

ನವದೆಹಲಿ: ಸಜೀವ ದಹನಕ್ಕೊಳಗಾದ ದಲಿತ ಮಕ್ಕಳ ಕುಟುಂಬಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಂತ್ವನ ಹೇಳಿದ್ದನ್ನು ಫೋಟೊ ತೆಗೆಸಿಕೊಳ್ಳಲು ಬಳಸಿಕೊಂಡ ಅವಕಾಶ ಎಂದು ಟೀಕಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಷ್ಟು ಬೇರೆ ಯಾರೂ ಫೋಟೊ ತೆಗೆಸಿಕೊಳ್ಳುವ ಅವಕಾಶಕ್ಕಾಗಿ ಕಾಯುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಿದರೆ ಅದನ್ನು ಫೋಟೋ ತೆಗೆಸಿಕೊಳ್ಳುವ ಅವಕಾಶ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಮೃತ ದಲಿತರ ಕುಟುಂಬಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಸಿಂಘ್ವಿ ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚು ಬೇರೆ ಯಾರೂ ಫೋಟೋ ತೆಗೆಸಿಕೊಳ್ಳಲು ಅವಕಾಶಗಳನ್ನು ಹುಡುಕುವುದಿಲ್ಲ. ಯೋಗ ದಿನ, ಮನ್ ಕಿ ಬಾತ್, ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳು ಫೋಟೊ ತೆಗೆಸಿಕೊಳ್ಳಲು ಬಳಸಿದ ಅವಕಾಶ ಅಲ್ಲವೇನು ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.
ಇಬ್ಬರು ದಲಿತ ಮಕ್ಕಳ ಹತ್ಯೆ ಸಂಬಂಧ ಹರಿಯಾಣ ಸರ್ಕಾರ ಕೈಗೊಂಡ ಕ್ರಮ ಏನು? ಘಟನೆ ನಡೆದು ಎರಡು ದಿನವಾದರೂ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಸ್ಥಳಕ್ಕೆ ಬಂದಿಲ್ಲ. ಅವರೂ ಪ್ರಧಾನಿ ಮೋದಿಯಂತೆಯೇ ವರ್ತಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿ ಫೋಟೋಗಾಗಿ ಈ ರೀತಿ ಭೇಟಿ ನೀಡುತ್ತಿದ್ದೇನೆ ಎಂದು ಟೀಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.