ಮೈತ್ರಿಯ ಮಾತೇ ಇಲ್ಲ
ರಾಷ್ಟ್ರದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವನ್ನು ನೀಡಿದ ಬಿಜೆಪಿಯೊಂದಿಗೆ ಚುನಾವಣೆ ಪೂರ್ವ ಅಥವಾ ನಂತರ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ...

ಕ.ಪ್ರ. ವಾರ್ತೆ ಬೆಂಗಳೂರು ಮಾ.23
ರಾಷ್ಟ್ರದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವನ್ನು ನೀಡಿದ ಬಿಜೆಪಿಯೊಂದಿಗೆ ಚುನಾವಣೆ ಪೂರ್ವ ಅಥವಾ ನಂತರ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ, ಆರ್ಎಸ್ಎಸ್ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರು ಜೆಡಿಎಸ್ನೊಂದಿಗೆ ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡು ಕೆಲಸ ಮಾಡುತ್ತಿದೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ನಾಣಯ್ಯ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಸ್ಪಷ್ಟಪಡಿಸಿದರು.
ಜೆಡಿಎಸ್ ತನ್ನದೇ ನೀತಿ ಹಾಗೂ ಚಿಂತನೆ ಹೊಂದಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಅಥವಾ ಸಂಬಂಧ ಬೇಡ ಎಂದು ನಿರ್ಧರಿಸಲಾಗಿದೆ. ಬಿಜೆಪಿ ಮುಖಂಡರೇ ಹೊಂದಾಣಿಕೆ ಇದೆ ಎಂದು ಕುತಂತ್ರ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರು ಪಕ್ಷಕ್ಕೆ ಮತ ಹಾಕಬಾರದು ಎಂದು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಬೀಳುತ್ತದೆ. ಇದು ಆ ಪಕ್ಷದ ನಾಯಕರಿಗೂ ಅರಿವಾಗಿದೆ. ಹೀಗಾಗಿ, ಯಾವುದೇ ಅಸ್ತ್ರ ಇಲ್ಲದೆ ಜೆಡಿಎಸ್ ಮೇಲೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿದ್ದಾರೆ. ನಾವು ಎರಡನೇ ಸ್ಥಾನದಲ್ಲಿದ್ದು ಒಂದನೇ ಸ್ಥಾನಕ್ಕೆ ಬರುವುದನ್ನು ಯಾರೂ ತಪ್ಪಿಸಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆಯ ನಂತರ ಅತಂತ್ರ ಪರಿಸ್ಥಿತಿ ಉಂಟಾಗುತ್ತದೆ ಎಂಬ ಆಲೋಚನೆ ಅಥವಾ ಪ್ರಚಾರ ತಪ್ಪಾಗುತ್ತವೆ. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಅದನ್ನು ಜೆಡಿಎಸ್ ಜನತೆಯ ಮುಂದಿಟ್ಟಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಮಾಡಬೇಕಾದ ಕೆಲಸವನ್ನು ಜೆಡಿಎಸ್ ಮಾಡಿದೆ. ಭ್ರಷ್ಟಾಚಾರ ನಡೆಸಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಯಾವ ಹೋರಾಟವನ್ನೂ ಮಾಡಲಿಲ್ಲ. ಇದೆಲ್ಲವೂ ಜನತೆಗೆ ಅರಿವಾಗಿದ್ದು, ಜೆಡಿಎಸ್ಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದರು.
