ಬೆಂಗಳೂರು: ಡಿ.ಕೆ.ಶಿವಕುಮಾರ್, ಆರ್.ಅಶೋಕ್, ಎಚ್.ಡಿ.ಕುಮಾರಸ್ವಾಮಿ ಯಾರಾದರೂ ಮುಖ್ಯಮಂತ್ರಿ ಆಗಲಿ ಅವರ ಹಾದಿ ಹೂವಿನ ಹಾಸಿಗೆಯಾಗಿರುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ಚಾಮರಾಜಪೇಟೆ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮನ್ನು ಸುಲಭವಾಗಿ ಮುಖ್ಯಮಂತ್ರಿ ಆಗಲು ಬಿಡುತ್ತಾರೆ ಎಂದು ತಿಳಿಯಬೇಡಿ. ಅದು ಅಷ್ಟು ಸುಲಭವಲ್ಲ ಎಂದು ಹೇಳಿದರು.
ರಾಜಕೀಯ ಜೀವನದಲ್ಲಿ ಮೊದಲಿನಿಂದಲೂ ಶಿಕ್ಷೆ ಅನುಭವಿಸುತ್ತಲೇ ಬಂದಿದ್ದೇನೆ. ಸಿಎಂ ಆಗುವುದು ಅಷ್ಟು ಸುಲಭವಲ್ಲ, ಡಿ.ಕೆ. ಶಿವಕುಮಾರ್, ಆರ್. ಅಶೋಕ್, ಕುಮಾರಸ್ವಾಮಿ ಸೇರಿದಂತೆ ಯಾರಾದ್ರೂ ಮುಖ್ಯಮಂತ್ರಿ ಆಗಲಿ. ಅವರರವರ ಹಣೆಬರಹ ಹೇಗಿದೆಯೋ.. ಅದೇ ಆಗಲಿದೆ ಎಂದರು.
ದೇವೇಗೌಡರ ಈ ಮಾತು ಕೇಳುತ್ತಿದ್ದಂತೆ ದೇವೇಗೌಡರ ಮುಖ ನೋಡಿ ಕೈ ಜೋಡಿಸಿ ನಮಸ್ಕರಿಸುತ್ತಲೇ ಡಿ.ಕೆ. ಶಿವಕುಮಾರ್ ಮುಗುಳ್ನಕ್ಕರು. ನಾನು ಅನುಭವಿಸಿದ್ದನ್ನೇ ಹೇಳ್ತಿದ್ದೀನಿ. ನಾವು ಎರಡನೇ ದರ್ಜೆಯಲ್ಲಿದ್ದೇವೆ. ನಮ್ಮನ್ನು ಮೊದಲ ದರ್ಜೆಗೆ ಹೋಗೋಕೆ ಬಿಡಲ್ಲ ಎಂದು ಹೇಳಿದರು. ಜೀವನದ ಕೊನೆ ದಿನಗಳಲ್ಲಿ ನಮ್ಮ ಒಕ್ಕಲಿಗ ಸಮಾಜ ಎಲ್ಲಿ ಸಾಗ್ತಿದೆ. ಕಾವೇರಿ ಕಣಿವೆಯಲ್ಲಿ ಜನರ ಪರಿಸ್ಥಿತಿ ಏನಾಗಿದೆ. ಕಾವೇರಿ ನದಿ ತೀರದಲ್ಲಿರುವ ಎರಡೂವರೆ ಕೋಟಿ ಜನರ ಬಗ್ಗೆ ಯೋಚಿಸ್ತಿದೀನಿ. ಆದರೆ ಕಾವೇರಿ ನೀರಿನ ಸಮಸ್ಯೆ ಪರಿಹಾರ ಮಾಡೋದು ನಮ್ಮಿಂದ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಕರೆ ಕೊಟ್ಟರು.
ಇದೇ ವೇಳೆ ಮಾತನಾಡಿದ ಡಿಕೆಶಿ ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನನಗೂ ಎಲ್ಲಾ ರೀತಿಯ ಪೆಟ್ಟುಗಳು ಬಿದ್ದಿವೆ. ಉಳಿ ಏಟು, ಅಗರಿ ಏಟು ಬಿದ್ದಿವೆ. ನಾನಾಗಿದ್ದಕ್ಕೆ ಏಟು ತಿಂದರೂ ಇಲ್ಲಿ ನಿಂತಿದ್ದೇನೆ. ಬೇರೆಯವರಾಗಿದ್ದರೆ ಏನಾಗುತ್ತಿತ್ತು? ಐ.ಟಿ ದಾಳಿಯಾದ ಕಷ್ಟ ಕಾಲದಲ್ಲಿ ಎಲ್ಲರೂ ನನ್ನ ಪರವಾಗಿ ನಿಂತಿದ್ದರು. ಅವರಿಗೆ ಧನ್ಯವಾದ ಎಂದರು.
ಡಿಕೆಶಿ ಮತ್ತು ದೇವೇಗೌಡರ ಕುಟುಂಬ ಹಲವು ವರ್ಷಗಳಿಂದ ರಾಜಕೀಯವಾಗಿ ಬದ್ಧ ವೈರಿಗಳೆಂದು ಗುರುತಿಸಿಕೊಂಡಿದ್ದಾರೆ, ಆದರೆ ಇತ್ತೀಚೆಗೆ ದೇವೇಗೌಡ ಕುಟುಂಬ ಡಿಕೆಶಿ ಪರ ಮೃದು ಧೋರಣೆ ತಳೆಯುತ್ತಿದೆ, ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದ ನಂತರ ಬಿಜೆಪಿ ಮುಖಂಡರು ಡಿಕೆಶಿ ರಾಜೀನಾಮೆಗೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರ ಸ್ವಾಮಿ ಬಿಜೆಪಿ ಅವರಿಗೆ ಶಿವಕುಮಾರ್ ಅವರ ರಾಜಿನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದರು.
ಸಮಾರಂಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಡಿಕೆಶಿ ನೇರವಾಗಿ ಪಕ್ಕದಲ್ಲೇ ಇದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಾಲಿಗೆರಗಿ ಆಶೀರ್ವಾದ ಪಡೆದರು.