ರಾಜಕೀಯದಲ್ಲಿ ನಾಟೌಟ್ ನಾಯಕರಿವರು
ಕ.ಪ್ರ. ವಾರ್ತೆ ಶಿವಮೊಗ್ಗ ಮಾ.27-
ಜಿಲ್ಲೆಯ ನಾಲ್ವರು ರಾಜಕೀಯ ನಾಯಕರನ್ನು ವರ್ಣಿಸುವುದೇ ಒಂದು ವಿಶೇಷ ಅನುಭವ. ಇವರ ರಾಜಕೀಯ ಜೀವನ 4-5 ದಶಕಗಳೇ ಕಳೆದಿವೆ. ರಾಜಕೀಯ ವಿಚಾರದಲ್ಲಿ ಇವರ ಮುಂದೆ ಬಹುತೇಕ ಹಾಲಿ ಶಾಸಕ, ಸಂಸದರು, ಸಚಿವರು ಬಚ್ಚಾಗಳು. ಇನ್ನೂ ಹೇಳಬೇಕೆಂದರೆ ಶಿಶುಗಳು.
ಇಷ್ಟೊಂದು ಹಿರಿಯರಾದರೂ ಇವರ ಚುನಾವಣಾ ರಣೋತ್ಸಾಹ ಮಾತ್ರ ಕುಗ್ಗಿಲ್ಲ. ಚುನಾವಣೆಯಲ್ಲಿ ತೊಡೆತಟ್ಟಿ ಶಾಸಕನಾಗಿ, ಮಂತ್ರಿ ಆಗಬಹುದೆಂಬ ಕನಸೂ ಮಸುಕಾಗಿಲ್ಲ. ದೇಹಕ್ಕೆ ವಯಸ್ಸಾಗಿರಬಹುದು, ಇವರ ಚುನಾವಣಾ ಸ್ಪರ್ಧೆ ಉತ್ಸಾಹಕ್ಕೆ ವಯಸ್ಸಾದಂತೆ ಕಂಡುಬರುತ್ತಿಲ್ಲ.
ಇವರೇ ಕಾಗೋಡು ತಿಮ್ಮಪ್ಪ, ಬಿ.ಎಸ್. ಯಡಿಯೂರಪ್ಪ, ಬಸವಣ್ಯಪ್ಪ ಹಾಗೂ ಕರಿಯಣ್ಣ. ಈ ನಾಲ್ವರ ಪೈಕಿ ಈಗಾಗಲೇ ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ, ಬಸವಣ್ಯಪ್ಪನವರ ಸ್ಪರ್ಧೆ ಖಚಿತವಾಗಿದೆ. ಮತ್ತೊಬ್ಬ ಸ್ಪರ್ಧಾಕಾಂಕ್ಷಿ ಕರಿಯಣ್ಣ ಟಿಕೆಟ್ ಸಿಗುವ ಆಶಾಭಾವನೆಯಲ್ಲಿದ್ದಾರೆ.
ಒಂದು ಲೆಕ್ಕದಲ್ಲಿ ಇವರೆಲ್ಲರೂ ರಾಜಕೀಯ ಸಮಕಾಲೀನರೆ. 1962ರಲ್ಲಿ ಬಸವಣ್ಯಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಂದರೆ ಇವರು ರಾಜಕೀಯ ಚಟುವಟಿಕೆ ಆರಂಭಿಸಿ ಅರ್ಧ ಶತಮಾನವೇ ಕಳೆದಿದೆ. ಇವರ ಸದ್ಯದ ವಯಸ್ಸು 79-80ರ ಗಡಿಯಲ್ಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದು, ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದಾರೆ.
81ರ ಚಿರ ಯುವಕ ಕಾಗೋಡು: ಆರಡಿ ಎತ್ತರದ ಅಜಾನುಬಾಹು ಕಾಗೋಡು ತಿಮ್ಮಪ್ಪ 81ರ ಚಿರ ಯುವಕ. ಈ ಚುನಾವಣೆ ಘೋಷಣೆ ದಿನಾಂಕಕ್ಕೆ 4-5 ತಿಂಗಳ ಹಿಂದಿನಿಂದಲೇ ತಮ್ಮ ಸಾಗರ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಯ ಕಟ್ಟೆಗಳಲ್ಲಿ ಸಭೆ ನಡೆಸಿ ಮತದಾರನನ್ನು ಬಡಿದೆಬ್ಬಿಸಿ ತಮ್ಮ ಬಲ ಪ್ರದರ್ಶಿಸಿ ಎದುರಾಳಿಗಳಿಗೆ ಚಳಿ ಬಿಡಿಸಿದ್ದಾರೆ. ಮುಂದಿನ ಚುನಾವಣೆ ಒನ್ಸೈಡೆಡ್ ಮ್ಯಾಚ್ ಎಂದು ಬಣ್ಣಿಸುವವರೂ ಇದ್ದಾರೆ.
