

ಬೆಂಗಳೂರು: ರಾಜ್ಯಸಭೆ ಚುನವಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದ 8 ಜೆಡಿಎಸ್ ಶಾಸಕರನ್ನು ಇಂದು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಜೆಡಿಎಸ್ ವಕ್ತಾರ ರಮೇಶ ಬಾಬು ಹೇಳಿದ್ದಾರೆ.
ಎಂಟು ಮಂದಿ ಜೆಡಿಎಸ್ ಭಿನ್ನಮತೀಯ ಶಾಸಕರ ವಿರುದ್ಧ ಏನು ಶಿಸ್ತು ಕ್ರಮ ಜರುಗಿಸಬಹುದು ಎಂಬುದರ ಬಗ್ಗೆ ಅವಲೋಕನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾನೂನಿನಡಿಯಲ್ಲಿ ಅಗತ್ಯವಿರುವ ಕ್ರಮ ಕೈಗೊಳ್ಳಲು ತನಿಖಾ ಸಮಿತಿ ರಚಿಸಲಾಗುವುದು. ಭಿನ್ನಮತೀಯ ಶಾಸಕರೇ ತಮ್ಮ ಸ್ವಇಚ್ಚೆಯಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಅವಕಾಶವನ್ನು ಕೂಡಜ ನೀಡಲಾಗುವುದು ಎಂದು ರಮೇಶ್ ಬಾಬು ಹೇಳಿದ್ದಾರೆ.
ಬಂಡಾಯ ಶಾಸಕರು ಕಾಂಗ್ರೆಸ್ ಮುಖಂಡರನ್ನ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಅವರಿಗೆ ದೂರು ದಾಖಲಿಸಲಾಗುವುದು, ಜೊತೆಗೆ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇನ್ನು ಭಿನ್ನಮತೀಯರ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಎಚ್.ಸಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ 8 ಮಂದಿ ಶಾಸಕರನ್ನು ಅವರ ಪಾಡಿಗೆ ಬಿಡಲಾಗುವುದು, ಈ ಶಾಸಕರು ತಮಗಿಷ್ಟ ಬಂದ ಹಾಗೆ ಸ್ವತಂತ್ರ್ಯವಾಗಿರಲಿ , ತಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.