

ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡಲು ಪ್ರಯತ್ನ ನಡೆಸಿ ಹೈಕೋರ್ಟ್ ನಿಂದ ಛೀಮಾರಿಗೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.
ಚುನಾವಣೆಯನ್ನು ನಡೆಸಲೇಬಾರದೆಂಬ ತೀರ್ಮಾನಕ್ಕೆ ಬಂದಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿರುವ ತೀರ್ಪು ತೀವ್ರ ಮುಖಭಂಗ ಉಂಟುಮಾಡಿದೆ. ಸುಪ್ರೀಂ ಕೋರ್ಟ್‍ನಿಂದ ಹೈಕೋರ್ಟ್ ವರೆಗೂ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಚುನಾವಣೆ ಮುಂದೂಡಲು ಪ್ರಯತ್ನ ನಡೆಸಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ದಂಡವನ್ನೂ ಪಡೆದುಕೊಂಡಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣವಾಗಿದ್ದು ಮುಖ್ಯಮಂತ್ರಿ ಇದರ ನೈತಿಕ ಹೊಣೆ ಹೊರಬೇಕೆಂದು ಕಿಡಿ ಕಾರಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಸಂಘ ಸಂಸ್ಥೆಯ ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸುವುದು ಸರ್ಕಾರದ ಆದ್ಯ ಕರ್ತವ್ಯ. ಸುಪ್ರೀಂ ಕೋರ್ಟ್ ಕೂಡ ಅನೇಕ ಪ್ರಕರಣಗಳಲ್ಲಿ ಇಂತಹದ್ದೇ ತೀರ್ಪನ್ನು ನೀಡಿದೆ. ಆದರೆ, ಮೊಂಡುತನದ ಕಾಂಗ್ರೆಸ್ ಸರ್ಕಾರ, ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಉಂಟಾಗಬಹುದೆಂಬ ಭೀತಿಯಿಂದ ಮುಂದೂಡಲು ಪ್ರಯತ್ನ ನಡೆಸಿತು. ಈಗ ಹೈಕೋರ್ಟ್ ನೀಡಿರುವ ತೀರ್ಪು ಸರ್ಕಾರಕ್ಕೆ ಛಾಟಿ ಏಟು ಬೀಸಿದಂತಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಆಯೋಗಕ್ಕೆ ಮನವಿ: ಹೈಕೋರ್ಟ್‍ನ ಏಕಸದಸ್ಯ ಪೀಠ ನೀಡಿರುವ ತೀರ್ಪಿನನ್ವಯ ಚುನಾವಣಾ ಆಯೋಗ ಇನ್ನು ತಡ ಮಾಡದೆ ಬಿಬಿಎಂಪಿ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಬೇಕು. ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಇನ್ನಷ್ಟು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ. ಆ.5ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸುವಂತೆ ಜಗದೀಶ್ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಅವರಿಗೆ ಮನವಿ ಮಾಡಿದ್ದಾರೆ.
ಬಿಬಿಎಂಪಿ ಚುನಾವಣೆ ದಿನಾಂಕ ಘೋಷಿಸಿ
ಬಿಬಿಎಂಪಿ ಚುನಾವಣೆಯ ದಿನಾಂಕವನ್ನು ತಕ್ಷಣವೇ ಘೋಷಿಸಬೇಕೆಂದು ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಶಾಸಕ ಸುರೇಶ್ ಕುಮಾರ್ ನೇತೃತ್ವದ ನಿಯೋಗವು ಮಂಗಳವಾರ ರಾಜ್ಯ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿತು. ನ್ಯಾಯಾಲಯದ ಸೂಚನೆಯಂತೆ ತಕ್ಷಣವೇ ಚುನಾವಣೆಗೆ ಕ್ರಮಕೈಗೊಳ್ಳಬೇಕು, ಈ ಕೂಡಲೇ ದಿನಾಂಕ ಘೋಷಿಸಬೇಕೆಂದು ನಿಯೋಗದಲ್ಲಿದ್ದ ಸದಸ್ಯರು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ, ಮನವಿಯನ್ನು ಖಂಡಿತ ಪರಿಗಣಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.