ಧಾರವಾಡ: ನಮ್ಮ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಕೇವಲ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಮಾತ್ರವೇ ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ ಸಾಧನ ಸಮಾವೇಶ ಕಾರ್ಯಕ್ರಮದಲ್ಲಿ ಮತಾನಾಡಿರುವ ಅವರು, ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ದ ಕೇವಲ ನಕಾರಾತ್ಮಕ ಪ್ರತಿಕ್ರಿಯೆಗಳನ್ನಷ್ಟೇ ನೀಡುತ್ತಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ನಮ್ಮ ಸರ್ಕಾರ ಮಾಡಿರುವ ಸಾಧನೆ ಹಾಗೂ ಪ್ರಗತಿಗಳ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸಾರ್ವಜನಿಕ ವೇದಿಕೆಗೆ ಬರಬೇಕು ಎಂದು ಹೇಳಿದ್ದಾರೆ.
2013ರ ಚುನಾವಣಾ ಪ್ರಚಾರದ ವೇಳೆ ಮಾಡಲಾಗಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದೆ. ಅಲ್ಲದೆ, ಬಡವರಿಗೆ ಸಹಾಯವಾಗಲೆಂದು ಇಂದಿರಾ ಕ್ಯಾಂಟೀನ್, ಮಾತೃ ಪೂರ್ ಹಾಗೂ ಆರೋಗ್ಯ ಭಾಗ್ಯದಂತಹ ಹೊಸ ಯೋಜನೆಗಳನ್ನು ಕೈಗೊಂಡಿದೆ. ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ದ ಕೇವಲ ನಕಾರಾತ್ಮಕ ಪ್ರತಿಕ್ರಿಯೆಗಳನ್ನಷ್ಟೇ ನೀಡುತ್ತಿದ್ದಾರೆ. ಸರ್ಕಾರ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ಈ ಮೂಲಕ ಸವಾಲು ಹಾಕಲು ಇಚ್ಛಿಸುತ್ತೇನೆ. ಸರ್ಕಾರದ ಪ್ರಗತಿ ಕುರಿತಂತೆ ಚರ್ಚೆ ನಾವು ಸಿದ್ಧರಿದ್ದೇವೆ. ಶೆಟ್ಟರ್ ಅವರು ಬಹಿರಂಗ ಚರ್ಚೆ ಬರಲಿ ಎಂದಿದ್ದಾರೆ.
ನೀಡಿದ್ದ 165 ಭರವಸೆಗಳ ಪೈಕಿ ನಾವು 155 ಭರವಸೆಗಳನ್ನು ಪೂರ್ಣಗೊಳಿಸಿದ್ದೇವೆ. ಇದರಲ್ಲಿ ನಿಮಗೆ ಈಗಲೂ ಸಂಶಯವಿರುವುದೇ ಆದರೆ, ಚರ್ಚೆಗೆ ಬನ್ನಿ ಎಂದು ತಿಳಿಸಿದ್ದಾರೆ.
ಪಂಚೆ ಹಾಗೂ ಸೀರೆಯನ್ನು ವಿತರಿಸಿದ್ದೆ ಎಂದು ಯಾವಾಗಲೂ ಯಡಿಯೂರಪ್ಪ ಅವರು ಹೇಳುತ್ತಿರುತ್ತಾರೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ಅದನ್ನೇ ಮಾಡಿದ್ದರು, ಸಾರ್ವಜನಿಕರಿಗಾಗಿ ಏನನ್ನೂ ಮಾಡಿರಲಿಲ್ಲ. ತಾವು ಮಾಡಿದ್ದ ತಪ್ಪುಗಳಿಗಾಗಿ ಜೈಲು ಸೇರಿದ್ದರು.
ರೈತರ ಸಂಕಷ್ಟಗಳನ್ನು ನೀಗಿಸುವ ಸಲುವಾಗಿ ಸಾಲವನ್ನು ಮನ್ನಾ ಮಾಡಿದೆವು. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದು ರೈತರ ಸಾಲವನ್ನು ಮನ್ನಾ ಮಾಡುವ ಆಗತ್ಯವಿದೆ. ಈ ಬಗ್ಗೆ ನಾನು ಪ್ರಧಾನಮಂತ್ರಿ ನರೇಂದ್ರಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೆ. ಮಾತುಕತೆ ವೇಳೆ ಮೋದಿಯವರ ಬಳಿ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ, ಅವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಲಿಲ್ಲ. ಮೋದಿಯವರ ಮೇಲೆ ಒತ್ತಡ ಹೇರುವಂತೆ ಶೆಟ್ಟರ್ ಅವರ ಬಳಿಯೂ ಹೇಳಿದ್ದೆ. ಮೋದಿಯವರ ಬಳಿ ಶೆಟ್ಟರ್ ಕೇವಲ ಪ್ರತಿಮೆಯಷ್ಟೇ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಾದಾಯಿ ವಿವಾದ ಕುರಿತಂತೆ ಮಾತನಾಡಿರುವ ಅವರು, ಗೋವಾ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ. ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಲಿ ಎಂದಿದ್ದಾರೆ.
ಕೃಷ್ಣಾ ಮೇಲ್ಡಂಡೆ ಯೋಜನೆಗೆ ಶೀಘ್ರದಲ್ಲಿಯೇ ರೂ.55 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಮಲಪ್ರಭಾ ವ್ಯಾಪ್ತಿಯಲ್ಲಿ ಬರುವ ನರಗುಂದ, ರೋಣ, ನವಲಗುಂದ ಭಾಗದ ಕಾಲುವೆಗಳ ನವೀಕರಣಕ್ಕೆ ರೂ.1,100 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಕೆ.ಬಿ. ಕೋಳಿವಾಡ, ಸಚಿವ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ವಿನಯ್ ಕುಲಕರ್ಣಿ ರುದ್ರಪ್ಪ ಲಮಣಿ ಸೇರಿದಂತೆ ಇನ್ನಿತರೆ ಶಾಸಕರು ಹಾಗೂ ನಾಯಕರು ಹಾಜರಿದ್ದರು.