ಇದು ಫುಟ್ಬಾಲ್ ಆಟವಲ್ಲ, ಚದುರಂಗದಾಟ; ಸಂದರ್ಶನದಲ್ಲಿ ಡಿಕೆ ಶಿವಕುಮಾರ್

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಯತ್ನದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇದರ ಎಲ್ಲಾ ಕ್ರೆಡಿಟ್'ನ್ನು ಕಾಂಗ್ರೆಸ್ ಪಾಲಿಗೆ ಸಾರ್ವಕಾಲಿಕ ಆಪ್ತರಕ್ಷಕೆರೆಂದೇ ಹೇಳಲಾಗುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ...
ಮಾಜಿ ಸಚಿವ ಡಿ.ಕೆ.ಶಿವಕುಮಾರ್
ಮಾಜಿ ಸಚಿವ ಡಿ.ಕೆ.ಶಿವಕುಮಾರ್
Updated on: 
ಬೆಂಗಳೂರು; ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಯತ್ನದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇದರ ಎಲ್ಲಾ ಕ್ರೆಡಿಟ್'ನ್ನು ಕಾಂಗ್ರೆಸ್ ಪಾಲಿಗೆ ಸಾರ್ವಕಾಲಿಕ ಆಪ್ತರಕ್ಷಕೆರೆಂದೇ ಹೇಳಲಾಗುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ. 
ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. 
ಕಾಂಗ್ರೆಸ್ ನಲ್ಲಿ ಎದುರಾಗುವ ಬಿಕ್ಕಟ್ಟು ಶಮನಗೊಳಿಸುವ ವ್ಯಕ್ತಿಯಾಗಿ ಮಾರ್ಪಟ್ಟಿದ್ದೀರಿ...
ಇದು ಮೊದಲನೇ ಬಾರಿ ಏನಲ್ಲ. ಈ ರೀತಿಯ ಜವಾಬ್ದಾರಿಯನ್ನು ಸಾಕಷ್ಟು ಬಾರಿ ನೀಡಲಾಗಿತ್ತು. ವಿಲಾಸ್ ರಾವ್ ದೇಶಮುಖ್ ಅವರಿಗೆ ಹಲವು ವರ್ಷಗಳ ಹಿಂದೆ ಸಹಾಯ ಮಾಡಿದ್ದೆ. ಇದಾದ ಬಳಿಕ ಗುಜರಾತ್ ರಾಜ್ಯದ ಶಾಸಕರು. ಈ ರೀತಿ ಹಲವು ಬಾರಿ ಮಾಡಿದ್ದೇನೆ. ಪಕ್ಷ ನಾಯಕತ್ವದ ವಿಶ್ವಾಸ ನನಗೆ ಅತ್ಯಂತ ಪ್ರಮುಖವಾದದ್ದು. ನಾನು ಅತೀ ದೊಡ್ಡ, ಹಿರಿಯ ನಾಯಕನೇನು ಅಲ್ಲ. ಆದರೆ, ನನ್ನ ಮೇಲೆ ಪಕ್ಷದ ನಾಯಕರಿಗೆ ವಿಶ್ವಾಸವಿದೆ. ಇದಕ್ಕೆ ನಾನೆಷ್ಟು ಬೆಲೆ ನೀಡುತ್ತೇನೆಂಬುದು ಪ್ರಮುಖವಾಗಿರುತ್ತದೆ. 
ಕಾಂಗ್ರೆಸ್ ಪಕ್ಷ ನಿಮ್ಮ ಮೇಲೆ ಇಷ್ಟೊಂದು ವಿಶ್ವಾಸವಿಡಲು ಕಾರಣ? 
ನಿಜಕ್ಕೂ ನನಗೆ ಗೊತ್ತಿಲ್ಲ. ಆದರೆ, ಅವರು ನನ್ನನ್ನು ನಂಬುತ್ತಾರೆ. ನನ್ನನ್ನು ಗೌರವಿಸುತ್ತಾರೆ. ಆದರೆ, ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ. ಗುಜರಾತ್ ರಾಜ್ಯದಲ್ಲಿ ಬಿಕ್ಕಟ್ಟು ಎದುರಾಗಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಲೀ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲೀ ಆಲ್ಲಿನ ಶಾಸಕರು ಕರ್ನಾಟಕಕ್ಕೆ ಬರುತ್ತಾರೆಂಬುದು ಗೊತ್ತಿರಲಿಲ್ಲ. ನನಗೆ ಜವಾಬ್ದಾರಿಯನ್ನು ನೀಡಿದ್ದಾಗ, ನಾನು ನನ್ನ ಕೆಲಸವನ್ನು ಮಾಡಿದ್ದೆ. 
