

ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಿರುವುದು ದುರಹಂಕಾರದ ಪರಮಾವಧಿಯಾಗಿದ್ದು, ಸೋಲಿನಿಂದ ಕಾಂಗ್ರೆಸ್ ನಾಯಕರು ಭಯಪಡಬಾರದು ಕಾಂಗ್ರೆಸ್ ನ ಗತಕಾಲದ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಭಾನುವಾರ ಹೇಳಿದ್ದಾರೆ.
5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿರುವ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಿಡಿಕಾರಿರುವ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಕಾರ್ಯಕರ್ತರಿಗಾಗಿ 2 ಪುಟಗಳ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲಿ ಬಿಜೆಪಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹದಿನೇಳೂವರೆ ಕೋಟಿ ಮತ ಪಡೆದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ 13 ಕೋಟಿ ಮಂದಿ ಮತ ಹಾಕಿದ್ದಾರೆ. ಹೀಗಿರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ 5 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 137 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಆದರೆ, ಬಿಜೆಪಿ ಸ್ವಂತ ಬಲದ ಮೇಲೆ ಕೇವಲ 67 ಸ್ಥಾನಗಳನ್ನು ಪಡೆದಿದೆ. ಆದರೂ ಬಿಜೆಪಿ ನಾಯಕರೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಹೀಗಿದ್ದರೂ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂದು ಹೇಳುತ್ತಿರುವುದು ದುರಹಂಕಾರದ ಪರಮಾವಧಿ. ಚುನಾವಣೆಯಲ್ಲಿ ಏಳು ಬೀಳು ಎಂಬುದು ಸಹಜ. ಯಾವುದೇ ಒಂದು ರಾಜಕೀಯ ಪಕ್ಷದ ಸೋಲು ಗೆಲವು ಎಂಬುದು ಇನ್ನೊಂದು ರಾಜಕೀಯ ಪಕ್ಷದ ಕೈಯಲ್ಲಿಲ್ಲ. ಇದನ್ನು ಬಿಜೆಪಿ ನಾಯಕರು ಅರಿಯಬೇಕು ಎಂದಿದ್ದಾರೆ.
ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಮಾತ್ರರೇ ಜವಾಬ್ದಾರರಲ್ಲ. ಈ ಸೋಲು ಇಡೀ ಪಕ್ಷದ ಜವಾಬ್ದಾರಿಯಾಗಿದೆ.
ಕಾಂಗ್ರೆಸ್ ಗೆ ಇಂದು ಎದುರಾಗಿರುವ ಪರಿಸ್ಥಿತಿ 1978ರಲ್ಲಿಯೂ ಇತ್ತು. ಅಂದು ಇಡೀ ದೇಶದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ 2 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಾಂಗ್ರೆಸ್ ನ ಅಧ್ಯಾಯ ಮುಗಿಯಿತು ಎಂದು ಹೇಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ದೇಶವನ್ನು ದಶಕಗಳ ಕಾಲ ಆಡಳಿತ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇದೀಗ ಎದುರಾಗಿರುವ ಸೋಲಿನಿಂದ ಯಾರೂ ಹೆದರಬೇಕಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಒಗ್ಗಟ್ಟಿನಿಂದ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸೋಣ. ಕಾಂಗ್ರೆಸ್ ನ ಗತಕಾಲದ ಇತಿಹಾಸವನ್ನು ಮರುಕಳಿಸೋಣ ಎಂದು ಹೇಳಿದ್ದಾರೆ.