

ಇಂಡಿ: ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಹೋದದ್ದು, ರಾಜ್ಯದಲ್ಲಿನ ಪ್ರಸ್ತುತ ರಾಜಕೀಯಕ್ಕೆ ಕಾರಣವಾಗಿದ್ದು, ರಾಜ್ಯಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಯಶವಂತರಾಯ ಗೌಡ ಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೀಗೆ ಮುಂದುವರೆದರೆ ಮೈತ್ರಿ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳನ್ನು ನೋಡಲು ಸಾಧ್ಯವಿಲ್ಲ. ರಾಜಕೀಯ ವಲಯದಲ್ಲಿ ಹರಡುವ ವದಂತಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಕಾಲಹರಣ ಮಾಡದೆ ರಾಜ್ಯದ ಅಭಿವೃದ್ದಿ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕಾದ ಅಗತ್ಯ ಇದೆ ಎಂದರು.
ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ವಿಜಯಪುರ ಜಿಲ್ಲೆಗೆ ಭೇಟಿ ನೀಡಿಲ್ಲ. ಜಿ್ಲ್ಲೆಯ ಎಲ್ಲಾ ಐದು ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ.ಈ ವಲಯದ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಈ ಪ್ರದೇಶಗಳಿಗೆ ಭೇಟಿ ನೀಡಿ ಈ ಭಾಗದ ಜನರಿಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.