ರಾಜ್ಯ ರಾಜಕೀಯ ಅತೀದೊಡ್ಡ ರಾಜಕೀಯ ಅತಂತ್ರವನ್ನು ಕಾಂಗ್ರೆಸ್ ಹೇಗೆ ನಿಭಾಯಿಸಿತು? 
ಕಾಂಗ್ರೆಸ್ ಬಳಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾ ಬಲವಿರಲಿಲ್ಲ. ಇದು ನಿಜ. ಆದರೆ, ಕರ್ನಾಟಕದಲ್ಲಿ ಜಾತ್ಯಾತೀಸ ಸರ್ಕಾರವನ್ನು ಇಡೀ ದೇಶ ಬಯಸಿತ್ತು. ಚುನಾವಣೆಗೂ ಮುನ್ನ ನಾವು ಮೈತ್ರಿ ಮಾಡಿಕೊಂಡಿರಲಿಲ್ಲ. ಆದರೆ, ದೇಶ ಹಾಗೂ ರಾಜ್ಯದ ಹಿತಾಸಕ್ತಿಗಾಗಿ ಜೆಡಿಎಸ್ ಜೊತೆಗೆ ಕೈಜೋಡಿಸಿ ಸರ್ಕಾರ ರಚನೆ ಮಾಡುವ ನಿರ್ಧಾರಕ್ಕೆ ಬಂದೆವು. ಬಹುಮತ ಸಿಗದಿದ್ದಾಗ ಕೂಡಲೇ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದರು. ಜೆಡಿಎಸ್'ಗೆ ಮುಖ್ಯಮಂತ್ರಿ ಸ್ಥಾನ ನೀಡಿದರೂ ಪರಿ ರಾಜ್ಯದಲ್ಲಿ ಜಾತ್ಯಾತೀತ ಸರ್ಕಾರ ರಚನೆಯಾಗಬೇಕೆಂದು ತಿಳಿಸಿದ್ದಾರೆ. 
ಸಂಪೂರ್ಣ ಫಲಿತಾಂಶ ಬರುವವರೆಗೂ ನಾವು ಕಾದು ಕುಳಿತಿರಲಿಲ್ಲ. ಫಲಿತಾಂಶ ಪ್ರಕಟವಾಗುತ್ತಿದ್ದ ಸಂದರ್ಭದಲ್ಲಿಯೇ ನಾವು ಜೆಡಿಎಸ್ ಬೆಂಬಲ ಕೇಳಿದ್ದೆವು. ಬಿಜೆಪಿ ಕೂಡ ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು. ಆದರೆ, ನಾವು ಅತ್ಯಂತ ವೇಗವಾಗಿ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದೆವು. ಸ್ವಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ವತಂತ್ರ ಶಾಸಕರನ್ನು ರಕ್ಷಣೆ ಮಾಡಿದ್ದೆ. ಇದು ಫುಟ್ಬಾಲ್ ಆಟವಲ್ಲ, ಚದುರಂಗದಾಟವಾಗಿತ್ತು. 
ಶಾಸಕರನ್ನು ಒಗ್ಗಟ್ಟನಿಂದಿ ಇರಿಸುವುದು ಅನುಭವ ಹೇಗಿತ್ತು?
ಅದು ಅತ್ಯಂತ ಕಠಿಣ ಹಾಗೂ ಸವಾಲಿನ ಕೆಲಸವಾಗಿತ್ತು. ಆನಂದ್ ಸಿಂಗ್ ಸೇರಿ ಬಿಜೆಪಿ ನಮ್ಮ ಇಬ್ಬರು ಶಾಸಕರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದಲ್ಲಿತ್ತು. ಆನಂದ್ ಸಿಂಗ್ ಅವರನ್ನು ಗೆಲ್ಲಿಸುವ ಸಲುವಾಗಿ ಅವರ ಕ್ಷೇತ್ರಕ್ಕೆ ರಾಹುಲ್ ಗಾಂಧಿಯವರನ್ನು ಕರೆದುಕೊಂಡು ಹೋಗಿದ್ದೆವು. ಬಳಿಕ ಪಕ್ಷದ ಪರವಾಗಿ ಅವರು ಇಲ್ಲ ಎಂದಾಗ ಸಾಕಷ್ಟು ಮುಜುಗರವಾಗಿತ್ತು. ಹೀಗಾಗಿ ವೈಯಕ್ತಿಕವಾಗಿ ಆನಂದ್ ಸಿಂಗ್ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಬಳಿಕ ಕಾಂಗ್ರೆಸ್ ಮರಳಿ ಬರುವುದಾಗಿ ಆನಂದ್ ಭರವಸೆ ನೀಡಿ, ನನ್ನನ್ನು ರಕ್ಷಣೆ ಮಾಡುವಂತೆ ತಿಳಿಸಿದ್ದರು. 

