

ಬೆಂಗಳೂರು/ಹುಬ್ಬಳ್ಳಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಬಲವರ್ಧನೆಯ ಕೂಗು ಜೋರಾಗಿ ಕೇಳಿಬರಲಾರಂಭಿಸಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಮತದಾರರು ತಿರಸ್ಕರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಈಗ ಹೆಚ್ಚಿನ ಮನ್ನಣೆ ದೊರೆಯುತ್ತಿದೆ.
ಜೆಡಿಎಸ್ ನಾಯಕ ರೇವಣ್ಣ ಬೆಂಗಳೂರಿನಲ್ಲಿ ಮಾತನಾಡಿ ರಾಜ್ಯ ದಲ್ಲಿಯೂ ಕೂಡ ಪ್ರಾದೇಶಿಕ ಪಕ್ಷಗಳ ಅಲೆ ಬರಲಿದೆ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಹಾರ ಫಲಿತಾಂಶ ಪ್ರಧಾನಿ ಮೋದಿ ತಪ್ಪು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿಯೂ ಬಿಜೆಪಿ ಧೂಳಿಪಟವಾಗಲಿದೆ ಎಂದು ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಆಪ್ ಹಾಗೂ ಬಿಹಾರದಲ್ಲಿ ಜೆಡಿಯು ಮಿತ್ರಕೂಟ ನೀಡಿದ ಅಚ್ಚರಿ ಫಲಿತಾಂಶದಿಂದ ರಾಷ್ಟ್ರವ್ಯಾಪಿ ಪ್ರಾದೇಶಿಕ ಪಕ್ಷಗಳ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಅದೇ ಮಾದರಿ ಚರ್ಚೆಗಳು, ವ್ಯಾಖ್ಯಾನಗಳಿಗೆ ಚಾಲನೆ ದೊರೆತಿದೆ. ಹಲವು ಪಕ್ಷಗಳಲ್ಲಿ ಹರಿದು ಹಂಚಿ ಹೋಗಿರುವ ಜನತಾ ಪರಿವಾರದ ನಾಯಕರು ಪ್ರಾದೇಶಿಕ ಪಕ್ಷವೆಂಬ ಒಂದೇ ವೇದಿಕೆಯಡಿ ಬರಬೇಕೆಂಬ ಕರೆ ಹಾಗೂ ಕೂಗುಗಳು ಭಾನುವಾರದ ನಂತರ ಕೇಳಿ ಬರುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಬಿಹಾರ ಫಲಿತಾಂಶ ನೋಡಿ ರಾಷ್ಟ್ರ ರಾಜಕೀಯ ಚಿತ್ರಣದ ಸೂಕ್ಷ್ಮತೆ ಅರಿತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಪಕ್ಷದ ಎರಡನೇ ತಲೆಮಾರಿನ ನಾಯಕರಾದ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕ ವೈ.ಎಸ್.ವಿ. ದತ್ತ ಅವರಿಗೆ ಜನತಾ ಪರಿವಾರ ಒಗ್ಗೂಡಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ವೈ.ಎಸ್.ವಿ. ದತ್ತ, ಇದು ಸಮಯೋಚಿತವಾದ ಕಾಲವಾಗಿದೆ. ಜೆಪಿಯವರ ಜನ್ಮಶತಾಬ್ಧಿ ನಡೆಯುವ ಹೊತ್ತಿನಲ್ಲಿ ಜನತಾ ಪರಿವಾರ ಒಗ್ಗೂಡಿದರೆ ಅರ್ಥ ಬರುತ್ತದೆ. 1975ರಲ್ಲಿ ಕಾಂಗ್ರೆಸ್ ನಮಗೆ ಬೇಡ ತುರ್ತು ಪರಿಸ್ಥಿತಿ ವಿರೋಧಿಸಿ ಎಂಬ ಘೋಷಣೆ ಕೂಗಿ ಜನತಾ ಪರಿವಾರ ಅಸ್ತಿತ್ವಕ್ಕೆ ಬಂದಿತು. ಅದೇ ರೀತಿ ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೋಮುವಾದವನ್ನು ಬಿತ್ತಿತ್ತಿದೆ. ಇದರ ವಿರುದ್ಧ ಪರ್ಯಾಯ ರಾಜಕೀಯ ರಂಗ ಹುಟ್ಟುಹಾಕಲು ಮತ್ತೆ ಜನತಾ ಪರಿವಾರ ಒಂದಾಗಬೇಕಿದೆ. ಜನತಾ ಪರಿವಾರ ಜಾತ್ಯಾತೀತ ಪಕ್ಷಗಳು ಹೊಂದಾಣಿಕೆಯಾದಲ್ಲಿ ದೇಶವನ್ನು ಕೋಮುವಾದದಿಂದ ಹೊರ ತರಬಹುದಾಗಿದೆ ಎಂದರು.
