

ಸರ್ಕಾರದ ವಿರುದ್ಧ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಚರ್ಚೆ ವೇಳೆ ಸರ್ಕಾರವನ್ನು ಸಮರ್ಥಿಸಿ ಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಈ ಮನವಿ ಮಾಡಿದ್ದು, ಸಿಎಲ್‍ಪಿಯಲ್ಲಿ ವೈಯಕ್ತಿಕ ಸಮಸ್ಯೆ ಬಗ್ಗೆ ಚರ್ಚೆ ಬೇಡ ಎಂದು ಆರಂಭದಲ್ಲೇ ಮನವಿ ಮಾಡಿದರು. ಮಾಹಿತಿ ಪ್ರಕಾರ ಜ್ವರ ಮತ್ತು ಇತ್ತೀಚಿನ ಬೆಳವಣಿಗೆಗಳಿಂದ ಕೊಂಚ ಬಳಲಿದಂತೆ ಕಂಡುಬಂದ ಸಿಎಂ ಸಿದ್ದರಾಮಯ್ಯ, ಸರ್ಕಾರದ ನೆರವಿಗೆ ಬರುವಂತೆ ಕೋರಿದ್ದಾರೆ. ಅಷ್ಟು ಮಾತ್ರವಲ್ಲ ನಿರ್ಣಯವನ್ನು ಮತಕ್ಕೆ ಹಾಕುವ ವೇಳೆ ಸದನದಿಂದ ಆಚೆ ಹೋಗಬೇಡಿಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಕೃಷ್ಣ ಬೈರೇಗೌಡ ವಿರುದ್ಧ ಆಕ್ರೋಶ: ಸಿಎಂ ಸಿದ್ದರಾಮಯ್ಯ ಅವರ ಮನವಿ ಮಧ್ಯೆಯೇ ಕಾಂಗ್ರೆಸ್ ಶಾಸಕರು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕರಾದ ರಮೇಶ್‍ಕುಮಾರ್, ಕೆ.ಬಿ. ಕೋಳಿವಾಡ ಎಂ.ಟಿ.ಬಿ. ನಾಗರಾಜ್, ಸೇರಿದಂತೆ ಹಲವರು ಕೃಷ್ಣ ಬೈರೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು
ರಾಜ್ಯದಲ್ಲಿ ಬರದ ಜತೆಗೆ ರೈತರ ಸರಣಿ ಆತ್ಮಹತ್ಯೆಮುಂದುವರಿದಿದೆ. ಆದರೆ, ಈ ಸಮಸ್ಯೆ ನಿರ್ವ ಹಿಸುವಲ್ಲಿ ಕೃಷಿ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪ ವ್ಯಕ್ತವಾಗುತ್ತಿದ್ದಂತೆ ಕೃಷ್ಣ ಬೈರೇಗೌಡ ಸಮರ್ಥನೆಗೆ ಮುಂದಾದರು. ಸಚಿವರ ಹೇಳಿಕೆ ಶಾಸಕ ರಮೇಶ್ ಕುಮಾರ್ ಅವರನ್ನು ಕೆರಳಿಸಿತು. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾವು ಈ ವಿಚಾರ ಪ್ರಸ್ತಾಪಿಸಿರುವುದು ನಿಮಗೆ ಇನ್ನಷ್ಟು ನೆರವು ಸಿಗಲಿ ಎಂಬ ಉದ್ದೇಶದಿಂದಲೇ ಹೊರತು ಬೇರೇನೂ ಇಲ್ಲ. ಆದರೆ ನೀವು ನಮ್ಮ ಮಾತನ್ನು ಕೇಳುವುದೇ ಇಲ್ಲ. ನಿಮ್ಮ ಮಾತನ್ನು ನಾವು ಮಾತ್ರ ನಾವು ಕೇಳಿಸಿಕೊಂಡು ಹೋಗಬೇಕೆ? ಶಾಸಕಾಂಗ ಪಕ್ಷದ ಸಭೆಯಲ್ಲೂ ನೀವು ಈ ರೀತಿ ವರ್ತಿಸಿದರೆ ಹೇಗೆ? ಎಂದು ತರಾಟೆಗೆ ತೆಗೆದುಕೊಂಡರು.