ಒಂದು ಸ್ಥಳದಲ್ಲಿಯೇ ಹಲವು ನಾಯಕರನ್ನು ಇರಿಸುವುದು ಸುಲಭದ ಕೆಲಸವಲ್ಲ. ಪ್ರಮುಖವಾಗಿ ವಿಶ್ವಾಸದ ಬಗ್ಗೆ ನಾಯಕರು ಪ್ರಶ್ನೆ ಮಾಡುತ್ತಿದ್ದ ಸಂದರ್ಭದಲ್ಲಿ. ಆದರೆ, ಪರಿಸ್ಥಿತಿಗಳು ಎದುರಾದಾಗ ನಾವು ಆ ಕೆಲಸವನ್ನು ಮಾಡಬೇಕಾಗುತ್ತದೆ. ಬಿಜೆಪಿ ನಾಯಕರು ಗೊಂದಲಗಳನ್ನು ಸೃಷ್ಟಿಸಲು ಯತ್ನ ನಡೆಸಿದ್ದರು. ಹಲವು ಶಾಸಕರನ್ನು ಖರೀದಿ ಮಾಡಲೂ ಯತ್ನ ನಡೆಸಿದ್ದರು. ಆದರೆ, ನಾವು ಅದಕ್ಕೆ ಆಸ್ಪದ ನೀಡಲಿಲ್ಲ. ಬಿಜೆಪಿ ವರ್ಚಸ್ಸು ರಾಷ್ಟ್ರೀಯ ಮಟ್ಟದಲ್ಲಿದ್ದು, ಅಧಿಕಾರ ಪಡೆಯಲು ಬಿಜೆಪಿ ಆತುರ ಪಡಬಾರದಿತ್ತು. 

2008ರಲ್ಲಿ ಆಪರೇಷನ್ ಕಮಲ ಮಾಡಿದ್ದ ಬಿಜೆಪಿ ಈ ಬಾರಿ ವಿಫಲವಾಗಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಸಂಖ್ಯಾ ಬಲ ಹಾಗೂ ಪರಿಸ್ಥಿತಿಗಳು ಅಂದಿಗೂ ಇಂದಿಗೂ ವ್ಯತ್ಯಾಸಗಳಿವೆ. ಕಳೆದ ಬಾರಿ ಸರ್ಕಾರ ಮಾಡಲು ನಾವೇ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆವು. ನಮ್ಮ ಪಕ್ಷ ಬಯಸಿದ್ದೇ ಆಗಿದ್ದರೆ, ಪಕ್ಷೇತರ ಸಹಾಯದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬಹುದಿತ್ತು. ಆದರೆ, ಅದಕ್ಕೆ ನಾವು ಅವಕಾಶಕೊಡಲಿಲ್ಲ. ಈ ಬಾರಿ ಶಾಸಕರ ಸಂಖ್ಯೆ ಕೂಡ ಹೆಚ್ಚಾಗಿ ಬೇಕಾಗಿದೆ. ಬಿಜೆಪಿ ತನ್ನ ಅಧಿಕಾರ ಬಳಸಿಕೊಂಡು ಅಧಿಕಾರಕ್ಕೆ ಬರಲು ಯತ್ನ ನಡೆಸುತ್ತಿದೆ. ಆದರೆ, ಇದೀಗ ಏನೇ ಆಗಿದ್ದರೂ ಅದು ರಾಜ್ಯಪಾಲರ ಕೆನ್ನೆಗೆ ಹೊಡೆದಂತಾಗಿದೆ. ಸುಪ್ರೀಂಕೋರ್ಟ್ ಎಲ್ಲವನ್ನು ಗಮಿಸುತ್ತಿದೆ. 

