

ಬೆಂಗಳೂರು ;ರಾಜ್ಯದಲ್ಲಿ ಕಳೆದ 40 ವರ್ಷಗಳಲ್ಲಿಯೇ ಎದುರಾಗಿರುವ ಅತ್ಯಂತ ಭೀಕರ ಬರವನ್ನು ಸವಾಲಾಗಿ ಸ್ವೀಕರಿಸಿ, ಸಮರೋಪಾ ದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ತವ್ಯದಲ್ಲಿ ವಿಳಂಬ ಧೋರಣೆ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿ ಈ ಸೂಚನೆ ನೀಡಿದ್ದಾರೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಜಿಲ್ಲೆಯ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗೆ ದೀರ್ಘಕಾಲಿಕ ರಜೆ ಮಂಜೂರು ಮಾಡಬಾರದು, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಬೇತಿಗೆ ಕಳುಹಿಸುವುದನ್ನು ರದ್ದುಪಡಿಸುವಂತೆ ಸೂಚಿಸಿದರು.
ಕುಡಿಯುವ ನೀರು ಪೂರೈಕೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ನೀರಿನ ಅಭಾವ ಎದುರಿಸುತ್ತಿರುವ ಎಲ್ಲ ಗ್ರಾಮಗಳಲ್ಲೂ ಜಲ ಮೂಲಗಳು ಲಭ್ಯವಿದ್ದಲ್ಲಿ, ಕೊಳವೆ ಬಾವಿ ಕೊರೆಸಬೇಕು, ಇಲ್ಲವಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸಲು 90 ದಿನಗಳ ಗರಿಷ್ಠ ಕಾಲಮಿತಿ ಇತ್ತು. ಇದೀಗ ಸರ್ಕಾರ ಈ ಕಾಲಮಿತಿಗೂ ವಿನಾಯಿತಿ ನೀಡಿದೆ. ಖಾಸಗಿ ಜಮೀನುಗಳಲ್ಲಿ ಲಭ್ಯವಿರುವ ಜಲಮೂಲಗಳನ್ನು ಸ್ವಾಧೀನಪಡಿಸಿಕೊಳ್ಳ ಬೇಕು. ಯಾವುದೇ ಕಾರಣಕ್ಕೂ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ದೊರೆಯದೆ ಪರದಾಡುವ ಸ್ಥಿತಿ ನಿರ್ಮಾಣವಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶಿಸಿದರು.
ಗುಳೆ ತಪ್ಪಿಸಿ: ರಾಜ್ಯದ 176 ತಾಲೂಕುಗಳಲ್ಲಿ 135 ತಾಲೂಕುಗಳಿಗೆ ಬರದ ಛಾಯೆ ಆವರಿಸಿದೆ. ಜನಸಾಮಾನ್ಯರಿಗೆ, ವಿಶೇಷವಾಗಿ ರೈತಾಪಿ ವರ್ಗಕ್ಕೆ, ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡಿ ಗುಳೆ ತಪ್ಪಿಸಬೇಕು. ಮೇವು ಬ್ಯಾಂಕ್, ದನ ಕರುಗಳ ರಕ್ಷಣೆಗಾಗಿ ಗೋ ಶಾಲೆ ಪ್ರಾರಂಭಕ್ಕೆ ಆದ್ಯತೆ ನೀಡಬೇಕು. ಈ ಕಾರ್ಯದಲ್ಲಿ ವಿಫಲವಾಗುವ ತಾಲೂಕಿನ ಕಾರ್ಯನಿರ್ವಾಹಕ ಅಧಿ ಕಾರಿಗಳನ್ನು ಅಮಾನತು ಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು. ಬರಗಾಲ ನಿರ್ವಹಣೆಯಲ್ಲಿ ಅನುದಾನದ ಅಗತ್ಯಕ್ಕೆ ಪ್ರಸ್ತಾವನೆ ಕಳುಹಿಸುವ ಜತೆಗೆ ಮುಖ್ಯ ಕಾರ್ಯದ ರ್ಶಿಯವರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದರು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ವೈದ್ಯರ ಹಾಜರಾತಿ, ಔಷಧಿಗಳ ಲಭ್ಯತೆ ಖಾತರಿಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಲೇವಾದೇವಿದಾರರ ದೌರ್ಜನ್ಯ: ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತ ರೈತರ ಕುಟುಂಬಗಳಿಗೆ ನಿಯಾಮಾವಳಿಗಳಂತೆ ಆದ್ಯತೆ ಮೇರೆಗೆ ಪರಿಹಾರ ಒದಗಿಸಬೇಕು. ಇಂತಹ ಪ್ರಕರಣಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣರಾಗುವ ಉಪ ವಿಭಾಗಾಧಿಕಾರಿ ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. ರಾಜ್ಯದಲ್ಲಿ ಈ ವರ್ಷ ರೈತರ ಆತ್ಮಹತ್ಯೆ 400ರ ಗಡಿ ತಲುಪಿದೆ. ಇದು ಅತ್ಯಂತ ಕಳವಳದ ಸಂಗತಿ. ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಬಹುತೇಕ ಪ್ರಕರಣಗಳಿಗೆ ಸಾಲಬಾಧೆ ಕಾರಣವಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇದಾರರ ದೌರ್ಜನ್ಯ ಹಾಗೂ ಕಿರುಕುಳದಿಂದ ರೈತರನ್ನು ರಕ್ಷಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿಗಳ ಮೇಲಿದೆ.
ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2013-14 ನೇ ಸಾಲಿನ ರೂ. 100 ಬಾಕಿ ಪಾವತಿಸದ ಮೊತ್ತವನ್ನು 15 ಕಾರ್ಖಾನೆ ಗಳಲ್ಲಿ ದಾಸ್ತಾನು ಇಟ್ಟಿರುವ ಕಬ್ಬಿನ ಪಾವತಿಗೆ ಸೂಚಿಸಿದರು. ಪ್ರತಿ ತಿಂಗಳೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ
ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ. ಇದರಿಂದ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಜನಸಾಮಾನ್ಯರು ಅನಗತ್ಯವಾಗಿ ರಾಜ್ಯದ ರಾಜಧಾನಿಗೆ ಬರುವುದನ್ನು ತಡೆಯಬಹುದಾಗಿದೆ. ಇದರಿಂದ ಜನಸಾಮಾನ್ಯರ ಹಣ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಸಚಿವರಾದ ಆರ್.ವಿ. ದೇಶಪಾಂಡೆ, ಶ್ರೀನಿವಾಸ ಪ್ರಸಾದ್, ಟಿ.ಬಿ. ಜಯಚಂದ್ರ, ಕೆ.ಜೆ. ಜಾರ್ಜ್, ಎಚ್. ಕೆ. ಪಾಟೀಲ್, ಎಂ. ಬಿ. ಪಾಟೀಲ್, ಆರ್. ರೋಷನ್ ಬೇಗ್, ಎಚ್.ಎಸ್. ಮಹದೇವ ಪ್ರಸಾದ್, ಡಾ ಎಚ್. ಸಿ. ಮಹದೇವಪ್ಪ, ಎಚ್. ಆಂಜನೇಯ, ಬಿ. ರಮಾನಾಥ್ ರೈ, ಯು.ಟಿ. ಖಾದರ್, ಖಮರುಲ್ಲಾ ಇಸ್ಲಾಂ, ವಿನಯ ಕುಮಾರ್ ಸೊರಕೆ, ರಾಮಲಿಂಗಾ ರೆಡ್ಡಿ, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಾಬುರಾವ್ ಚಿಂಚನಸೂರು, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಅಪರ ಮುಖ್ಯ ಕಾರ್ಯದರ್ಶಿಗಳಾದ ಲತಾ ಕೃಷ್ಣರಾವ್, ರತ್ನ ಪ್ರಭ ಮತ್ತಿತರರು ಇದ್ದರು.