ಹಳೇ ಮೈಸೂರು ಭಾಗದಿಂದ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಲಿರುವ ಪ್ರಧಾನಿ ಮೋದಿಯವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆಯಲಿರುವ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ವಿಭಾಗೀಯ ಮಟ್ಟದ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಲಿದ್ದಾರೆ.
25 ಎಕರೆ ವಿಶಾಲ ಪ್ರದೇಶದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಗಳಿವೆ.
ಸಂತೇಮರಹಳ್ಳಿಯಿಂದ ಕರಾವಳಿಯ ಕಡೆಗೆ ಪ್ರಯಾಣ ಬೆಳೆಸಲಿರುವ ಮೋದಿಯವರು ಮಧ್ಯಾಹ್ನ 2.50ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಚುನಾವಣಾ ಪ್ರಚಾರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಒಟ್ಟು 50 ರಿಂದ 70 ಸಾವಿರದಷ್ಟು ಮಂದಿ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅಲ್ಲಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ತೆರಳಲಿರುವ ಮೋದಿಯವರು ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರು ಸೇರಿವ ನಿರೀಕ್ಷೆಯಿದ್ದು, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿ ಕಾರ್ಯಕ್ರಮವನ್ನು ಮುಗಿಸಿ ನೇರವಾಗಿ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.