ಐಟಿ ದಾಳಿ ಬಿಜೆಪಿ ವಿರುದ್ಧ ವೈಯಕ್ತಿಕ ಹೋರಾಟ ನಡೆಸಲು ಕಾರಣವಾಯಿತೇ? 
ಒಂದು ರೀತಿಯಲ್ಲಿ ಹೇಳುವುದಾದರೆ, ಇದು ಸತ್ಯವಲ್ಲ. ಬಿಜೆಪಿಗಾಗಿ ಐಟಿ ಇಲಾಖೆ ಅಂತಹ ದೊಡ್ಡ ಸವಾಲನ್ನು ತೆಗೆದುಕೊಂಡಿರುವುದಿಲ್ಲ. ಕೇಂದ್ರ ಸರ್ಕಾರದ ಗಮನಕ್ಕೆ ತರೆದೆಯೇ ಸಚಿವರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಲು ಸಾಧ್ಯವಿಲ್ಲ. ನಾವು ಅನುಭವಿಸುತ್ತಿದ್ದ ಕಿರುಕುಳದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕೆಲ ಅಧಿಕಾರಿಗಳು ನನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಹಳ ಕೆಟ್ಟದಾಗಿ ವರ್ತಿಸಿದ್ದಾರೆ. ಹಿರಿಯ ಅಧಿಕಾರಿಗಳು ನನಗೆ ನ್ಯಾಯ ದೊರಕಿಸಿಕೊಡುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ, ಆವರೂ ಕೂಡ ಒತ್ತಡದಲ್ಲಿಯೇ ಇದ್ದಾರೆ. 

ಅಮಿತ್ ಶಾ ಮತ್ತು ನರೇಂದ್ರ ಮೋದಿ ವಿರುದ್ಧ ನಿಲ್ಲುವುದಿಲ್ಲವೇ?
ಅಮಿತ್ ಶಾ ಮತ್ತು ನರೇಂದ್ರ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅದನ್ನು ಮಾಡುವ ಅಧಿಕಾರ ಕೂಡ ನನಗೆ ಇಲ್ಲ. ಆದರೆ, ಅವರ ರಾಜಕೀಯ ಆಲೋಚನೆಗಳು ಏನೇ ಇದ್ದರೂ, ಅದು ರಾಜ್ಯದಲ್ಲಿ ಕೆಲಸಕ್ಕೆ ಬರುವುದಿಲ್ಲ. ರಾಜ್ಯ ಜನತೆ ಶಾಂತಿ-ಪ್ರೀತಿಯುಳ್ಳವರಾಗಿದ್ದಾರೆ. 

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತಪ್ಪು ಮಾಡಿದ್ದು ಎಲ್ಲಿ? ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯುಂಟಾಯಿತೇ? 
ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಆದರೆ, ಪಕ್ಷದಲ್ಲಿರುವ ಪ್ರತೀಯೊಬ್ಬರೂ ಹಾಗೂ ಹೈ ಕಮಾಂಡ್ ಸಿದ್ದರಾಮಯ್ಯ ಅವರ ಮೇಲೆ ಸಾಕಷ್ಟು ನಂಬಿಕೆಯನ್ನಿಟ್ಟಿತ್ತು. ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬಲವನ್ನು ನೀಡಿತ್ತು. ಎಲ್ಲಿ ಹಾಗೂ ಏಕೆ ತಪ್ಪಾಯಿತು ಎಂಬುದನ್ನು ಕಂಡು ಹಿಡಿದು, ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಫಲಿತಾಂಶವೇ ಎಲ್ಲವನ್ನು ಹೇಳಲಿದೆ. 