ಸುಮ್ಮನೇ ಕೂತಿದ್ರು ಸಿಎಂ: ಇದಕ್ಕೆ ಕೆ.ಬಿ.ಕೋಳಿವಾಡ ಅವರೂ ಧ್ವನಿಗೂಡಿಸಿ, ಕೃಷಿ ಸಚಿವರ ಕಾರ್ಯ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಂ.ಟಿ.ಬಿ. ನಾಗರಾಜ್ ಅವರೂ ಸಾಥ್ ನೀಡಿದ್ದು ಮಾತ್ರವಲ್ಲ, ಕೃಷಿ ಸಚಿವರು ಕಾಂಗ್ರೆಸ್ ಶಾಸಕರಿಗಿಂತ ಜೆಡಿಎಸ್ ಶಾಸಕರಿಗೆ ಹೆಚ್ಚು ಗೌರವ ಕೊಡುತ್ತಾರೆ. ಅವರ ಕ್ಷೇತ್ರದಲ್ಲಿ ಕೆಲಸಗಳು ಸರಾಗವಾಗಿ ನಡೆಯುತ್ತಿವೆ ಎಂದರು. ಕಾಂಗ್ರೆಸ್‍ನ ಈ ಮೂವರು ಹಿರಿಯ ಸದಸ್ಯರ ಜತೆ ಕೃಷ್ಣ ಬೈರೇಗೌಡ ಅಕ್ಷರಶಃ ಜಗಳವಾಡುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಲೇ ಇಲ್ಲ. ಕೃಷ್ಣ ಬೈರೇಗೌಡ ಜತೆಗೆ ರೈತರ ಆತ್ನಹತ್ಯೆ ಪ್ರಕರಣ ಹೆಚ್ಚುವುದಕ್ಕೆ ಮಾಧ್ಯಮ ವರದಿಯೂ ಕಾರಣ ಎಂದು ಹೇಳಿಕೆ ನೀಡಿದ ಐಟಿಬಿಟಿ ಸಚಿವ ಎಸ್.ಆರ್. ಪಾಟೀಲ್ ಅವರ ವಿರುದ್ಧವೂ ಶಾಸಕರು ಆಕ್ರೋಶ ವ್ಯಕ್ತಪಡಿ ಸಿದರು. ಎಐಬಿಪಿ ಎಐಬಿಪಿ ಯೋಜನೆ ಯಲ್ಲಿ ಸಚಿವ ಶಿವ ರಾಜ್ ತಂಗಡಗಿ ತಮಗೆ ಬೇಕಾದವರಿಗೆ ಮಾತ್ರ ಗುತ್ತಿಗೆ ನೀಡಿದ್ದಾರೆ. ಅವರ ವಿರುದ್ಧ ಹಲವು ಆರೋಪಗಳಿವೆ. ಹೀಗಾಗಿ ಅವರು ರಾಜಿನಾಮೆ ನೀಡಬೇಕು ಎಂದು ಕೆಲ ಶಾಸಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಬುಧವಾರ ಗೈರು ಹಾಜರಾಗಿದ್ದರು. ಮುಖ್ಯವಾಗಿ ಸಭೆಗೆ ಸಚಿವರು ಸಾಕಷ್ಟು ಸಂಖ್ಯೆಯಲ್ಲಿ ಬಂದಿರಲಿಲ್ಲ. ಕೇವಲ 12 ಸಚಿವರು ಮಾತ್ರ ಹಾಜರಿದ್ದರು. ಸಿಎಲ್‍ಪಿ ಬಗ್ಗೆ ಸಚಿವರಿಗೆ ಆಸಕ್ತಿ ಇಲ್ಲವಾದರೆ ಶಾಸಕರು ಹೇಗೆ ಬರುತ್ತಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ ಭೇಟಿಗೆ ತಯಾರಿ
ಶಾಸಕಾಂಗ ಪಕ್ಷದ ಸಭೆ ಬಳಿಕ ಹದಿನೈದಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಮೊಗಸಾಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಅಧಿವೇಶನದ ಬಳಿಕ ಹೈ ಕಮಾಂಡ್ ಭೇಟಿಗೆ ಅವಕಾಶ ಕೋರಲು ತಯಾರಿ ನಡೆಸಲಾಗಿದೆ.