ವರುಣಾದಲ್ಲಿ ವಿಜಯೇಂದ್ರಗೆ ತಪ್ಪಿದ ಟಿಕೆಟ್, ಬಿಜೆಪಿ ತಂತ್ರಗಾರಿಕೆಯೋ, ಅಧ್ವಾನವೋ?

ಪ್ರತಿಷ್ಟೆಯ ಕಣವಾಗಿದ್ದ ವರುಣಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ವಿಜಯೇಂದ್ರ ಅವರ ಕೈ ತಪ್ಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸ್ಪರ್ಧೆಯೊಂದಿಗೆ ಕುತೂಹಲ ಕೆರಳಿಸಿದ್ದ ವರುಣಾ ಕ್ಷೇತ್ರ ಮಾಜಿ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳೊಂದಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ವಿಜಯೇಂದ್ರ ಅವರ ಕೈ ತಪ್ಪಿದೆ.
ವಿಜಯೇಂದ್ರ ವರುಣಾ ಕ್ಷೇತ್ರದ ಅಭ್ಯರ್ಥಿ ಎಂಬ ಮಾತಿನಿಂದಲೇ ಭಾರಿ ಹುರುಪಿನಿಂದ ಕೆಲಸ ಮಾಡತೊಡಗಿದ್ದ ವಿಜಯೇಂದ್ರ ಬೆಂಬಲಿಗರು ಇದೀಗ ಅಭ್ಯರ್ಥಿ ಬದಲಾವಣೆಯಿಂದ ಪಕ್ಷದ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ನಿನ್ನೆ ಯಡಿಯೂರಪ್ಪ ಅವರು ಕಾರ್ಯಕ್ರಮದಲ್ಲಿ ಈ ವಿಚಾರ ಘೋಷಣೆ ಮಾಡುತ್ತಿದ್ದಂತೆಯೇ ಕಾರ್ಯಕರ್ತ ಆಕ್ರೋಶ ಭುಗಿಲೆದ್ದಿತ್ತು. ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಕುರ್ಚಿಗಳನ್ನು ಮುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಕೊನೆಯ ಕ್ಷಣದಲ್ಲಿ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ಕೆಲವರು ಚುನಾವಣಾ ತಂತ್ರಗಾರಿಕೆ ಎಂದರೆ, ಇನ್ನೂ ಕೆಲವರು ಇದು ಬಿಜೆಪಿ ಮತ್ತೊಂದು ಅಧ್ವಾನ ಎಂದು ಕಿಡಿಕಾರಿದ್ದಾರೆ. ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿನೊಂದಿಗೆ ವರುಣಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪಾಲಿಗೆ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿತ್ತು. ಅತ್ತ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಪಕ್ಷ ಎಲ್ಲಿಯೂ ವಿಜಯೇಂದ್ರ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡದೇ ಇದ್ದರೂ, ಹೈಕಮಾಂಡ್ ವಿಜಯೇಂದ್ರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದಲೇ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧೆ ಸಜ್ಜಾದರು.
ಇದಕ್ಕಾಗಿ ವರುಣಾದಲ್ಲಿ ಒಂದು ಮನೆಯನ್ನೂ ಕೂಡ ಬಾಡಿಗೆಗೆ ಪಡೆದು ವರುಣಾದಲ್ಲೇ ನೆಲೆಸಿದರು. ವರುಣಾದಲ್ಲೇ ವಿಜಯೇಂದ್ರ ನೆಲೆಸಿದ್ದು ಕಾರ್ಯಕರ್ತರ ಹುರುಪನ್ನು ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ರಾಜ್ಯದ 224 ಕ್ಷೇತ್ರಗಳ ಪೈಕಿ ಕೆಲವೇ ಕೆಲವು ಪ್ರತಿಷ್ಟಿತ ಕಣಗಳಲ್ಲಿ ವರುಣಾ ಕೂಡ ಸ್ಥಾನ ಪಡೆಯಿತು. ಅಂತಿಮ ಕ್ಷಣದಲ್ಲಿ ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿದರು. ಹಿಂದೆ ಸರಿದರು ಎನ್ನುವುದಕ್ಕಿಂತ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಎನ್ನಬಹುದು. ವಿಜಯೇಂದ್ರ ವಿರುದ್ಧದ ಈ ನಿರ್ಣಯದ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದ್ದು, ಆರ್ ಎಸ್ ಎಸ್ ಮುಖಂಡ ಸಂತೋಷ್ ಅವರಿಗೆ ಟಿಕೆಟ್ ಕೊಡಿಸಲು ವಿಜಯೇಂದ್ರ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂಬ ಮಾತು ಕೂಡ ಕೇಳಿಬಂದಿದೆ. 
ಒಟ್ಟಾರೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರಲ್ಲಿ ಬಿರುಕು ಉಂಟಾಗಿದ್ದು, ಬಿಜೆಪಿ ಹೇಗೆ ಕಾರ್ಯಕರ್ತರಲ್ಲಿನ ಬಿರುಕನ್ನು ಮುಚ್ಚಿಹಾಕುತ್ತದೆ ಮತ್ತು ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com