ಕಾಲಕ್ಕೆ ತಕ್ಕಂತೆ ವ್ಯವಹರಿಸ್ರಿ

`ರೀ ಜಯಚಂದ್ರು, ನಿಮ್ಮ ಮಗಂಗೆ ರು. 20 ಸಾವಿರ ಸಂಬಳ ಕೊಡ್ತೀವಿ ಅಂದ್ರೆ ಗುತ್ತಿಗೆ ಆಧಾರದಲ್ಲಿ ವೈದ್ಯ...
ಕಾಲಕ್ಕೆ ತಕ್ಕಂತೆ ವ್ಯವಹರಿಸ್ರಿ
Updated on: 

ವಿಧಾನಸಭೆ: `ರೀ ಜಯಚಂದ್ರು, ನಿಮ್ಮ ಮಗಂಗೆ ರು. 20 ಸಾವಿರ ಸಂಬಳ ಕೊಡ್ತೀವಿ ಅಂದ್ರೆ ಗುತ್ತಿಗೆ ಆಧಾರದಲ್ಲಿ ವೈದ್ಯ ಕೆಲಸ ಮಾಡೋಕೆ ಕಳಿಸ್ತೀರೇನ್ರಿ, ಈ ಸಂಬಳ ಒಪ್ಕೊತಿರೇನ್ರಿ?'

`ಇವತ್ತಿನ ಕಾಲಕ್ಕೆ ತಕ್ಕಂತೆ ವ್ಯವಹರಿಸುವುದನ್ನು ಕಲಿತುಕೊಳ್ಳಿ, ಎಂಬಿಬಿಎಸ್ ಮಾಡಿದವರಿಗೆ ರು. 20 ಸಾವಿರ ಕೊಟ್ರೆಯಾರು ಕೆಲಸಕ್ಕೆ ಬರ್ತಾರೆ. ಸಚಿವರೇ ನಿಮ್ಮ ಮಕ್ಕಳನ್ನು ಕಳಸ್ತೀರಾ ಎಂದು ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ. ನಿಮಗೆ ನಮ್ಮ ವ್ಯಥೆ ಅರ್ಥವಾಗ್ತಿಲ್ಲ. ಹಗಲೆಲ್ಲ ಸಂಬಳ ಹೆಚ್ಚು ಮಾಡ್ತೀವಿ ಎಂದು ಹೇಳ್ತೀರಾ, ಆದ್ರೆ ಸಚಿವ ಸಂಪುಟದಲ್ಲಿ ವಿಷಯ ತೆಗೆದುಕೊಂಡು ಬಂದು ಅನುಮೋದನೆ ಪಡೆದುಕೊಳ್ತಿಲ್ಲ' ವೈದ್ಯರ ಸಮಸ್ಯೆ ಕುರಿತಂತೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮತ್ತೊಮ್ಮೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

ರಾಜ್ಯದಲ್ಲಿ 2,200ಕ್ಕೂ ಅಧಿಕ ವೈದ್ಯರ ಕೊರತೆಯಿದ್ದರೂ ಸರ್ಕಾರ ನೇಮಕ ಮಾಡುತ್ತಿಲ್ಲ. ಗುತ್ತಿಗೆ ವೈದ್ಯರ ಸಂಬಳ ಹೆಚ್ಚು ಮಾಡಿದ್ದೇವೆ ಎಂದು ಸದನದಲ್ಲಿ ಹೇಳಿಕೆ ನೀಡಿ, ಮತ್ತೆ
ಹಳೆಯ ಸಂಬಳವನ್ನೇ ಮುಂದುವರಿಸುತ್ತಿದ್ದಾರೆ. ಸಭಾಧ್ಯಕ್ಷರ ಎಚ್ಚರಿಕೆಯ ಹೊರತಾಗಿಯೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಬಿಜೆಪಿಯ ಆರ್.ಅಶೋಕ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಬಿಜೆಪಿ ಸದಸ್ಯರ ಬದಲು ಸಭಾಧ್ಯಕ್ಷರೇ ಸರ್ಕಾರವನ್ನು ಮತ್ತೊಮ್ಮೆ ಕುಟುಕಿದರು. ಮುಖ್ಯಮಂತ್ರಿ ಹಾಗೂ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರ ಪ್ರದೇಶದವರು. ಸಚಿವ ಸಂಪುಟದಲ್ಲಿರುವ ಕೆಲ ಸಚಿವರು ನಗರ ಪ್ರದೇಶ ಅಥವಾ ಜಿಲ್ಲಾ ಕೇಂದ್ರದಿಂದ ಬಂದಿರುವುದರಿಂದ ವೈದ್ಯರ ಸಮಸ್ಯೆ ಅವರಿಗೆ ಗೊತ್ತಾಗುತ್ತಿಲ್ಲ. ಜನರ ಹೊಟ್ಟೆ ಉರಿ ಇವರಿಗಿನ್ನೂ ತಿಳಿದಿಲ್ಲ. ನಮ್ಮ ಗ್ರಾಮೀಣ ಪ್ರದೇಶಗಳ ಶಾಸಕರ ಸ್ಥಿತಿ ನೋಡಿ ತಿಳಿದುಕೊಳ್ಳಿ, ನಮಗೆ ಕ್ಯಾಕರಿಸಿ ಮುಖಕ್ಕೆ ಉಗಿಯುವುದೊಂದು ಬಾಕಿಯಿದೆ. ಗುತ್ತಿಗೆ ವೈದ್ಯರಿಗೆ ಕನಿಷ್ಠ ರು. 50 ಸಾವಿರವಾದರೂ ಸಂಬಳ ನೀಡಿ ಎಂದರೆ ನೀವು ಕೇಳುವುದಿಲ್ಲ. ವೈದ್ಯರು ನಿಮ್ಮ ಕೆಲಸಕ್ಕೆ ಬರುವುದಿಲ್ಲ. ಅತ್ತ ಹಳ್ಳಿಯಲ್ಲಿ ಜನರು ಕಷ್ಟದಲ್ಲಿ ಬಿದ್ದಿರುತ್ತಾರೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೂ ವಿಷಯ ಪ್ರಸ್ತಾಪಿಸಿದಾಗ ಸಂಬಳ ಹೆಚ್ಚಳ ಮಾಡುವುದಾಗಿ ಸರ್ಕಾರ ಹೇಳಿತ್ತು. ಇನ್ನು 3 ದಿನದಲ್ಲಿ ಹಣಕಾಸು ಇಲಾಖೆಯಿಂದ ಅನುಮತಿ ದೊರೆಯದಿದ್ದರೆ ಹಣಕಾಸು ಇಲಾಖೆಗೆ ಹೋಗುತ್ತೇನೆ ಎಂದು ಸಭಾಧ್ಯಕ್ಷರು ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಸಚಿವರು ಸೋಮವಾರ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಮತ್ತೆ ಹಳೆಯ ಸಂಬಳವನ್ನು ಮಂಗಳವಾರದ ಉತ್ತರದಲ್ಲಿ ನೀಡಿದ್ದಾರೆ. ಇವರದೇ ಸರ್ಕಾರದ ಹಣಕಾಸು ಇಲಾಖೆಯಿಂದ ಅನುಮತಿ ಪಡೆಯಲಾಗುವುದಿಲ್ಲವೇ? ಹಣಕಾಸು ಇಲಾಖೆ ಅಮೆರಿಕದಲ್ಲಿದೆಯೇ ಎಂದು ಶಾಸಕ ಆರ್.ಅಶೋಕ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಈ ಅಧಿವೇಶನ ಮುಗಿಯುವುದರೊಳಗೆ ಹಣಕಾಸು ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com