

ಬೆಂಗಳೂರು: ವಿಧಾನಸೌಧದ ಮುಂದೆ ಕಾಂಗ್ರೆಸ್-ಜೆಡಿಎಸ್ ಗೆ ಪ್ರತಿಭಟನೆ ಮಾಡುವ ಮೂಲಕ ಕೆಟ್ಟ ಪರಂಪರೆಯನ್ನು ಹುಟ್ಟುಹಾಕಿದೆ. ಕಳೆದ ಮೂರು ತಿಂಗಳು ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದವರು ಇಂದು ಹೊಂದಾಣಿಕೆ ಮಾಡಿಕೊಂಡ ಮೇಲೆ ಯಾವ ನೈತಿಕತೆ ಉಳಿದಿದೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು. ತಮ್ಮನ್ನು ಜನರು ಏಕೆ ತಿರಸ್ಕರಿಸಿದರು, ಹಲವು ಭಾಗ್ಯ ಯೋಜನೆಗಳನ್ನು ಪ್ರಕಟಿಸಿದರೂ ಕೂಡ ಅದು ಜನರ ಮನಗೆಲ್ಲುವಲ್ಲಿ ಏಕೆ ವಿಫಲವಾಯಿತು ಎಂದು ಗೆದ್ದಿರುವ 78 ಶಾಸಕರನ್ನು ಕರೆದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಅದು ಬಿಟ್ಟು ಜೆಡಿಎಸ್ ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಹಿಂಭಾಗಿಲಿನಿಂದ ಬಂದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ಎರಡೂ ಪಕ್ಷಗಳಿಗೆ ನೈತಿಕತೆ, ನಾಚಿಕೆಯಿದ್ದರೆ, ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಗೌರವವಿದ್ದರೆ ವಿಧಾನಸಭೆಯಲ್ಲಿ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತು ತಮ್ಮ ಕರ್ತವ್ಯವನ್ನು ನಡೆಸಬೇಕು, ಪ್ರತಿಭಟನೆ ನಡೆಸುವ ನೈತಿಕತೆ ಉಳಿದಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಬಿಟೀಂ ಎಂದು ಹೀಯಾಳಿಸಿದ್ದ ಕಾಂಗ್ರೆಸ್ಸಿಗರು ಇಂದು ಕೈಕಟ್ಟಿಕೊಂಡು ಜೆಡಿಎಸ್ ಮುಂದೆ ಭಿಕ್ಷುಕರಂತೆ ನಿಂತಿದ್ದಾರೆ .2004ರಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ನ ಧರ್ಮಸಿಂಗ್ ಸರ್ಕಾರ 19 ತಿಂಗಳ ಕಾಲ ಆಡಳಿತ ನಡೆಸಿತು. ಆಗ ಜೆಡಿಎಸ್ ನವರೇ ಸರ್ಕಾರವನ್ನು ಮುರಿದುಹಾಕಿದರು. ಇಂದು ಕೂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ 3 ತಿಂಗಳು ಕೂಡ ಸರಿಯಾಗಿ ಆಡಳಿತ ನಡೆಸುವುದಿಲ್ಲ, ಐದು ವರ್ಷ ರಾಜ್ಯವನ್ನು ಲೂಟಿ ಮಾಡಿ ಅದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ ಎಂದರು.
ರಾಜ್ಯದ ಜನತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರ ತೀರ್ಪು ನೀಡಿದ್ದಾರೆ. ಸದನದಲ್ಲಿ ಬಹುಮತ ಸಾಬೀತುಪಡಿಸಿ ಐದು ವರ್ಷ ಸುಭದ್ರ ಸರ್ಕಾರ ನೀಡಲಿದೆ. ಕಾಂಗ್ರೆಸ್ ನ ಕುತಂತ್ರಕ್ಕೆ ಬಲಿ ಬೀಳಬಾರದು. ಸಂವಿಧಾನಬದ್ಧವಾಗಿ ಬಹುಮತ ಸಾಬೀತುಪಡಿಸಲು ಬಿಜೆಪಿಯ ಹಿರಿಯ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.