

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಶಾಸಕರು, ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೂ.19 ರಂದು ಬೆಂಗಳೂರಿನಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದ್ದರು ಸರ್ಕಾರದ ವಿರುದ್ಧ ಬಿಜೆಪಿ ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಕೂಡ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೈಗೊಂಡ ತಪ್ಪು ನಿರ್ಧಾರಗಳ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ, ಎಲ್ಲಾ ಹೋರಾಟಗಳನ್ನು ಜೆಡಿಎಸ್ ಹೈಜಾಕ್ ಮಾಡುತ್ತಿದೆ. ಒಂದಂಕಿ ಲಾಟರಿ ಸೇರಿದಂತೆ ಹಲವು ವಿಷಯದಲ್ಲಿ ಬಿಜೆಪಿ ಪರಿಣಾಮಕಾರಿ ಹೋರಾಟ ನಡೆಸಿಲ್ಲ ಇದರಿಂದಾಗಿ ಬಿಜೆಪಿಗೆ ಹಿನ್ನಡೆಯುಂಟಾಗುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿ ಅಧಿಕೃತ ಪಕ್ಷವಾದರೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧದ ಹೋರಾಟಗಳು ತಾರ್ಕಿಕ ಅಂತ್ಯ ಮುಟ್ಟುತ್ತಿಲ್ಲ, ಸದನದಲ್ಲಿ ಬಿಜೆಪಿ ಮತ್ತಷ್ಟು ಪರಿಣಾಮಕಾರಿ ಹೋರಾಟ ನಡೆಸಬೇಕಿದೆ ಎಂದು ಮುರಳಿಧರ್ ರಾವ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.