ಕುಮಾರಸ್ವಾಮಿ ಹಾಗೂ ದೇವೇಗೌಡ ಅವರ ನಡುವೆ ನಿಮಗಿರುವ ವೈಯಕ್ತಿಕ ದ್ವೇಷ ಗೌಪ್ಯವಾಗಿಲ್ಲ. ಹೀಗಿರುವಾಗ ಅವರೊಂದಿಗೆ ಮೈತ್ರಿ ಸರ್ಕಾರದೊಂದಿಗೆ ಹೇಗೆ ಕೆಲಸ ಮಾಡುತ್ತೀರಿ? 
1985ರಿಂದಲೂ ದೇವೇಗೌಡ ಅವರ ವಿರುದ್ಧ ರಾಜಕೀಯವಾಗಿ ಹೋರಾಡುತ್ತಲೇ ಇದ್ದೇನೆ. ಹಲವು ಚುನಾವಣೆಯಲ್ಲಿ ದೇವೇಗೌಡ ವಿರುದ್ಧ ಸೋಲು ಕಂಡಿದ್ದೇವೆ. ಕುಮಾರಸ್ವಾಮಿ ವಿರುದ್ಧ ಗೆಲವನ್ನು ಪಡೆದಿದ್ದೇನೆ. ನಮ್ಮ ಮಧ್ಯೆ ಸಾಕಷ್ಟು ಭಿನ್ನತೆಗಳಿವೆ. ಆದರೆ, ರಾಜ್ಯ. ದೇಶ ಹಾಗೂ ಕಾಂಗ್ರೆಸ್ ಪಕ್ಷ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕಹಿಯನ್ನೂ ನುಂಗಲೇಬೇಕಿದೆ. ಎಲ್ಲವನ್ನು ಮರೆಯಲೇ ಬೇಕಿದೆ. ಪಕ್ಷ ನಮಗೆ ಮುಖ್ಯವಾಗಿದೆ. ಆ ರೀತಿ ನಡೆಯುವುದು ಕಷ್ಟ. ಅದು ನನಗೂ ಗೊತ್ತಿದೆ. ಆದರೆ, ಸಾರ್ವಜನಿಕರ ಕಣ್ಣಿನಿಂದ ನೋಡುವುದಾದರೆ, ಮುಂದಿನ ಹೆಜ್ಜೆಗಳ ಕುರಿತು ಆಲೋಚನೆ ನಡೆಸಬೇಕಿದೆ. 

ನೀವು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದಿರಿ. ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿಯಾಗುತ್ತಿರುವುದನ್ನು ಹೇಗೆ ಒಪ್ಪಿಕೊಂಡಿರಿ?
ಪಕ್ಷ ಮೊದಲೇ ನಿರ್ಧಾರ ಕೈಗೊಂಡಿದ್ದಾಗ, ಈ ಬಗ್ಗೆ ನಾನು ಯಾವ ಆಯ್ಕೆಯನ್ನು ತೆಗೆದುಕೊಳ್ಳಲು ಸಾಧ್ಯ? ಒಪ್ಪಿಕೊಳ್ಳುವುದನ್ನು ಬಿಟ್ಟು ನನಗೆ ಬೇರಾವುದೇ ಆಯ್ಕೆಗಳಿರಲಿಲ್ಲ. ಮುಖ್ಯಮಂತ್ರಿ ಸ್ಥಾನ ಕುರಿತು ನನ್ನ ಮೇಲೆ ಸಾಕಷ್ಟು ಒತ್ತಡಗಳಿವೆ. ಸಾಮೂಹಿಕ ನಿರ್ಧಾರ ಬಂದಾಗ, ವೈಯಕ್ತಿಕ ಹಿತಾಸಕ್ತಿಗಳು ಮೂಲೆಗುಂಪಾಗುತ್ತದೆ. ಇಲ್ಲಿ ನಾಯಕತ್ವವೇ ಮುಖ್ಯವಾಗುತ್ತದೆ. 

ಪಕ್ಷದಲ್ಲಿ ಹಾಗೂ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಭವಿಷ್ಯವೇನು? ಕೆಪಿಸಿಸಿ ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆಯೇ? 
ಪರಮೇಶ್ವರ ಅವರ ಅವಧಿ ಮುಗಿಯುವುದಕ್ಕೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಹರಿದಾಡುತ್ತಿದೆ. ಪರಮೇಶ್ವರ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ, ಈ ಹಿಂದಿದ್ದ ವ್ಯವಸ್ಥೆ ಮುಂದುವರೆಸಲು ಪಕ್ಷ ಬಯಸಿದೆ ಎಂದು ಅರ್ಥ. ನನಗೆ ಯಾವುದೇ ಆಯ್ಕೆಯಿಲ್ಲ. ಪಕ್ಷ ನಿರ್ಧಾರ ಕೈಗೊಂಡರೆ ಅದನ್ನು ಒಪ್ಪಿಕೊಂಡು ಕೆಲಸ ಮಾಡುತ್ತೇನೆಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com