

ಹಾವೇರಿ: ಹಲವು ನಿರೀಕ್ಷೆ ಇಟ್ಟುಕೊಂಡು ಜನರು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ. ಆದರೆ ಅವರು ದೇಶದ ರೈತರಿಗೆ ನೀಡಿದ ಕೊಡುಗೆಯೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಕ್ಕರೆ, ಸಹಕಾರ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಆಗ್ರಹಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರು ರಾಜ್ಯ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ರೆಸಾಟ್ರ್ ನಲ್ಲಿ ಉಳಿದು ಹೋಗಿದ್ದಾರೆ ಎಂಬಂಥ ಕೆಳಮಟ್ಟದ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದು, ಎಲ್ಲ ರಾಜ್ಯಗಳಲ್ಲೂ ರೈತರ ಆತ್ಮಹತ್ಯೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು. ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ರು. 10 ಸಾವಿರ ಕೋಟಿ ಕಡಿತಮಾಡಿದೆ. ಇದರಿಂದ ಈ ಯೋಜನೆಯಿಂದ ಬಡವರಿಗೆ ದೊರೆಯಬೇಕಿದ್ದ ಸೌಲಭ್ಯಕ್ಕೂ ಕೇಂದ್ರ ಕತ್ತರಿ ಹಾಕಿದೆ. ಇದಲ್ಲದೇ ಬೆಳೆ ಸಾಲಕ್ಕಾಗಿ ರಾಜ್ಯಕ್ಕೆ ನೀಡಬೇಕಾದ ಅನುದಾನದಲ್ಲೂ ಕಡಿಮೆಯಾಗಿದೆ. ಬಿಜೆಪಿಯವರ ರೈತಪರ ಕಾಳಜಿ ಏನು ಎಂಬುದು ಗೊತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಎರಡು ದಿನಗಳಿಂದ ಭೇಟಿ ನೀಡುತ್ತಿರುವ ಬಿಜೆಪಿ ನಾಯಕರು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ರೈತಪರವಾಗಿದ್ದು, ರೈತರ ನೆರವಿಗೆ ಬದ್ಧವಾಗಿದೆ ಎಂದು ಹೇಳಿದರು. ರೈತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರ ಸಹಾಯವಾಣಿ ತೆರೆದು ಪರ್ಯಾಯ ಬೆಳೆಗಳ ಬಗ್ಗೆ ಮಾಹಿತಿ ನೀಡುವಿಕೆ, ವಿವಿಧ ಯೋಜನೆಗಳ ಬಗ್ಗೆ ಕರಪತ್ರಗಳ ಮೂಲಕ ಪ್ರಚಾರ ನಡೆಸಿ ಅಭಿಯಾನ ನಡೆಸಲಾಗುತ್ತಿದೆ. ಅಧಿಕಾರಿಗಳ ತಂಡ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಜಿಲ್ಲಾಡಳಿತಗಳೂ ಬ್ಯಾಂಕುಗಳಿಗೆ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳದಂತೆ ಸೂಚನೆನೀಡಲಾಗಿದೆ. ರೈತರು ಅಸಹಾಯಕರಾಗಬಾರದು ಎಂದು ಮನವಿ ಮಾಡಿದರು.