ರಾಜಕೀಯ

ತಾಕತ್ತಿದ್ದರೆ ಡೀವಿ, ಅನಂತ, ಸಂತೋಷ್‌ರನ್ನು ಹೊರ ಹಾಕಿ

Published On :

ಕ.ಪ್ರ. ವಾರ್ತೆ ದಾವಣಗೆರೆ ಮಾ.27-
ನಿಜವಾಗಲೂ ನಿಮಗೆ ತಾಕತ್ತಿದ್ದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಮಾಜಿ ಸಿಎಂ ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಬಿಜೆಪಿಯಿಂದ ಮೊದಲು ಹೊರ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಹೊನ್ನಾಳಿಯಲ್ಲಿ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಉಚ್ಚಾಟಿಸಿದ್ದಕ್ಕೆ ನನಗೆ ಬೇಸರವಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ತೆರಳಿದ್ದೆ. ಅಲ್ಲಿನ ಪ್ರವಾಸಿ ಮಂದಿರದಲ್ಲಿ ನಾನು, ಸಿ.ಟಿ. ರವಿ, ಜೀವರಾಜ ಕುಳಿತು ಮಾತನಾಡುತ್ತಿದ್ದೆವು. ಅದೇ ವೇಳೆ ಅಲ್ಲಿಗೆ ಬಂದ ಸದಾನಂದಗೌಡ ನಿಮ್ಮಲ್ಲಿ ಪ್ರತ್ಯೇಕ ಮಾತನಾಡಬೇಕಿದೆ ಎಂದು ಪಕ್ಕದ ಕೋಣೆಗೆ ನನ್ನನ್ನು ಕರೆದೊಯ್ದು ನನಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಣದ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದರು. ಅಲ್ಲದೇ, ಆ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದ್ದರು. ಆಗ ಬೇರೊಬ್ಬರ ಬಳಿಯಿಂದ ಹಣ ಪಡೆದುಕೊಂಡು ಸದಾನಂದಗೌಡರಿಗೆ ಕೊಟ್ಟಿದ್ದೆ. ನಂತರ ರಾಜ್ಯಾಧ್ಯಕ್ಷರಾದ ಸದಾನಂದಗೌಡರಿಗೆ 2 ಸಲ, ಮುಖ್ಯಮಂತ್ರಿಯಾದ ಮೇಲೆ ಮೂರೇ ದಿನಕ್ಕೆ ಮತ್ತೆ ಆರ್ಥಿಕ ಸಮಸ್ಯೆ ಹೇಳಿಕೊಂಡು ಹಣ ಕೇಳಿದ್ದಾಗಲೂ ಹಣ ಕೊಡಿಸಿದ್ದೆ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಆಣೆ ಮಾಡಲು ಸಿದ್ಧ ಎಂದರು.
ಸಂಘ ಪರಿವಾರದ ಸಂತೋಷ್ ಗಾಜಿನ ಮನೆಯಲ್ಲಿ ಕುಳಿತು ಇಡೀ ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸದಾನಂದಗೌಡ ಮೂಲಕ ನೂರಾರು ಕೋಟಿ ಲಂಚ ಪಡೆದಿದ್ದಾರೆ. ಸಂತೋಷ ಹಣ ಮಾಡಿಕೊಂಡ ವಿಚಾರ ಸದಾನಂದಗೌಡ ನನ್ನ ಬಳಿ ಹೇಳಿಕೊಂಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಅಸ್ತ್ರವಾಗಿ ಬಳಸಿ ರೆಸಾರ್ಟ್, ತಾರಾ ಹೋಟೆಲ್‌ಗೆ ಹೋಗುವಂತೆ ಮಾಡುತ್ತಿದ್ದವರೇ ಈಶ್ವರಪ್ಪ, ಅನಂತಕುಮಾರ. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಬೇಕೆಂಬ ದುರುದ್ದೇಶದಿಂದ ಅನಂತಕುಮಾರ, ಈಶ್ವರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿ ಇತರರು ನಿರಂತರ ಸಂಚು ನಡೆಸುತ್ತಲೇ ಬಂದಿದ್ದರು ಎಂದರು.

ಕೆಜೆಪಿಯಿಂದ ಆಹ್ವಾನ ಬಂದಿಲ್ಲ
ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿಗೆ ಬರುವಂತೆ ನನ್ನನ್ನು ಆಹ್ವಾನಿಸಿಲ್ಲ. ನಾನೂ ಕೂಡ ಕೆಜೆಪಿಗೆ ಹೋಗುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಜನ್ಮದಿನಕ್ಕೆ ಪ್ರತಿ ವರ್ಷ ತಪ್ಪದೆ ಹೋಗಿ ಎಲ್ಲೇ ಇದ್ದರೂ ಶುಭವನ್ನು ಕೋರುತ್ತಿದ್ದೆ. ಆದರೆ, ಈ ಬಾರಿ ಯಡಿಯೂರಪ್ಪ ಜನ್ಮದಿನದಂದು ಹೋಗಿ ಶುಭ ಕೋರಲಿಲ್ಲ. ಹೀಗೆ ಬಿಜೆಪಿಗೆ ನಿಷ್ಠೆ ವ್ಯಕ್ತಪಡಿಸಿ ಪಕ್ಷದ ಮುಖಂಡರು ನನ್ನನ್ನು ಕಡೆಗಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.