ರಾಜಕೀಯ

ಕಂಠೀರವ ಕ್ರೀಡಾಂಗಣ ಬದಲಿಗೆ ವಿಧಾನಸೌಧದ ಮುಂದೆ ಹೆಚ್'ಡಿಕೆ ಪ್ರಮಾಣ ವಚನ

ಕಂಠೀರವ ಕ್ರೀಡಾಂಗಣ ಬದಲಿಗೆ ವಿಧಾನಸೌಧದ ಮುಂದೆ ಹೆಚ್'ಡಿಕೆ ಪ್ರಮಾಣ ವಚನ
ಹೆಚ್.ಡಿ.ಕುಮಾರಸ್ವಾಮಿ
Published On :
ಬೆಂಗಳೂರು; ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಸ್ಥಳ ಇದೀಗ ಬದಲಾಗಿದ್ದು, ಕಂಠೀರನ ಕ್ರೀಡಾಂಗಣದ ಬದಲು ವಿಧಾನಸೌಧದ ಮುಂದೆಯೇ ಪ್ರತಿಜ್ಞೆ ಸ್ವೀಕರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. 
ವಿಧಾನಸೌಧದ ಮುಂದೆ ಕುಮಾರಸ್ವಾಮಿ ಒಬ್ಬರೇ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿದ ಬಳಿಕ ಅಧಿಕಾರ ಹಂಚಿಕೆ ಕುರಿತು ಒಮ್ಮತ ನಿರ್ಧಾರಕ್ಕೆ ಬಂದು ಸಂಪುಟ ವಿಸ್ತರಣೆ ನಡೆಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ. 
ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಕುಮಾರಸ್ವಾಮಿಯವರು ಬುಧವಾರ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ಈ ಮೊದಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಸ್ಥಳವನ್ನು ಬದಲಿಸಲಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವತನ ಸ್ವೀಕರಿಸಿದರೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ಮನಗಂಡು ಜನತೆಗೆ ಸಮಸ್ಯೆಯಾಗಬಾರದು ಎಂಬ ಉಧ್ದೇಶದಿಂದ ಸ್ಥಳ ಬದಲಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 
ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಸುಮಾರು 2 ಲಕ್ಷ ಮಂದಿ ಸೇರುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಹೇಳಿದ್ದಾರೆ. 
ಲಕ್ಷಾಂತರ ಮಂದಿ ಸೇರಿದರೆ ಸಮಸ್ಯೆಯಾಗುವುದರಿಂದ ಸಮಾರಂಭವನ್ನು ಕಂಠೀರವ ಕ್ರೀಡಾಂಗಣದಿಂದ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡಲು ಬಗ್ಗೆಯೂ ಚಿಂತನೆ ನಡೆಸಲಾಗಿತ್ತು. ಆದರೆ, ಭದ್ರತಾ ಸಮಸ್ಯೆ ಮತ್ತು ಅಲ್ಲಿಯೂ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆ ಹಿನ್ನಲೆಯಲ್ಲಿ ವಿಧಾನಸೌಧದ ಮುಂದೆ ಪ್ರತಿಜ್ಞಾವಿಧಿ ಸ್ವೀಕರಿಸಲು ಅಂತಿಮವಾಗಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. 
ನಿನ್ನೆಯಷ್ಟೇ ಕುಮಾರಸ್ವಾಮಿಯವರು ತಮಿಳುನಾಡಿನ ಶ್ರೀರಂಗಂ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 
ನಿನ್ನೆ ಸಂಜೆ ತಮಿಳುನಾಡಿನಲ್ಲಿನ ಶ್ರೀರಂಗಂ ದೇವಾಲಯಕ್ಕೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿಯವರೊಂದಿಗೆ ಸಹೋದರ ಹೆಚ್.ಡಿ.ರೇವಣ್ಣ ಅವರು ಸಾಥ್ ನೀಡಿದರು. ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಬೆಂಗಳೂರಿಗೆ ವಾಪಸ್ಸಾದರು. 
ತಮಿಳುನಾಡಿಗೆ ತೆರಳುವುದಕ್ಕೂ ಮುನ್ನ ಕುಮಾರಸ್ವಾಮಿಯವರು ಪಕ್ಷದ ಶಾಸಕರು ತಂಗಿರುವ ಬೆಂಗಳೂರಿನ ಮೆರಿಡಿಯನ್ ಹೋಟೆಲ್ ನಲ್ಲಿ ಸಭೆ ನಡೆಸಿದರು. ಸರ್ಕಾರ ರಚನೆ ಕುರಿತು ಶಾಸಕರ ಬಳಿ ಮಾತುಕತೆ ನಡೆಸಿದರು. ಹಿರಿಯ ನಾಯಕರ ಬಳಿ ಹಲವು ಸಲಹೆಗಳನ್ನು ಸಹ ಪಡೆದುಕೊಂಡರು.
ಶಾಸಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಪದ್ಮನಾಭನಗರಕ್ಕೆ ತೆರಳಿ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿದರು. ಸೋಮವಾರ ದೆಹಲಿಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ನಡೆಸಬಹುದಾದ ಚರ್ಚೆ ಕುರಿತು ಸಮಾಲೋಚನೆ ನಡೆಸಿದರು. ರಾಜಕೀ ಬೆಳವಣಿಗೆ ಕುರಿತು ಮಾತುಕತೆ ನಡೆಸಿ ಜೆಡಿಎಸ್ ನಡೆಯ ಬಗ್ಗೆ ಸಲಹೆಗಳನ್ನು ಪಡೆದುಕೊಂಡರು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.