ಬಿಜೆಪಿ ವಿರುದ್ಧ 'ದಂಗೆ' ಹೇಳಿಕೆ; ಸಿಎಂ ಸಮರ್ಥಿಸಿಕೊಂಡ ಉಪ ಮುಖ್ಯಮಂತ್ರಿ ಪರಮೇಶ್ವರ್
ಬಿಜೆಪಿ ವಿರುದ್ಧ ದಂಗೆ ಎಳುವಂತೆ ಮಾಡುತ್ತೇನೆಂದು ಹೇಳಿ ತೀವ್ರ ವಿರೋಧಗಳಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶನಿವಾರ ಸಮರ್ಥಿಸಿಕೊಂಡಿದ್ದಾರೆ...
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಕಾರವಾರ: ಬಿಜೆಪಿ ವಿರುದ್ಧ ದಂಗೆ ಎಳುವಂತೆ ಮಾಡುತ್ತೇನೆಂದು ಹೇಳಿ ತೀವ್ರ ವಿರೋಧಗಳಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶನಿವಾರ ಸಮರ್ಥಿಸಿಕೊಂಡಿದ್ದಾರೆ.
ಕುಮಾರಸ್ವಾಮಿಯವರ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿಯವರು ಬೇರೆಯದೇ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಹಿಂಸಾಚಾರ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸತತ ಯತ್ನ ನಡೆಸುತ್ತಿರುವುದರಿಂದ ಕೋಪದಲ್ಲಿ ಆ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಭ್ರಷ್ಟ ನೀತಿಗಳ ವಿರುದ್ಧ ಅವರು ಮಾತನಾಡಿದ್ದಾರೆ.
ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರನ್ನು ಖರೀದಿ ಮಾಡುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಯತ್ನ ಯಶಸ್ಸು ಕಾಣುವುದಿಲ್ಲ. ಸರ್ಕಾರ 5 ವರ್ಷಗಳ ಆಡಳಿತವನ್ನು ಖಂಡಿತವಾಗಿಯೂ ಪೂರೈಸುತ್ತದೆ. ಸರ್ಕಾರ ರಚನೆ ಮಾಡಲು ಜನರು ಯಾವುದೇ ಪಕ್ಷಕ್ಕೂ ಬಹುಮತವನ್ನು ನೀಡಿಲ್ಲ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಂದಕ್ಕೆ ಬಂದು ಸರ್ಕಾರವನ್ನು ರಚನೆ ಮಾಡಿದ್ದೇವೆ. ಪ್ರಸ್ತುತ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳು ಅಭಿವೃದ್ಧಿ ಕಾರ್ಯಗಳ ಮೇಲೆ ಯಾವುದೇ ರೀತಿಯ ಪರಿಣಾಮವನ್ನೂ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.