

ಕಲಬುರಗಿ: ಮುಂದಿನ ಹದಿನೈದು ದಿನಗಳಲ್ಲಿ ಸಿದ್ದರಾಮಯ್ಯ ಸಿ.ಎಂ ಹುದ್ದೆ ಕಳೆದುಕೊಳ್ಳಬಹುದೆಂದು ಹೆಚ್.ಡಿ.ಕೆ ಕಲಬುರಗಿಯಲ್ಲಿ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಕೈ ಗಡಿಯಾರದಂತಹ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗೆ, ವಾಚ್ ಸುದ್ದಿ ಚಿಕ್ಕದಲ್ಲ, ಅದು 70 ಲಕ್ಷ ರೂಪಾಯಿ ಬೆಲೆ ಬಾಳುವ ಕೈ ಗಡಿಯಾರದ ಹಿಂದೆ ದೊಡ್ಡ ಗುಟ್ಟು ಅಡಗಿದೆ ಎಂದು ಹೇಳಿದರು.
ಸಮಾಜವಾದಿ- ಲೋಹಿಯಾ ಸಿದ್ಧಾಂತದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳಿಗೆ 70 ಲಕ್ಷ ರು.ವಾಚ್ ನೀಡಿದವರು ಯಾರು, ಯಾಕೆ ಕೊಟ್ಟರು ? ಅನ್ನೋ ಮಾಹಿತಿ ಕಲೆ ಹಾಕುತ್ತಿದ್ದು ಇಷ್ಟರಲ್ಲೇ ಎಲ್ಲವನ್ನು ಬಹಿರಂಗ ಪಡಿಸುತ್ತೇವೆ. ಆಗ ಸಿಎಂ ತಮ್ಮ ಕುರ್ಚಿ ಕಳೆದುಕೊಂಡರೂ ಆಶ್ಚರ್ಯವಿಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಚಿವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಉಪ ಚುನಾವಣೆ ಗೆಲುವಿಗಾಗಿ ಇಡೀ ಸಚಿವ ಸಂಪುಟಕ್ಕೆ ಉಸ್ತುವಾರಿ ನೀಡಿದ್ದಾರೆ. ಇಷ್ಟೊಂದು ಸಮಯದಲ್ಲಿ ಕೇವಲ ವಾರಕ್ಕೆ ಒಂದು ದಿನ ರೈತರ ಬಗ್ಗೆ, ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಚಿವರು ಸಮಯ ನೀಡಿದ್ರೆ ಸಮಸ್ಯೆ ಅನ್ನೋದೆ ಇರುತ್ತಿರಲಿಲ್ಲ ಎಂದು ಟೀಕಿಸಿದರು.