

ಬೆಂಗಳೂರು: ಸಾರ್ವಜನಿಕರ ಆಕ್ರೋಶದ ಎದುರು ಮಂಡಿ ಊರಿರುವ ರಾಜ್ಯ ಸರ್ಕಾರ, ಮಠಗಳನ್ನು ತನ್ನ ಸ್ವಾಧೀನಕ್ಕೆ ಪಡೆಯುವ ವಿವಾದಿತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ವಿದೇಯಕವನ್ನು ಶೈತ್ಯಾಗಾರದಲ್ಲಿಡಲು ನಿರ್ಧರಿಸಿದೆ.
ಬೆಳಗಾವಿ ಅಧಿವೇಶನದ ಕೊನೆಯ ದಿನ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ ಈ ವಿವಾದಾತ್ಮಕ ವಿಧೇಯಕವನ್ನು ಮಂಡಿಸಿದ್ದರು. ಇದಕ್ಕೆ, ಮಠಗಳು, ಸಾರ್ವಜನಿಕರು, ಪ್ರತಿಪಕ್ಷಗಳಿಂದ ಎಲ್ಲಿಲ್ಲದ ವಿರೋಧ ವ್ಯಕ್ತವಾಗಿತ್ತು. ಇಷ್ಟು ಸಾಲದೆಂಬಂತೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಇತರ ಸಂಪುಟ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ ವಿಧೇಯಕವನ್ನು ಶೈತ್ಯಾಗಾದಲ್ಲಿಡಲು ನಿರ್ಧರಿಸಲಾಗಿದೆ. ಹೀಗಾಗಿ ಮಂಡನೆಯಾದ ನಾಲ್ಕೇ ದಿನದಲ್ಲಿ ವಿಧೇಯಕ ತನ್ನ ಮಹತ್ವ ಕಳೆದುಕೊಂಡಿದ್ದು, ಸುಪ್ರೀಂ ತೀರ್ಪನ್ನು ಆಧರಿಸಿ ಮುಂದಿನ ನಡೆ ಏನು? ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.
ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ ಅವರೇ ಈ ವಿಷಯ ತಿಳಿಸಿದ್ದು, ಸರ್ಕಾರಕ್ಕೆ ಮಠ ಮಾನ್ಯಗಳ ವ್ಯವಹಾರದಲ್ಲಿ ಮೂಗು ತೂರಿಸುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದರು.
ಈ ವಿಧೇಯಕವನ್ನು ಮಂಡಿಸಲೇಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಆದರೆ 2007ರಲ್ಲಿ ಅಂದಿನ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ನಾವು ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕಿತ್ತು.
ಜನವರಿ 13ರಂ ಅಂತಿಮ ವಿಚಾರಣೆ ಇರುವುದರಿಂದ 6 ವಾರಗಳಲ್ಲಿ ರಾಜ್ಯದ ನಿಲುವು ಏನು? ಎಂಬುದನ್ನು ಸ್ಪಷ್ಟ ಪಡಿಸುವಂತೆ ಸುಪ್ರೀಂ ಕೋರ್ಟ್ ನಮ್ಮ ವಕೀಲರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಎಂ.ಎನ್. ರಾವ್ ಅವರು ಕರೆ ಮಾಜಿ ಏನು ಕ್ರಮ ತೆಗೆದುಕೊಂಡಿದ್ದೀರಿ ? ಎಂದು ಪ್ರಶ್ನಿಸಿದ್ದರು. ಹೀಗಾಗಿ ವಿಧೇಯಕವನ್ನು ಮಂಡಿಸಬೇಕಾದ ಅನಿವಾರ್ಯ ಇತ್ತು ಎಂದು ವಿವರಿಸಿದರು.
ವಿಧೇಯಕವನ್ನು ಮಂಡಿಸುವಾಗ ಸಹಜ ಪ್ರಕ್ರಿಯೆಗಳನ್ನು ನಡೆಸಿಲ್ಲ, ಸಂಪುಟದಲ್ಲಿ ಚರ್ಚೆ ನಡೆಸಿಲ್ಲ ಎಂಬುದ ಸತ್ಯ. ಆದರೆ ಜರೂರತ್ತು ಇದ್ದುದರಿಂದ ಹೀಗಾಯ್ತು. ಇದೆಲ್ಲದರ ಹಿನ್ನೆಲೆಯಲ್ಲಿ ನಾನೇ ಸಂಪುಟ ಸದಸ್ಯರ ಅಭಿಪ್ರಾಯ ಕೇಳಿದೆ.
ಸಿಎಂ ಸಿದ್ಧರಾಮಯ್ಯ ಸೇರಿದಂತೆ ಬಹುತೇಕ ಸಚಿವರು ಇದಕ್ಕೆ ಕೈ ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. ಸಾರ್ವಜನಿಕರು ಮತ್ತು ಮಠಾಧೀಶಕ ಅಭಿಪ್ರಾಯವೂ ಹೀಗೆಯೇ ಇದೆ.
ಇವೆಲ್ಲವನ್ನೂ ಪರಿಗಣಿಸಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯುತ್ತೇವೆ. ನಂತರ ಎಲ್ಲರ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.