

ಬೆಳಗಾವಿ: ಮಹಾರಾಷ್ಟ್ರ ಮಹಾಭಾರತದಲ್ಲಿ ಸಾಕಷ್ಟು ಟ್ವಿಸ್ಟ್ ಗಳ ಬಳಿಕ ಬಿಜೆಪಿ-ಎನ್'ಸಿಪಿ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿದ್ದು, ಉಪಚುನಾವಣೆ ಆತಂಕದಲ್ಲಿರುವ ರಾಜ್ಯ ಬಿಜೆಪಿ ಪಾಳಯಕ್ಕೆ ಈ ಬೆಳವಣಿಗೆ ಸಾಕಷ್ಟು ಬಲ ನೀಡಿದಂತಾಗಿದೆ. ಇದೀಗ ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯಲಿರುವ ಕುರುಕ್ಷೇತ್ರಕ್ಕೆ ಬಿಜೆಪಿ ನಾಯಕರು ಸಿದ್ದರಾಗುತ್ತಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಶತಾಯಗತಾಯ ಯತ್ನದಲ್ಲಿರುವ ಬಿಜೆಪಿಯು ಆಶ್ಚರ್ಯಕರವೆಂಬಂತೆ ಇದೀಗ ಕಾಂಗ್ರೆಸ್ ನಾಯಕರನ್ನು ಕೈಬೀಸಿ ಕರೆಯುತ್ತಿದೆ.
ನಿನ್ನೆಯಷ್ಟೇ ಬಿಜೆಪಿ ಶಾಸಕರ ರಮೇಶ್ ಕತ್ತಿ ಮಾಲೀಕತ್ವದ ಐಷಾರಾಮಿ ಹೋಟೆಲ್ ನಲ್ಲಿ ಲಿಂಗಾಯತ ನಾಯಕ ಪ್ರಕಾಶ್ ಹುಕ್ಕೇರಿಯವರನ್ನು ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಈನಡುವೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಸಹೋದರಿ. ಅವರು ನಮ್ಮ ಬಿಜೆಪಿಗೆ ಬಂದರೆ ಸ್ವಾಗತ. ಉಪಚುನಾವಣೆ ಬಳಿಕ ಮತ್ತಷ್ಟು ಜನ ಕಾಂಗ್ರೆಸ್ ನಿಂದ ಬಿಜೆಪಿಗೆ ಬರಬಹುದು. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಹೆಬ್ಬಾಳ್ಕರ್"ಗೆ ಮನವರಿಕೆಯಾಗಿರಬಹುದು. ಅಲ್ಲಿನ ವಾತಾವಣ ನೋಡಿ ಬಿಜೆಪಿಗೆ ಬಂದರೆ ಒಳ್ಳೆ ಭವಿಷ್ಯ ಎಂದು ಅನೇಕರು ತಿಳಿದಿದ್ದಾರೆ. ಹೀಗಾಗಿ ರಾಜಕೀಯ ಬದಲಿಸಬಲ್ಲೆ ಎಂಬ ಹೇಳಿಕೆಯನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 9 ರಂದು ಸರ್ಕಾರ ರಚಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದು, ಈ ಬಾರಿ ಸರ್ಕಾರವನ್ನು ಉಳಿಸಿಕೊಳ್ಳಲು ಇದೀಗ ಸಾಕಷ್ಟು ಲಿಂಗಾಯತ ಶಾಸಕರ ಬೆಂಬಲಗಳನ್ನು ಬಿಜೆಪಿ ಕೇಳಲು ಯತ್ನಿಸುತ್ತಿದೆ. ಕಾಗವಾಡ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿಯವರು ಜನಪ್ರಿಯ ನಾಯಕರಾಗಿದ್ದಾರೆ. ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹುಕ್ಕೇರಿಯವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು. ನಂತರ ಅವರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಇದೀಗ ಏಕಾಏಕಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಭೇಟಿ ಕುರಿತಂತೆ ಮಾತನಾಡಿದ ಹುಕ್ಕೇರಿಯವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆ. ಭೇಟಿ ವೇಳೆ ಚಿಕ್ಕೋರಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.