ಎಂಬ ಉತ್ಸಾಹ ಸಾಕಷ್ಟು ಆಕಾಂಕ್ಷಿಗಳಲ್ಲಿ ಇತ್ತು. ಹೀಗಾಗಿ ಕೆಲವರು ಆಯಾ ಕ್ಷೇತ್ರಗಳಲ್ಲಿ ಕೆಲಸವನ್ನೂ ಆರಂಭಿಸಿದ್ದರು. ಒಂದೇ ಪಕ್ಷದ ಒಬ್ಬರಿಗಿಂತ ಹೆಚ್ಚು ಮಂದಿ ಅನಧಿಕೃತವಾಗಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ಇದೀಗ ಅದೆಲ್ಲಕ್ಕೂ ಬ್ರೇಕ್ ಬಿದ್ದಿದೆ.
ಚುನಾವಣೆ ದಿನಾಂಕ ಪ್ರಕಟವಾಯಿತಲ್ಲ, ಟಿಕೆಟ್ ಯಾರಿಗೆ ಎಂಬುದೂ ಇತ್ಯರ್ಥವಾಗಲಿ. ಎದುರಾಳಿಯನ್ನು ನೋಡಿಕೊಂಡು ಯೋಜನೆ ರೂಪಿಸೋಣ ಎಂಬ ತಂತ್ರಕ್ಕೆ ಶರಣಾಗಿದ್ದಾರೆ. ಟಿಕೆಟ್‌ಗಾಗಿ ಉಂಟಾಗಿರುವ ಪೈಪೋಟಿಯೂ ಕಾದು ನೋಡುವ ತಂತ್ರಕ್ಕೆ ಪ್ರಮುಖ ಕಾರಣವಾಗಿದೆ.
ಚಾತಕ ಪಕ್ಷಿ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಅಕ್ಷರಶಃ ಚಾತಕ ಪಕ್ಷಿಗಳಾಗಿದ್ದಾರೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದು ಎಲ್ಲ ಪಕ್ಷಗಳ ನಾಯಕರು ಆಗಾಗ್ಗೆ ಹೇಳುತ್ತಿದ್ದಾರೆ. ಆದರೆ ಶೀಘ್ರ ಎಂಬುದು ಇನ್ನೂ ಅಂತ್ಯ ಕಂಡಿಲ್ಲ. ಇದು ಆಕ್ಷಾಂಕ್ಷಿಗಳಲ್ಲಿ ಕಾತರ ಹೆಚ್ಚಿಸುತ್ತಿದೆ. ಅವರು ಅತ್ತ ಕ್ಷೇತ್ರದತ್ತಲೂ ಮುಖಮಾಡಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಇತ್ತ ಟಿಕೆಟ್‌ಗಾಗಿ ಲಾಬಿ ಮಾಡದೆ ಸುಮ್ಮನೆ ಕೂರುವಂತೆಯೂ ಇಲ್ಲ.
ಆಕ್ಷಾಂಕ್ಷಿಗಳ ಪರಿಸ್ಥಿತಿ ಹೀಗಿದ್ದರೆ, ಇನ್ನು ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಇರುವುದರಿಂದ ಯಾರನ್ನು ಓಕೆ ಮಾಡುವುದು ಎಂಬ ಬಗ್ಗೆ ರಾಜಕೀಯ ಪಕ್ಷಗಳ ನಾಯಕರಿಗೆ ತಲೆ ಬಿಸಿಯಾಗಿದೆ. ದಿನ- ರಾತ್ರಿ ಕುಳಿತು ಚರ್ಚೆ ನಡೆಸಿ, ಎಲ್ಲ ರೀತಿಯಲ್ಲೂ ತಾಳೆ ಹಾಕಿದರೂ ಹಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳೇ ಉಳಿಯುತ್ತಾರೆ. ಇದನ್ನೆಲ್ಲ ನಿಭಾಯಿಸಿಕೊಳ್ಳಬೇಕು. ಬಂಡಾಯ ತಲೆದೋರದಂತೆ ಎಚ್ಚರವನ್ನೂ ವಹಿಸಬೇಕು. ಸಮಾಧಾನಗೊಳಿಸುವ ಪ್ರಕ್ರಿಯೆಯೂ ನಡೆಯಬೇಕು. ಹೀಗಾಗಿ ಮುಖಂಡರು ನಿದ್ದೆ ಬಿಟ್ಟು, ಈ ಪ್ರಕ್ರಿಯೆ ಮುಗಿಸಲು ತಲ್ಲೀನರಾಗಿದ್ದಾರೆ.