ಚುನಾವಣೆ ಆಯೋಗಕ್ಕೆ ಮನವಿ: ಬಿಜೆಪಿ ಸರ್ಕಾರ ಅಂತಿಮ ಸಮಯದಲ್ಲಿ ಸಚಿವ ಸಂಪುಟದಲ್ಲಿ ಹಲವಾರು ನಿರ್ಣಯಗಳನ್ನು ತೆಗೆದುಕೊಂಡಿದೆ. ಇದಾವುದೂ ಅನುಷ್ಠಾನ ಆಗುವಂತಿಲ್ಲ ಎಂದು ಚುನಾವಣೆ ಆಯೋಗ ತಿಳಿಸಿದೆ. ಈ ಬಗ್ಗೆ ಲಿಖತವಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಬೇಕು ಎಂದು ಚುನಾವಣೆ ಆಯೋಗಕ್ಕೆ ಜೆಡಿಎಸ್ ಮನವಿ ಮಾಡಿಕೊಳ್ಳುತ್ತದೆ ಎಂದು ನಾಣಯ್ಯ ತಿಳಿಸಿದರು.
ಅಲ್ಲದೆ, ದೊಂಬಿಯಲ್ಲಿ ಭಾಗವಹಿಸಿದ್ದವರ ಮೇಲಿನ ಮೊಕದ್ದಮೆಗಳನ್ನೂ ಕೊನೆಯ ಗಳಿಗೆಯಲ್ಲಿ ವಾಪಸ್ ಪಡೆಯಲು ನಿರ್ಣಯಿಸಲಾಗಿದೆ. ಈ ಪ್ರಕ್ರಿಯೆ ನಡೆಯಬಾರದು ಎಂದು ನಾವು ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ಕೆಲವು ರೈತರ ಮೇಲಿನ ಮೊಕದ್ದಮೆ ವಾಪಸ್ ಪಡೆದಿರಬಹುದು. ಆದರೆ, ಇಷ್ಟು ದಿನ ಅವರ ಮೇಲೇಕೆ ಕನಿಕರ ಬರಲಿಲ್ಲ. ಇದು ಬಿಜೆಪಿಯ ರಾಜಕಾರಣದ ವಿಷಯ ಅಷ್ಟೇ ಎಂದರು.
ಹಿಂದಿನ ದಿನಾಂಕದಲ್ಲಿ ಸಹಿಗಾಗಿ ದುಂಬಾಲು: ಹೊರಟ್ಟಿ
ಹಿಂದಿನ ದಿನಾಂಕದಲ್ಲಿ ಸಹಿ ಮಾಡಿಕೊಡಿ ಎಂದು ಸರ್ಕಾರಿ ಅಧಿಕಾರಿಗಳ ಮೇಲೆ ಬಿಜೆಪಿ ಸಚಿವರು ಹಾಗೂ ಶಾಸಕರು ದುಂಬಾಲು ಬೀಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜಹೊರಟ್ಟಿ ಆರೋಪಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವ ಹೊಸ ಕಾರ್ಯಕ್ಕೂ ಅವಕಾಶವಿಲ್ಲ. ಆದರೆ, ಹಿಂದಿನ ದಿನಾಂಕ ಹಾಕಿ ಸಹಿ ಮಾಡಿಕೊಡಿ ಎಂದು ಅಕ್ರಮ ನಡೆಸಲು ಸಚಿವರು ಹಾಗೂ ಶಾಸಕರು ಮುಂದಾಗಿದ್ದಾರೆ. ಈಗಾಗಲೇ ಹಲವು ರೀತಿಯ ಭ್ರಷ್ಟಾಚಾರ ಮಾಡಿರುವ ಈ ಬಿಜೆಪಿ ಸರ್ಕಾರ, ಕೊನೆಯಲ್ಲೂ ಅದೇ ಚಾಳಿ ಮುಂದುವರಿಸಿರುವುದು ನಾಚಿಕೆಗೇಡು ಎಂದು ಟೀಕಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ಗೆ ಹಿಂದಿನ ದಿನಾಂಕ ನಮೂದಿಸಿ ಸದಸ್ಯರನ್ನು ಬಿಜೆಪಿ ಸರ್ಕಾರ ನೇಮಕ ಮಾಡಿದೆ. ಇದೂ ಅಕ್ರಮವಾಗಿದ್ದು, ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


