

ಮೈಸೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಾಧನೆಯನ್ನು ಕೇವಲ 6 ತಿಂಗಳಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ಬಹು ನಿರೀಕ್ಷಿತ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ನಡೆಸಲಾಗುವುದು, ಅವರು ಪಂಚ ರಾಜ್ಯಗಳ ಚುನಾವಣೆಯಲ್ಲಿ ಸದ್ಯ ತೊಡಗಿಕೊಂಡಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರಕ್ಕೆ 6 ತಿಂಗಳು ಆಗಿದೆ, ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುತ್ತಿದೆ. ಸರ್ಕಾರದ ಸಾಧನೆಯನ್ನು ಇಷ್ಟು ಬೇಗನೆ ಅಳೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ಮೈಸೂರಿನಲ್ಲಿ ತಿಳಿಸಿದರು.
ಸಮನ್ವಯ ಸಮಿತಿ ನಿಗದಿಪಡಿಸಿದ ಮತ್ತು ಹಿಂದಿನ ತಮ್ಮ ಸರ್ಕಾರ ಹಾಕಿಕೊಂಡ ಯೋಜನೆಗಳನ್ನು ಈ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಚೆನ್ನಾಗಿದೆ ಎಂದು ಕೂಡ ಹೇಳಿದರು.
ಮೇ 23ರಂದು ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕಳೆದ ಶುಕ್ರವಾರ 6 ತಿಂಗಳ ಅವಧಿ ಪೂರೈಸಿದೆ.