ಪ್ರಬಲ ಆಕಾಂಕ್ಷಿಗಳ ನಡುವಿನ ಪೈಪೋಟಿ ಇತರೆ ಕ್ಷೇತ್ರಗಳಲ್ಲಿನ ಟಿಕೆಟ್ ಪ್ರಕಟಣೆಗೂ ತಡೆಯಾಗಿದೆ. ಒಂದೇ ದಿನ ಚುನಾವಣೆ ನಡೆಯುವುದರಿಂದ 224 ಕ್ಷೇತ್ರಗಳಿಗೂ ಒಟ್ಟಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕೆಂಬ ಯೋಜನೇ ರಾಜಕೀಯ ಪಕ್ಷಗಳ ನಾಯಕರದ್ದಾಗಿದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ. ಯಾವುದೇ ಪಕ್ಷ ಒಂದೇ ಪಟ್ಟಿಯಲ್ಲಿ 224 ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಹಸ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ನಂತರ ನಿರ್ಧರಿಸೋಣ: ಅವರು ಮಾಡಲಿ, ಅಲ್ಲಿಂದ ಕೆಲವು ಗೆಲ್ಲುವ ಕುದುರೆಗಳು ಬರಬಹುದು. ನಂತರ ನಿರ್ಧರಿಸಬಹುದು ಎಂದು ಕೆಲವು ಪಕ್ಷಗಳು ನಿಧಾನಗತಿಯನ್ನೂ ಅಳವಡಿಸಿಕೊಂಡಿದ್ದರೆ, ಇನ್ನು ಕೆಲವೆಡೆ ಈಗಲೇ ಪ್ರಕಟಿಸಿದರೆ ಅಸಮಾಧಾನಗೊಂಡವರು ಬೇರೆ ಪಕ್ಷಕ್ಕೆ ಸೇರಿಕೊಂಡು ಸ್ಪರ್ಧಿಯಾಗುತ್ತಾರೆ. ಅದಕ್ಕೆ ಕೊನೆ ದಿನದವರೆಗೂ ಪ್ರಕ್ರಿಯೆ ನಡೆಸುವ ಹಿಂದಿನ ಆಟವನ್ನೇ ಮುಂದುವರಿಸಲು ಆಲೋಚಿಸುತ್ತಿವೆ.
ಹೀಗೆ ರಾಜಕೀಯ ಲೆಕ್ಕಾಚಾರದಲ್ಲಿ ಒಂದೊಂದು ಪಕ್ಷದಲ್ಲಿ ಒಂದೊಂದು ರೀತಿಯದ್ದಾಗಿದೆ. ಆದರೆ ಆಕಾಂಕ್ಷಿಗಳು ಪ್ರತಿಕ್ಷಣವೂ ಬಾಣಲಿಯಿಂದ ಬೆಂಕಿಗೆ ಬಿದ್ದವರಂತೆ ಪರಿತಪಿಸುತ್ತಿದ್ದಾರೆ. 'ಟಿಕೆಟ್ ಘೋಷಣೆ ಮಾಡಿದರೆ ಕ್ಷೇತ್ರದಲ್ಲಿ ಕೆಲಸವನ್ನಾದರೂ ಮಾಡಬಹುದು, ಅಲ್ಲೂ ಕೆಲಸ ಆಗುತ್ತಿಲ್ಲ, ಇಲ್ಲೂ ಆಗುತ್ತಿಲ್ಲ', 'ಇವರು ಇಲ್ಲ ಅಂದರೆ ಬೇರೆಕಡೆ ಹೋಗಬಹುದು, ಇವರು ತಡ ಮಾಡಿದರೆ ಅಲ್ಲೂ ಮಿಸ್ ಆಗುತ್ತದೆ', 'ಇವರು ಕೊಡಲ್ಲ ಅಂದುಬಿಡಲಿ, ಸ್ವತಂತ್ರವಾಗಿ ಗೆದ್ದು ತೋರಿಸುತ್ತೇನೆ' ಎಂಬ ಈ ರೀತಿಯ ಮನಸ್ಥಿತಿ ಆಕ್ಷಾಂಕ್ಷಿಗಳದ್ದಾಗಿದೆ. ಇನ್ನು ಚುನಾವಣೆ ಪ್ರಣಾಳಿಕೆ ಬಗ್ಗೆ ರಾಜಕೀಯ ನಾಯಕರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಪ್ರಣಾಳಿಕೆಯಲ್ಲಿ ಮತದಾರರನ್ನು ಆಕರ್ಷಿಸುವ ಯೋಜನೆಗಳು ಹಾಗೂ ವಿಷಯಗಳನ್ನು ಅಳವಡಿಸಿಕೊಳ್ಳಬೇಕು, ಎಲ್ಲರಿಗಿಂತ ಭಿನ್ನವಾಗಿರಬೇಕೆಂಬ ಅಭಿಲಾಷೆ ಎಲ್ಲ ಪಕ್ಷಗಳಲ್ಲೂ ತುಡಿಯುತ್ತಿದೆ. ಹೀಗಾಗಿ, ಇದನ್ನು ಸಿದ್ಧಪಡಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ.
ಒಟ್ಟಾರೆ ರಾಜಕೀಯ ಪಕ್ಷದಲ್ಲಿ ಆತುರ, ಕಾತರ, ಗೊಂದಲ, ಪೈಪೋಟಿ, ಯೋಜನೆಗಳಿಗೆ ಪ್ರಾಶಸ್ತ್ಯ. ನಂತರ ಆರೋಪ, ಪ್ರತ್ಯಾರೋಪ, ಹೊಗಳಿಕೆ, ತೆಗಳಿಕೆಯದ್ದೇ ಕಾರುಬಾರು. ಇನ್ನು 45ದಿನ ರಾಜ್ಯದಲ್ಲಿ ರಾಜಕಾರಣವೇ ಪ್ರತಿಯೊಂದಕ್ಕೂ ಕಾರಣವಾಗಿರುತ್ತದೆ.

-ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.