ರಾಜಕೀಯ

ಮೈಸೂರು: ಕಾಂಗ್ರೆಸ್- ಜೆಡಿಎಸ್ ದೊಡ್ಡಾಟ

Published On :

ಕ.ಪ್ರ. ವಾರ್ತೆ ಮೈಸೂರು ಮಾ.23
ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹೋರಾಟ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಹಾಗೂ ಕೆಜೆಪಿ ಪೈಪೋಟಿ ನೀಡುವ ಸ್ಥಿತಿಯಲ್ಲಿವೆ.
ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ ಬಾರಿ ಕಾಂಗ್ರೆಸ್- 8, ಬಿಜೆಪಿ- 2 ಹಾಗೂ ಜೆಡಿಎಸ್- 1 ಸ್ಥಾನ ಗಳಿಸಿದ್ದವು. ಕೃಷ್ಣರಾಜ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್, ಕೆಜೆಪಿಯ ಎಚ್.ವಿ.ರಾಜೀವ್, ಜೆಡಿಎಸ್‌ನ ಎಚ್. ವಾಸು ಅವರನ್ನು ಎದುರಿಸಬೇಕಿದೆ. ಚಾಮರಾಜ ಕ್ಷೇತ್ರವನ್ನು ಹಾಲಿ ಬಿಜೆಪಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಪ್ರತಿನಿಧಿಸುತ್ತಿದ್ದು, ಈ ಬಾರಿ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನ ವಾಸು, ಬಿಜೆಪಿಯ ಎಲ್. ನಾಗೇಂದ್ರ ಅವರನ್ನು ಎದುರಿಸಬೇಕಿದೆ. ಕೆಜೆಪಿ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿದೆ.
ನರಸಿಂಹರಾಜ ಕ್ಷೇತ್ರವನ್ನು ಕಾಂಗ್ರೆಸ್‌ನ ತನ್ವೀರ್ ಸೇಠ್ ಪ್ರತಿನಿಧಿಸುತ್ತಿದ್ದು, ಅವರು ಬಿಜೆಪಿಯ ಇ.ಮಾರುತಿರಾವ್ ಪವಾರ್, ಜೆಡಿಎಸ್‌ನ ಸಂದೇಶ್‌ಸ್ವಾಮಿ ಅವರೊಂದಿಗೆ ಪೈಪೋಟಿ ನಡೆಸಬೇಕಿದೆ. ಕೆಜೆಪಿ ಹಾಗೂ ಎಸ್‌ಡಿಪಿಐ ಅಭ್ಯರ್ಥಿಗಳು ಇನ್ನೂ ಅಂತಿಮವಾಗಿಲ್ಲ.
ಚಾಮುಂಡೇಶ್ವರಿ ಕ್ಷೇತ್ರವನ್ನು ಕಾಂಗ್ರೆಸ್‌ನ ಎಂ.ಸತ್ಯನಾರಾಯಣ ಪ್ರತಿನಿಧಿಸುತ್ತಿದ್ದು, ಜೆಡಿಎಸ್‌ನ ಜಿ.ಟಿ. ದೇವೇಗೌಡ ಅಥವಾ ಸಿ.ಎನ್. ಮಂಜೇಗೌಡ, ಕೆಜೆಪಿಯ ಎಂ. ಅಪ್ಪಣ್ಣ ಅವರನ್ನು ಎದುರಿಸಬೇಕಿದೆ. ಬಿಜೆಪಿಯ ಅಭ್ಯರ್ಥಿ ಅಂತಿಮವಾಗಿಲ್ಲ.
ವರುಣಾ ಕ್ಷೇತ್ರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದು, ಕೆಜೆಪಿಯ ಕಾ.ಪು. ಸಿದ್ದಲಿಂಗಸ್ವಾಮಿ ಇಲ್ಲಿ ಪ್ರಮುಖ ಎದುರಾಳಿ. ಜೆಡಿಎಸ್‌ನಿಂದ ನಿವೃತ್ತ ಎಸಿಪಿ ಚಲುವರಾಜು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಅಭ್ಯರ್ಥಿ ಅಂತಿಮವಾಗಿಲ್ಲ.
ನಂಜನಗೂಡು ಕ್ಷೇತ್ರವನ್ನು ಕಾಂಗ್ರೆಸ್‌ನ ವಿ. ಶ್ರೀನಿವಾಸಪ್ರಸಾದ್ ಪ್ರತಿನಿಧಿಸುತ್ತಿದ್ದು, ಕೆಜೆಪಿಯಿಂದ ಎಸ್.ಮಹದೇವಯ್ಯ, ಜೆಡಿಎಸ್‌ನಿಂದ ಕಳಲೆ ಕೇಶವಮೂರ್ತಿ ಕಣಕ್ಕಿಳಿಯಲಿದ್ದಾರೆ. ಈ ಮೂವರು ಕಳೆದ ಬಾರಿಯೂ ಮುಖಾಮುಖಿಯಾಗಿದ್ದರು. ಬಿಜೆಪಿಯಿಂದ ಜಿಪಂ ಮಾಜಿ ಉಪಾಧ್ಯಕ್ಷ ಡಾ. ಶಿವರಾಂ ಸ್ಪರ್ಧಿಸಬಹುದು.