1967ರಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಕೆ.ಎಚ್. ಶ್ರೀನಿವಾಸ್ ವಿರುದ್ಧ ಪರಾಜಿತರಾಗಿದ್ದರು. 1972ರಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಇವರು, 1989, 1994, 1999ರಲ್ಲಿ ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದರು. 1978ರಲ್ಲಿ ಸೋತರು. 1983 ಹಾಗೂ 1985ರಲ್ಲಿ ಸ್ಪರ್ಧಿಸಿರಲಿಲ್ಲ. 2004 ಹಾಗೂ 2008ರಲ್ಲಿ ಸರಣಿ ಸೋಲು ಅನುಭವಿಸಿದ್ದು, ತಮ್ಮ ಕೊನೆಯ ಇನ್ನಿಂಗ್ಸ್ನಲ್ಲಿ ಹೇಗಾದರೂ ಗೆಲ್ಲಲೇ ಬೇಕೆಂದು ರಚ್ಚೆ ಹಿಡಿದಿದ್ದಾರೆ.
ಹಾಟ್ ಫೇವರಿಟ್ ಬಿಎಸ್ವೈ: ಬಿ.ಎಸ್. ಯಡಿಯೂರಪ್ಪ 1983ರಲ್ಲಿ ಮೊದಲ ಬಾರಿಗೆ ಶಾಸಕರಾದರು. 1999ರಲ್ಲಿ ಒಮ್ಮೆ ಸೋತಿದ್ದು ಬಿಟ್ಟರೆ ಯಡಿಯೂರಪ್ಪನವರೇ ಶಿಕಾರಿಪುರದಲ್ಲಿ ಹಾಟ್ ಫೇವರಿಟ್. ಈ ಬಾರಿ ಕೆಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಉತ್ಸಾಹದೊಂದಿಗೆ ಕಣಕ್ಕಿಳಿಯುವವರಿದ್ದಾರೆ. ಇವರೊಟ್ಟಿಗಿರುವ ಮತ್ತೊಬ್ಬ ಹಿರಿಯ ಕರಿಯಣ್ಣ. ಸದ್ಯ 65ರ ಗಡಿ ದಾಟಿರುವ ಅವರು 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಕ್ಕೆ ಮುಂದಾಗಿದ್ದ ಕರಿಯಣ್ಣ ಮೊದಲ ಚುನಾವಣೆಯಲ್ಲಿ ಪರಾಜಿತರಾಗಿದ್ದರು. 1989, 1999ರಲ್ಲಿ ವಿಜೇತರಾಗಿದ್ದರು. 1994, 2004 ಹಾಗೂ 2008ರಲ್ಲಿ ಸೋತು, ಇನ್ನೊಮ್ಮೆ ಗೆಲುವನ್ನು ಒರೆಗೆ ಹಚ್ಚಲು ಯತ್ನಿಸುತ್ತಿದ್ದಾರೆ. ಟಿಕೆಟ್ ಸಿಕ್ಕರೆ ತಾವೊಂದು ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.
ಈಶ್ವರಪ್ಪ 64ರ ಯುವಕ: ಅಂದ ಹಾಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪ ಸಹ ಚಿರ ಯುವಕರೇನಲ್ಲ.
1989ರಿಂದ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಈಗಿನ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮೊದಲ ಚುನಾವಣೆಯಲ್ಲಿಯೇ ವಿಧಾನಸಭೆ ಪ್ರವೇಶ ಮಾಡಿದರು. 1994, 2004 ಹಾಗೂ 2008ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, 1999ರಲ್ಲಿ ಪರಾಜಿತರಾಗಿದ್ದರು. ಸದ್ಯ ಅವರ ವಯಸ್ಸು 64.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