ಜೆಡಿಎಸ್‍ನಲ್ಲಿದ್ದು ಬೇರೆಡೆ ಹೋಗಿರುವ ಕಾಂಗ್ರೆಸ್ ಪಕ್ಷದ ಡಾ.ಬಿ.ಎಲ್. ಶಂಕರ್, ಸಿ.ಎಂ. ಇಬ್ರಾಹಿಂ, ಜಯಪ್ರಕಾಶ್ ಹೆಗ್ಡೆ, ಬಿಜೆಪಿಯಲ್ಲಿರುವ ಬಸವರಾಜ ಬೊಮ್ಮಾಯಿ, ಬಿ. ಸೋಮಶೇಖರ್ ಅವರನ್ನು ಕರೆತರುವಂತೆ ಸೂಚಿಸಿದ್ದಾರೆ. ಜನತಾ ಪರಿವಾರಕ್ಕೆ ಹೈಕಮಾಂಡ್ ಸಂಸ್ಕೃತಿ ಒಗ್ಗುವುದಿಲ್ಲ. ಆದ್ದರಿಂದಲೇ ಗ್ರೌಂಡ್ ಲೆವಲ್‍ನಲ್ಲಿ ಕೆಲಸ ಮಾಡಲು ಇಚ್ಛಿಸುವ
ಸಿದ್ದರಾಮಯ್ಯ ಅವರು ಕೆಲಸ ಮಾಡಲು ಹೈಕಮಾಂಡ್ ತಡೆಯಾಗಿದೆ. ಹಾಗಾಗಿ ಅವರ ಅಧಿಕಾರವಾಧಿ ಇನ್ನೂ ಎರಡುವರೆ ವರ್ಷಗಳಿರುವುದರಿಂದ ಸದ್ಯಕ್ಕೆ ಅವರ ವಿಚಾರಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಎಂ.ಪಿ.ನಾಡಗೌಡರು ಕರ್ನಾಟಕದಲ್ಲಿ ಜನತಾಪರಿವಾರದ ಮುಖಂಡರು ಒಂದಾಗಬೇಕೆಂದು ನೀಡಿದ ಸಕಾರಾತ್ಮಕ ಹೇಳಿಕೆಗೆ ಜೆಡಿಎಸ್‍ನಿಂದ ಅದೇ ರೀತಿ ಸಕಾರಾತ್ಮಕ ಸ್ಪಂದನೆಯೂ ದೊರೆತಿದೆ. ದೇವೇಗೌಡರಲ್ಲದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಅದೇ ಧಾಟಿಯಲ್ಲಿ ಮಾಕನಾಜಿಗ್ಗಾಪೆ, ಎಲ್ಲರೂ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡಿರುವುದು ವಿಶೇಷ. ಆದರೆ, ಪಕ್ಷ ಒಂದುಗೂಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ ರಾಷ್ಟ್ರ ಮಟ್ಟದಲ್ಲಿ. ಶರದ್ ಯಾದವ್, ನಿತೀಶ್ ಕುಮಾರ್ ಹಾಗೂ ದೇವೇಗೌಡರು ಕೂತು ಮಾತನಾಡಿದರು ಒಂದಾಗಬಹುದು. ಬಳಿಕ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲೂ ಅಲೆ: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎಚ್ .ಡಿ.ರೇವಣ್ಣ ಅವರು ಮುಂಬರುವ ಜನವರಿಯಲ್ಲಿ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳು ಸಂಭವಿಸಲಿದ್ದು ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷಗಳ ಅಲೆ ಉಂಟಾಗಲಿದೆ' ಎಂದು ಹೇಳಿದರು. ಜನತಾ ಪರಿವಾರ ಒಟ್ಟಾಗಿ ಪ್ರಾದೇಶಿಕ ಪಕ್ಷ ಬರಬೇಕು. ಒಂದು ವೇಳೆ ಅನಿವಾರ್ಯವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಲು ತಾವು ಸಿದಟಛಿ. ಪಿ.ಜಿ.ಆರ್.ಸಿಂಧ್ಯ, ಸಿ. ಎಂ.ಇಬ್ರಾಹಿಂ, ಡಾ.ಬಿ.ಎಲ್.ಶಂಕರ್ ಅವರೊಂದಿಗೆ ಮಾತನಾಡುವೆ ಎಂದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಸ್ಥಳೀಯವಾಗಿ ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿವೆ. ಒಂದರ್ಥದಲ್ಲಿ ಕಾಂಗ್ರೆಸ್ ಕೂಡ ಈಗ ಪ್ರಾದೇಶಿಕ ಪಕ್ಷವಿದ್ದಂತೆ. 540 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದದ್ದು ಕೇವಲ 40 ಕ್ಷೇತ್ರಗಳಲ್ಲಿ ಮಾತ್ರ.ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೋಗಿದ್ದರಿಂದಲೇ ಇಂದು ಕಾಂಗ್ರೆಸ್ ಪಕ್ಷ ಕ್ಕೆ ಇಂಥ ಸ್ಥಿತಿ ಬಂದಿದೆ. ಈಗಲಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ಗತಿಯೇ ಬರುತ್ತದೆ ಎಂದು ಅಬಿsಪ್ರಾಯಪಟ್ಟರು.
ಬಿಜೆಪಿಯಲ್ಲಿ ಭೀಷ್ಮನಂತಿರುವ ಲಾಲ್‍ಕೃಷ್ಣ ಆಡ್ವಾಣಿ ಅವರ ಮಾರ್ಗದರ್ಶನ ಪಡೆಯದಿರುವುದು ಹಾಗೂ ಅವರನ್ನು ಮೂಲೆ ಗುಂಪು ಮಾಡಿರುವುದರಿಂದಲೇ ಬಿಜೆಪಿಗೆ ಇಂಥ ಸ್ಥಿತಿ ಬಂದಿದೆ ಎಂದು ಹೇಳಿದ ಅವರು ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಪ್ರಾದೇಶಿಕ ಪಕ್ಷಗಳ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.