ಟಿ. ನರಸೀಪುರ ಕ್ಷೇತ್ರವನ್ನು ಕಾಂಗ್ರೆಸ್‌ನ ಡಾ.ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುತ್ತಿದ್ದಾರೆ. ಜೆಡಿಎಸ್‌ನಿಂದ ಸುಂದರೇಶನ್, ಕೆಜೆಪಿಯಿಂದ ಡಾ.ಎನ್.ಎಲ್. ಭಾರತೀಶಂಕರ್, ಬಿಜೆಪಿಯಿಂದ ಮಾಜಿ ಶಾಸಕ ಸಿ.ರಮೇಶ್ ಸ್ಪರ್ಧಿಸಲಿದ್ದಾರೆ.
ಎಚ್.ಡಿ.ಕೋಟೆಯನ್ನು ಕಾಂಗ್ರೆಸ್‌ನ ಚಿಕ್ಕಣ್ಣ ಪ್ರತಿನಿಧಿಸುತ್ತಿದ್ದು, ಜಾತಿ ಪ್ರಮಾಣಪತ್ರ ಗೊಂದಲದಿಂದ ಟಿಕೆಟ್ ನಿರಾಕರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಜಿಲ್ಲಾಧ್ಯಕ್ಷ ವಿಧಾನಪರಿಷತ್ ಸದಸ್ಯ ಸಿದ್ದರಾಜು, ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಸ್. ಚಿಕ್ಕಮಾದು ಅಥವಾ ಎಂ.ಸಿ.ದೊಡ್ಡನಾಯಕ, ಕೆಜೆಪಿಯಿಂದ ಡಾ.ಕೃಷ್ಣಸ್ವಾಮಿ ಸ್ಪರ್ಧಿಸಲಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಚಿಕ್ಕವೀರನಾಯಕ, ಬಿಎಸ್ಪಿಯಿಂದ ಜಿ.ಎನ್. ದೇವದತ್ತ ಸ್ಪರ್ಧಿಸಬಹುದು. ಹುಣಸೂರನ್ನು ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ್ ಪ್ರತಿನಿಧಿಸುತ್ತಿದ್ದು, ಜೆಡಿಎಸ್‌ನಿಂದ ಮಾಜಿ ಸಚಿವ ಜಿ.ಟಿ. ದೇವೇಗೌಡ ಅಥವಾ ಎಸ್. ಚಿಕ್ಕಮಾದು, ಕೆಜೆಪಿಯಿಂದ ಬಿ.ಎಂ.ರಾಮು ಅಥವಾ ನಾಗರಾಜ ಮಲ್ಲಾಡಿ ಸ್ಪರ್ಧಿಸಬಹುದು. ಬಿಜೆಪಿ ಅಭ್ಯರ್ಥಿ ಅಂತಿಮವಾಗಿಲ್ಲ. ಪಿರಿಯಾಪಟ್ಟಣವನ್ನು ಕಾಂಗ್ರೆಸ್‌ನ ಕೆ.ವೆಂಕಟೇಶ್ ಪ್ರತಿನಿಧಿಸುತ್ತಿದ್ದು, ಜೆಡಿಎಸ್‌ನಿಂದ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕೆ.ಮಹದೇವ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಕೆಜೆಪಿಯಿಂದ ಮಾಜಿ ಶಾಸಕ ಎಚ್.ಸಿ. ಬಸವರಾಜು, ಬಿಎಸಾರ್ ಕಾಂಗ್ರೆಸ್‌ನಿಂದ ಟಿ.ಡಿ. ಗಣೇಶ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಅಂತಿಮವಾಗಿಲ್ಲ.
ಕೆ.ಆರ್.ನಗರ ಕ್ಷೇತ್ರವನ್ನು ಜೆಡಿಎಸ್‌ನ ಸಾ.ರಾ.ಮಹೇಶ್ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್‌ನಿಂದ ದೊಡ್ಡಸ್ವಾಮಿಗೌಡ, ಕೆಜೆಪಿಯಿಂದ ಕೆ.ಎನ್. ಬಸಂತ್, ಬಿಜೆಪಿಯಿಂದ ಮಿರ್ಲೆ ಶ್ರೀನಿವಾಸಗೌಡ ಅಥವಾ ರಮೇಶ್ ಸ್ಪರ್ಧಿಸಬಹುದು.
-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.